ಪೋರ್ಟ್-ಔ-ಪ್ರಿನ್ಸ್, ಹೈಟಿ: ಕೆರಿಬಿಯೆನ್ ಸಮುದ್ರದ ಇಸ್ಪೋನಿಯೋಲಾ ದ್ವೀಪದಲ್ಲಿರುವ ಹೈಟಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿ, ಸುಮಾರು 20 ದಿನಗಳಾಗಿದೆ. ಈವರೆಗೂ ಭೂಕಂಪದ ಪರಿಣಾಮಗಳು ಈ ಪುಟ್ಟ ರಾಷ್ಟ್ರ ಎದುರಿಸುತ್ತಲೇ ಬಂದಿದೆ. ಈಗಲೂ ಸಾವು, ನೋವಿನ ಪ್ರಮಾಣ ಮುಂದುವರೆಯುತ್ತಲೇ ಇದೆ.
ಈವರೆಗೆ ಸುಮಾರು 2,248 ಮಂದಿ ಭೂಕಂಪನದಿಂದ ಸಾವನ್ನಪ್ಪಿದ್ದಾರೆ ಎಂದು ಹೈಟಿಯ ನಾಗರಿಕ ರಕ್ಷಣಾ ಏಜೆನ್ಸಿ ಮಾಹಿತಿ ನೀಡಿದೆ. ಸೋಮವಾರ ರಕ್ಷಣಾ ಕಾರ್ಯಗಳನ್ನು ಅಂತ್ಯಗೊಳಿಸಿ, ಮಾತನಾಡಿದ ನಾಗರಿಕ ರಕ್ಷಣಾ ಏಜೆನ್ಸಿಯ ಅಧಿಕಾರಿಗಳು, 12,763 ಮಂದಿ ಭೂಕಂಪನದಿಂದ ಗಾಯಗೊಂಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
'329 ಮಂದಿ ಬಗ್ಗೆ ಮಾಹಿತಿ ಇಲ್ಲ'
ಆಗಸ್ಟ್ 14ರಂದು, 7.2 ತೀವ್ರತೆಯಲ್ಲಿ ಭೂಕಂಪ ಸಂಭವಿಸಿತ್ತು. ಭೂಕಂಪದ ನಂತರ ಸುಮಾರು 329 ಮಂದಿ ನಾಪತ್ತೆಯಾಗಿದ್ದು, ಈವರೆಗೆ ಅವರ ಸುಳಿವು ಸಿಕ್ಕಿಲ್ಲ ಎಂದು ನಾಗರಿಕ ರಕ್ಷಣಾ ಏಜೆನ್ಸಿ ಅಧಿಕೃತ ಹೇಳಿಕೆ ನೀಡಿದೆ. ಸೋಮವಾರ ಇಬ್ಬರು ಸಾವನ್ನಪ್ಪಿರುವ ವರದಿಯಾಗಿದ್ದು, ಅವರು ಭೂಕಂಪದಿಂದಲೇ ಸಾವನ್ನಪ್ಪಿದ್ದಾರೆಯೇ ಎಂಬುದನ್ನು ಸರ್ಕಾರ ಈವರೆಗೆ ದೃಢಪಡಿಸಿಲ್ಲ.
900 ಭೂಕಂಪಗಳು!
ಹೈಟಿ ದೇಶ ಭೂಕಂಪಗಳ ದೇಶ. ಅಲ್ಲಿ ಇತ್ತೀಚೆಗೆ ಅಧ್ಯಕ್ಷರನ್ನು ದುಷ್ಕರ್ಮಿಗಳು ಹತ್ಯೆ ಮಾಡುವ ಮೂಲಕ ರಾಜಕೀಯ ಅಸ್ಥಿರತೆಯೂ ಸ್ವಲ್ಪ ಮಟ್ಟಿಗೆ ಕಾಣಿಸಿಕೊಂಡಿತ್ತು. ಭೂಕಂಪಗಳ ವಿಚಾರಕ್ಕೆ ಬರುವುದಾದರೆ ಈವರೆಗೆ ಅಲ್ಲಿ 900ಕ್ಕೂ ಹೆಚ್ಚು ಭೂಕಂಪಗಳು ದಾಖಲಾಗಿವೆ. ಅವುಗಳಲ್ಲಿ ರಿಕ್ಟರ್ ಮಾಪಕದಲ್ಲಿ 3ಕ್ಕಿಂತ ಹೆಚ್ಚು ತೀವ್ರತೆ ಇರುವ ಭೂಕಂಪನಗಳು 400ಕ್ಕೂ ಹೆಚ್ಚು.
ಈ ಭೂಕಂಪನಿಂದಾಗಿ ಸುಮಾರು 53 ಸಾವಿರಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದೆ. 85 ಸಾವಿರಕ್ಕೂ ಹೆಚ್ಚು ಮಂದಿಯ ಮೇಲೆ ಭೂಕಂಪನ ದುಷ್ಪರಿಣಾಮ ಬೀರಿದೆ ಎಂದು ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ.
ಇದನ್ನೂ ಓದಿ: ತ್ರಿಪುರಾದಲ್ಲಿ ಬಿಜೆಪಿ, ಸಿಪಿಎಂ ನಡುವೆ ಘರ್ಷಣೆ: 12 ಮಂದಿಗೆ ಗಾಯ