ಒಟ್ಟಾವಾ(ಕೆನಡಾ): ಕೋವಿಡ್ ಲಸಿಕೆ ಮತ್ತು ಮಾರ್ಗಸೂಚಿಗಳ ವಿರುದ್ಧ ಕೆನಡಾದಲ್ಲಿ ಟ್ರಕ್ ಚಾಲಕರು ನಡೆಸುತ್ತಿರುವ ಬೃಹತ್ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಈ ಪ್ರತಿಭಟನೆಯನ್ನು ಹತ್ತಿಕ್ಕಲು ತುರ್ತು ಅಧಿಕಾರಗಳನ್ನು ಬಳಸುವುದಾಗಿ ಕೆನಡಾ ಅಧ್ಯಕ್ಷ ಜಸ್ಟಿನ್ ಟ್ರೂಡೋ ಘೋಷಿಸಿದ್ದಾರೆ.
ಈ ಮೂಲಕ 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತುರ್ತು ಅಧಿಕಾರವನ್ನು ಕೆನಡಾದಲ್ಲಿ ಬಳಸಲಾಗುತ್ತಿದೆ. 'ತುರ್ತು ಅಧಿಕಾರ'ದಲ್ಲಿ ಸೇನೆಯನ್ನು ಬಳಸುವ ವಿಚಾರವನ್ನು ಟ್ರೂಡೋ ತಳ್ಳಿಹಾಕಿದ್ದು, ಈ ಅಧಿಕಾರಕ್ಕೆ ಸೀಮಿತ ಸಮಯವಿದೆ. ದೇಶವ್ಯಾಪಿ ಸ್ಥಳಗಳಲ್ಲಿ ತುರ್ತು ಅಧಿಕಾರ ಬಳಸದೇ, ಕೆಲವೇ ಕೆಲವು ಸ್ಥಳಗಳಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ಸಮಯೋಚಿತ ರೀತಿಯಲ್ಲಿಗಿ ತುರ್ತು ಅಧಿಕಾರವನ್ನು ಬಳಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಟ್ರಕ್ ಚಾಲಕರಿಗೆ ಲಸಿಕೆ ಅಥವಾ ಕ್ವಾರಂಟೈನ್ ಆದೇಶವನ್ನು ವಿರೋಧಿಸಿ ಕೆನಡಾದ ಟ್ರಕ್ಕರ್‌ಗಳು ಜನವರಿ 28ರಂದು ಪ್ರಾರಂಭಿಸಿದ 'ಫ್ರೀಡಂ ಕಾನ್ವಾಯ್' ಪ್ರತಿಭಟನೆ ನಡೆಯುತ್ತಿರುವ ಸ್ಥಳಗಳಲ್ಲಿ ಮಾತ್ರವೇ ಈ ತುರ್ತು ಅಧಿಕಾರ ಬಳಕೆಯಾಗಲಿದೆ ಎಂಬುದು ಟ್ರೂಡೋ ಅವರ ಹೇಳಿಕೆಯಿಂದ ಸ್ಪಷ್ಟವಾಗಿದೆ.
ಕೆನಡಾದಲ್ಲಿ ತುರ್ತು ಅಧಿಕಾರಗಳು ಹೀಗಿರುತ್ತವೆ ಗೊತ್ತೇ?
- ಈ ತುರ್ತು ಅಧಿಕಾರ ಕೆನಡಾ ಸರ್ಕಾರಕ್ಕೆ ತಾತ್ಕಾಲಿಕ ಮತ್ತು ವಿಶೇಷ ಅಧಿಕಾರಗಳನ್ನು ನೀಡುತ್ತದೆ
- ಸಾರ್ವಜನಿಕ ಸಭೆ ಮತ್ತು ಪ್ರಯಾಣದ ಮೇಲೆ ವಿಶೇಷ ನಿರ್ಬಂಧಗಳನ್ನು ವಿಧಿಸುವ ಅಧಿಕಾರ
- ಸ್ಥಳೀಯ ಮತ್ತು ಪ್ರಾಂತೀಯ ಪೊಲೀಸರಿಗೆ ಸರ್ಕಾರ ಹೆಚ್ಚಿನ ಸಹಕಾರ ನೀಡುವ ಅಧಿಕಾರ
- ದೇಶದಲ್ಲಿ ಅಗತ್ಯ ಸೇವೆಗಳು ಯಾವುವು ಎಂಬುದನ್ನು ನಿರ್ಧರಿಸಲು ವಿಶೇಷ ಅಧಿಕಾರ
- ಕಾಯ್ದೆಯ ಉಲ್ಲಂಘನೆಗಳ ಮೇಲೆ ದಂಡವನ್ನು ವಿಧಿಸಲು, ದಂಡ ಹೆಚ್ಚಿಸಲು ಅಧಿಕಾರ
- ಯಾರಿಗಾದರೂ ಹಾನಿಯಾದರೆ, ಅವರಿಗೆ ಪರಿಹಾರ ಒದಗಿಸಲು ಯೋಜನೆ ರೂಪಿಸುವ ಅಧಿಕಾರ
ರಾಷ್ಟ್ರೀಯ ತುರ್ತು ಸಂದರ್ಭಗಳಲ್ಲಿ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ತಾತ್ಕಾಲಿಕ ಕ್ರಮಗಳನ್ನು ಜಾರಿಗೆ ತರಲು ಈ ವಿಶೇಷ ಅಧಿಕಾರ ನೀಡಲಾಗುತ್ತದೆ. ಈ ಕುರಿತು ಈಗಾಗಲೇ ವಿಶೇಷ ಸಭೆ ನಡೆಸಿರುವ ಕೆನಡಾ ಪ್ರಧಾನಿ, ಕೆಲವು ಕ್ರಮಗಳನ್ನು ತಿಳಿಸಿದ್ದಾರೆ.
