ಲುಕೆವಿಲ್ಲೆ(ಅಮೆರಿಕ) : ಅರಿಜೋನಾ - ಮೆಕ್ಸಿಕೋ ಗಡಿಯಲ್ಲಿ ಅಂದರೆ ಲುಕೆವಿಲ್ಲೆ ಪಶ್ಚಿಮದಿಂದ 17 ಮೈಲಿ ದೂರದಲ್ಲಿ ಏಳು ವರ್ಷದ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಮೃತ ಬಾಲಕಿಯನ್ನು ಭಾರತೀಯ ಮೂಲದ ಗುರುಪ್ರೀತ್ ಕೌರ್ ಎಂದು ಗುರ್ತಿಸಲಾಗಿದೆ. ತನ್ನ ತಾಯಿ ಹಾಗೂ ಇತರ ನಾಲ್ವರೊಂದಿಗೆ ಪಯಣಿಸುತ್ತಿದ್ದ ಬಾಲಕಿಯನ್ನು ಸ್ಮಗ್ಲರ್ಗಳು ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಬಿಟ್ಟಿದ್ದರು.
ಆಘಾತಕಾರಿ ವಿಷಯ ಎಂದರೆ. ಬಾಲಕಿ ಗುರ್ಪ್ರೀತ್ ತಾಪಮಾನ ತಡೆಯಲಾಗದೇ ಸಾವನ್ನಪ್ಪಿರುವುದಾಗಿ ವೈದ್ಯಕೀಯ ಮೂಲಗಳು ತಿಳಿಸಿವೆ. ಲುಕೆವಿಲ್ಲೆಯಲ್ಲಿ ತಾಪಮಾನ 108 ಫ್ಯಾರನ್ಹೀಟ್ ದಾಟಿತ್ತು ಎನ್ನಲಾಗಿದೆ. ಈ ಹಿನ್ನೆಲೆ ಗುರುಪ್ರೀತ್ ಹೈಪರ್ಥರ್ಮಿಯಾದಿಂದ ಮೃತಪಟ್ಟಿದ್ದಾಳೆ ಎಂದು ಪಿಸಿಒಎಮ್ ನ ಚೀಫ್ ಮೆಡಿಕಲ್ ಆಫೀಸರ್ ಗ್ರೆಗ್ ಹೆಸ್ ತಿಳಿಸಿದ್ದಾರೆ.
ಗುರುಪ್ರೀತ್ ಹಾಗೂ ಅವಳ ತಾಯಿ ಸೇರಿ 5 ಭಾರತೀಯ ವಲಸೆಗಾರರ ಗುಂಪನ್ನು ಸ್ಮಗ್ಲರ್ ಗಳು ಜನನಿಬಿಡ ಪ್ರದೇಶವಾದ ಲುಕೆಮಿಯಾದಿಂದ 17 ಕಿ.ಮೀ ದೂರದಲ್ಲಿರುವ ಟಸ್ಕನ್ ನೈರುತ್ಯ ಭಾಗದಲ್ಲಿ ಮಂಗಳವಾರ ಸುಮಾರು ಬೆಳಗ್ಗೆ 10 ಗಂಟೆ ವೇಳೆಗೆ ಇಳಿಸಿ ಹೋಗಿದ್ದರು. ಮೃತ ಗುರುಪ್ರೀತ್ ತಾಯಿ ಮಗಳನ್ನು ಮತ್ತೊಬ್ಬ ಮಹಿಳೆಯೊಂದಿಗೆ ಅಲ್ಲಿಯೇ ಬಿಟ್ಟು ಉಳಿದವರೊಂದಿಗೆ ನೀರು ಹುಡುಕಿಕೊಂಡು ಹೋಗಿದ್ದರು.
ಆದರೆ, ಅವರು ಬರುವಷ್ಟರಲ್ಲಿ ಆ ಮಗು ಪ್ರಾಣ ಕಳೆದುಕೊಂಡಿದೆ. ಈ ಮಧ್ಯೆ ಈ ಮಗುವಿನ ಶವ ಬಾರ್ಡರ್ ಸೆಕ್ಯೂರಿಟಿ ಆಫಿಸರ್ಸ್ ಗಳಿಗೆ ಸಿಕ್ಕಿದೆ. ಬಾಲಕಿ ಸಾವಿಗೆ ಸ್ಮಗ್ಲರ್ಗಳೇ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಹಳಷ್ಟು ಭಾರತೀಯರು ಸೇರಿದಂತೆ ಏಷ್ಯನ್ನರು ಮೆಕ್ಸಿಕೋ ಮೂಲಕ ಅಮೆರಿಕವನ್ನ ಪ್ರವೇಶಿಸುತ್ತಾರೆ. ಸ್ಮಗ್ಲರ್ಗಳು ಇಂತಹ ಅಮಾಯಕರನ್ನ ಬಳಸಿಕೊಳ್ಳುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಪಮಾನ ಹೆಚ್ಚಳದ ಕಾರಣದಿಂದಲೇ ಈ ಮರಭೂಮಿ ಪ್ರವೇಶಿಸುವ ಬಹಳಷ್ಟು ವಲಸಿಗರು ಸಾವನ್ನಪ್ಪುತ್ತಾರೆ ಎಂದು ಅಮೆರಿಕದ ಗಸ್ತು ಪಡೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ವರ್ಷ ಸುಮಾರು 57 ವಲಸಿಗರು ಬಿಸಿಲಿನ ಬೇಗೆಯಿಂದ ಮೃತಪಟ್ಟಿದ್ದಾರೆ.