ವಾಷಿಂಗ್ಟನ್, ಅಮೆರಿಕ: ಕೊರೊನಾ ವೈರಸ್ ಅನ್ನು ಜೈವಿಕ ಆಯುಧವಾಗಿ ಅಭಿವೃದ್ಧಿಪಡಿಸಲಾಗಿಲ್ಲ ಎಂದು ಅಮೆರಿಕದ ಇಂಟೆಲಿಜೆನ್ಸ್ ಕಮ್ಯೂನಿಟಿಯ ಗುಪ್ತಚರ ಸಂಸ್ಥೆಯೊಂದು ಅಧ್ಯಕ್ಷ ಜೋ ಬೈಡನ್ಗೆ ಸಲ್ಲಿಸಿದ ವರದಿಯಲ್ಲಿ ಹೇಳಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಸುಮಾರು 17 ಗುಪ್ತಚರ ಇಲಾಖೆಗಳಿಗೆ ಕೊರೊನಾ ವೈರಸ್ನ ಮೂಲ ಪತ್ತೆ ಹಚ್ಚಲು ಆದೇಶಿಸಿದ್ದರು. ಈ ವೇಳೆ ಗುಪ್ತಚರ ಸಂಸ್ಥೆಯೊಂದು ಕೊರೊನಾ ಸೋಂಕನ್ನು ಜೈವಿಕಾಸ್ತ್ರವಾಗಿ ಅಭಿವೃದ್ಧಿಪಡಿಸಲಾಗಿಲ್ಲ ಎಂಬ ಮಾಹಿತಿ ನೀಡಿದೆ. ಈಗಲೂ ಕೊರೊನಾ ವೈರಸ್ ಮೂಲದ ಬಗ್ಗೆ ಅಮೆರಿಕದ ಇಂಟೆಲಿಜೆನ್ಸ್ ಕಮ್ಯೂನಿಟಿಯಲ್ಲಿ ಭಿನ್ನಾಭಿಪ್ರಾಯಗಳಿದ್ದು, ಹೆಚ್ಚು ಗುಪ್ತಚರ ಇಲಾಖೆಗಳು ಕೊರೊನಾ ವೈರಸ್ ಅನ್ನು ಜೈವಿಕಾಸ್ತ್ರವನ್ನಾಗಿ ಚೀನಾ ಅಭಿವೃದ್ಧಿಪಡಿಸಿಲ್ಲ ಎಂದು ಅಭಿಪ್ರಾಯಪಟ್ಟಿವೆ.
ಎರಡು ಗುಪ್ತಚರ ಸಂಸ್ಥೆಗಳು, ಕೊರೊನಾ ವೈರಸ್ನ ಮೂಲವನ್ನು ಪತ್ತೆ ಹಚ್ಚಲು ಸಾಕಷ್ಟು ಪುರಾವೆಗಳು ಇಲ್ಲ. ಈ ಪುರಾವೆಗಳಿಲ್ಲದ ಕಾರಣದಿಂದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬ ಮಾಹಿತಿಯನ್ನು ಹೊರಹಾಕಿವೆ.
ಇದರ ಜೊತೆಗೆ ಚೀನಾದ ಅಧಿಕಾರಿಗಳಿಗೆ ವೈರಸ್ ಬಗ್ಗೆ ಮೊದಲೇ ತಿಳಿದಿರಲಿಲ್ಲ ಎಂದು ಗುಪ್ತಚರ ಸಂಸ್ಥೆ ಅಭಿಪ್ರಾಯಪಟ್ಟಿದ್ದು, ಈ ಅಭಿಪ್ರಾಯಗಳೇ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಕೊರೊನಾ ಸೃಷ್ಟಿಸಿದ ಆರೋಪದ ವಿರುದ್ಧ ಬಳಕೆಯಾಗಲಿದೆ ಎನ್ನಲಾಗಿದೆ.
ಕೆಲವು ದಿನಗಳ ಹಿಂದೆ ಕೊರೊನಾ ವೈರಸ್ ಮೂಲದ ಬಗ್ಗೆ ಸಂಶೋಧನೆ ನಡೆಸಲು ಚೀನಾಗೆ ತೆರಳಿದ್ದ ವಿಶ್ವ ಆರೋಗ್ಯ ಸಂಸ್ಥೆಯ ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡದ ಸಂಶೋಧನೆ ಅಂತ್ಯಗೊಂಡಿದೆ ಎಂದು ಹೇಳಿತ್ತು. ಚೀನಾ ಅಧಿಕಾರಿಗಳು ಮಾಹಿತಿಯನ್ನು ಹಂಚಿಕೊಳ್ಳದ ಕಾರಣದಿಂದ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ, ಆದಷ್ಟು ಬೇಗ ವೈರಸ್ ರಹಸ್ಯವನ್ನು ಪತ್ತೆ ಹಚ್ಚುವ ಅವಕಾಶವೊಂದು ಮುಚ್ಚಲಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ: ಹೆಚ್ಚಿನ ಮಾಹಿತಿಯಿಲ್ಲದೇ ಕೊರೊನಾ ಮೂಲ ಪತ್ತೆ ಅಸಾಧ್ಯ: ಅಮೆರಿಕ ಇಂಟೆಲಿಜೆನ್ಸ್ ಕಮ್ಯೂನಿಟಿ