ತುರ್ತು ಅಧಿಕಾರ ಬಳಸಿ, ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ?
- ನ್ಯಾಯಾಲಯದ ಆದೇಶವಿಲ್ಲದೇ 'ಶಂಕಿತರ' ಖಾತೆಗಳನ್ನು ಬ್ಯಾಂಕ್ಗಳು ಸ್ಥಗಿತಗೊಳಿಸಬಹುದು
- ಪ್ರತಿಭಟನೆಯಲ್ಲಿ ಬಳಸುವ ವಾಹನಗಳ ವಿಮೆಯನ್ನು ಸಹ ಅಮಾನತುಗೊಳಿಸಬಹುದು
- ಕೆನಡಾದ ಅಕ್ರಮ ಹಣವರ್ಗಾವಣಾ ನಿಯಂತ್ರಣ ಸಂಸ್ಥೆಯಾದ FINTRAC ಸಂಸ್ಥೆಗೆ ಹೆಚ್ಚಿನ ಅಧಿಕಾರ
- ಕ್ರೌಡ್‌ಫಂಡಿಂಗ್ ಪ್ಲಾಟ್‌ಫಾರ್ಮ್‌ಗಳು ಕಡ್ಡಾಯವಾಗಿ FINTRAC ಸಂಸ್ಥೆಯೊಂದಿಗೆ ನೋಂದಾಯಿಸಿಕೊಳ್ಳಬೇಕು.
- ಅನುಮಾನಾಸ್ಪದ ಚಟುವಟಿಕೆಗಳು ಕಂಡು ಬಂದರೆ FINTRAC ಕೂಡಲೇ ವರದಿ ಮಾಡಬೇಕು
ತುರ್ತು ಅಧಿಕಾರ ಜಾರಿ ಹೇಗೆ?
ಕೆನಡಾದ ಸಂಸತ್ತು ಸರ್ಕಾರವು ತುರ್ತು ಅಧಿಕಾರವನ್ನು ಜಾರಿಗೊಳಿಸಲು ಮಂಡನೆ ಮಾಡಿದ ಕಾಯ್ದೆಗೆ ಏಳು ದಿನಗಳಲ್ಲಿ ಅನುಮೋದನೆ ನೀಡಬೇಕು. ಆ ಕಾಯ್ದೆಯನ್ನು ಅನುಮೋದನೆ ಮಾಡಿದ ನಂತರವಷ್ಟೇ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಸಂಸತ್ತಿಗೆ ಕಾಯ್ದೆಯನ್ನು ಅನುಮೋದಿಸುವ ಅಧಿಕಾರ ಇರುವಂತೆ ರದ್ದುಗೊಳಿಸುವ ಅಧಿಕಾರವೂ ಇದೆ.
ಪ್ರಸ್ತುತ ಜಸ್ಟಿನ್ ಟ್ರೂಡೋ ಅವರ ಪಕ್ಷವಾದ ಲಿಬರಲ್ ಪಾರ್ಟಿ ಆಫ್ ಕೆನಡಾಗೆ ಹೆಚ್ಚಿನ ಬೆಂಬಲವಿಲ್ಲ. ಈ ಕಾಯ್ದೆ ಜಾರಿಗೊಳಿಸಲು ವಿಪಕ್ಷಗಳ ಸಹಕಾರ ಕೂಡಾ ಅಗತ್ಯವಾಗಿದೆ. ಈ ಕುರಿತು ನ್ಯೂ ಡೆಮಾಕ್ರಟ್ ಪಕ್ಷದ ನಾಯಕ ಜಗ್ಮೀತ್ ಸಿಂಗ್ ಪ್ರತಿಭಟನೆಯನ್ನು ಕೊನೆಗೊಳಿಸುವ ವಿಚಾರದಲ್ಲಿ ನಾವು ಕಾಯ್ದೆಯನ್ನು ಬೆಂಬಲಿಸುತ್ತೇವೆ ಎಂದಿದ್ದಾರೆ.