ಬೀಜಿಂಗ್: ಚೀನಾ ತನ್ನ ರಾಷ್ಟ್ರೀಯ ದಿನದಂದು ವಿಶ್ವದ ಅತ್ಯಂತ ಶಕ್ತಿಶಾಲಿ ಡಿಎಫ್-41 ಖಂಡಾಂತರ ಶ್ರೇಣಿಯ ಕ್ಷಿಪಣಿಯನ್ನು ಅನಾವರಣಗೊಳಿಸಿದೆ.
ಡಿಎಫ್- 41 ಕ್ಷಿಪಣಿ ಭೂಮಿ ಮೇಲಿನ ಯಾವುದೇ ಕ್ಷಿಪಣಿಗಿಂತ ಅತ್ಯಂತ ಬಲಿಷ್ಠವಾಗಿದ್ದು, 9,320 ಮೈಲಿಗಳಷ್ಟು (15,000 ಕಿಲೋ ಮೀಟರ್) ದೂರದವರೆಗೂ ಕ್ರಮಿಸಬಲ್ಲದು. ಸ್ವತಂತ್ರವಾಗಿ 10 ಪರಮಾಣು ಸಿಡಿತಲೆಗಳನ್ನು ಸಾಗಿಸುವ ಸಾಮರ್ಥ್ಯವಿರುವ ಈ ಕ್ಷಿಪಣಿ 30 ನಿಮಿಷಗಳಲ್ಲಿ ಅಮೆರಿಕ ತಲುಪಬಲ್ಲದು ಎಂದು ಸೆಂಟರ್ ಫಾರ್ ಸ್ಟ್ರಾಟೆಜಿಕ್ ಆ್ಯಂಡ್ ಇಂಟರ್ನ್ಯಾಷನಲ್ ಸ್ಟಡೀಸ್ ತಿಳಿಸಿದೆ.
ಚೀನಾ ತನ್ನ ಕಮ್ಯುನಿಸಂನ 70ನೇ ವಾರ್ಷಿಕೋತ್ಸವ ಆಚರಿಸುತ್ತಿದ್ದು, ರಾಷ್ಟ್ರೀಯ ದಿನದ ಮೆರವಣಿಗೆಯ ವೇಳೆ ಹೊಸ ಮಿಲಿಟರಿ ಸಾಧನವಾದ ಡಿಎಫ್- 41 ಅನ್ನು ಮೊದಲ ಬಾರಿಗೆ ಜಗತ್ತಿನ ಮುಂದೆ ಪ್ರದರ್ಶಿಸಿದೆ.
ಚೀನಾದ ಅಧ್ಯಕ್ಷ ಜಿನ್ಪಿಂಗ್ ಅವರು 4ನೇ ಬಾರಿಗೆ ಸೈನಿಕರ ಪಥ ಸಂಚಲನದ ಗೌರವ ವಂದನೆ ಸ್ವೀಕರಿಸಿದರು. ಇದಕ್ಕೂ ಮೊದಲು ಟಿಯಾನನ್ಮೆನ್ ಸ್ಕ್ವೇರ್ನಲ್ಲಿ ಮಾತನಾಡಿದ ಜಿನ್ಪಿಂಗ್, 'ಚೀನಾದ ಜನತೆ ಮತ್ತು ಚೀನಾ ರಾಷ್ಟ್ರ ಮುಂದೆ ಸಾಗುವುದನ್ನು ತಡೆಯಲು ಯಾವುದೇ ಬಲದಿಂದಲೂ ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.