ವಾಷಿಂಗ್ಟನ್: ಹವಾಮಾನ ಬಿಕ್ಕಟ್ಟು ಅಮೆರಿಕದ ಹೋರಾಟ ಮಾತ್ರವಲ್ಲ. ಇದು ಜಾಗತಿಕ ಮಟ್ಟದ ಹೋರಾಟ ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಅಮೆರಿಕ ಕಾಂಗ್ರೆಸ್‌ನ ಜಂಟಿ ಅಧಿವೇಶನದಲ್ಲಿ ಪಾಲ್ಗೊಂಡು ತಮ್ಮ ಮೊದಲ ಭಾಷಣ ಮಾಡಿದ ಅವರು ಜಾಗತಿಕ ಹವಾಮಾನ ಕುರಿತು ಪ್ರಸ್ತಾಪಿಸಿದರು. ಅಮೆರಿಕ ಇಂಗಾಲದ ಹೊರಸೂಸುವಿಕೆಯ ಶೇಕಡಾ 15 ಕ್ಕಿಂತ ಕಡಿಮೆ ಇದ್ದರೆ, ವಿಶ್ವದ ಉಳಿದ ಭಾಗವು ಶೇಕಡಾ 85 ರಷ್ಟಿದೆ ಎಂದು ಅವರು ಹೇಳಿದರು. ಅದಕ್ಕಾಗಿಯೇ ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಮತ್ತೆ ಸೇರ್ಪಡೆಗೊಳ್ಳುವ ಬದ್ಧತೆಯನ್ನು ನಾನು ಉಳಿಸಿಕೊಂಡಿದ್ದೇನೆ ಎಂದು ಹೇಳಿದರು.
ಪ್ಯಾರಿಸ್ ಒಪ್ಪಂದವೇನು?
ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಸಹಿ ಹಾಕಿದರೆ, ಅವರ ಬಳಿಕ ಅಧಿಕಾರಕ್ಕೆ ಬಂದ ಡೊನಾಲ್ಡ್ ಟ್ರಂಪ್ ಅದನ್ನು ಹಿಂತೆಗೆದುಕೊಂಡರು. ಇದು ಅಮೆರಿಕದ ಕಲ್ಲಿದ್ದಲು ಗಣಿಗಾರರಿಗೆ ಮತ್ತು ಇಂಧನ ಉದ್ಯಮಕ್ಕೆ ಅಡ್ಡಿಯಾಗಿತ್ತು. ಜನವರಿಯಲ್ಲಿ ಅಧಿಕಾರ ವಹಿಸಿಕೊಂಡ ಕೂಡಲೇ ಬೈಡನ್ ಮತ್ತೆ ಈ ಒಪ್ಪಂದ ಸೇರಿಕೊಂಡಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ 100 ಮಿಲಿಯನ್ ಡಾಲರ್ ಮೌಲ್ಯದ ವೈದ್ಯಕೀಯ ಸಾಮಗ್ರಿ ಪೂರೈಸಲಿರುವ ಅಮೆರಿಕ
ಪ್ಯಾರಿಸ್ ಒಪ್ಪಂದದ ಪ್ರಕಾರ, ಜಗತ್ತಿನ ಪ್ರತಿ ದೇಶವು ತನ್ನದೇ ಆದ ಇಂಗಾಲ ಹೊರಸೂಸುವಿಕೆ-ಕಡಿತ ಗುರಿಗಳನ್ನು ಹೊಂದಿರಬೇಕು. ಜಾಗತಿಕ ತಾಪಮಾನ ಏರಿಕೆಯನ್ನು 2 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಗೊಳಿಸುವುದು ಒಪ್ಪಂದದ ಮುಖ್ಯ ಗುರಿಯಾಗಿದೆ.
"ವಿಶ್ವದ ಎಲ್ಲಾ ಪ್ರಮುಖ ಆರ್ಥಿಕತೆಗಳಾದ ಚೀನಾ, ರಷ್ಯಾ, ಭಾರತ, ಯುರೋಪಿಯನ್ ಯೂನಿಯನ್ ದೇಶಗಳಲ್ಲಿ ಹವಾಮಾನ ಶೃಂಗಸಭೆಯನ್ನು ಕರೆಯುವ ನನ್ನ ಬದ್ಧತೆಯನ್ನು ನಾನು ಉಳಿಸಿಕೊಂಡಿದ್ದೇನೆ. ನಾವು ಒಮ್ಮತದಿಂದ ಕೆಲಸ ಮಾಡಿದರೆ ಜಗತ್ತನ್ನು ಉಳಿಸಬಹುದು. ನಾವು ಲಕ್ಷಾಂತರ ಉದ್ಯೋಗಗಳನ್ನು, ಆರ್ಥಿಕ ಬೆಳವಣಿಗೆ ಮತ್ತು ಬೆಳೆಸುವ ಅವಕಾಶವನ್ನು ರಚಿಸಬಹುದು" ಎಂದು ಅವರು ಹೇಳಿದರು.
ಕಳೆದ ವಾರ ಅಧ್ಯಕ್ಷ ಬೈಡನ್, ಪ್ರಧಾನಿ ನರೇಂದ್ರ ಮೋದಿ ಸೇರಿ 40 ವಿಶ್ವ ನಾಯಕರು ಮೊದಲ ಹವಾಮಾನ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು.