ವಾಷಿಂಗ್ಟನ್: ಆಮೆರಿಕದ ನೂತನ ಚುನಾಯಿತ ಅಧ್ಯಕ್ಷ ಜೋ ಬೈಡನ್ ತನ್ನ ನಾಯಿ ಮೇಜರ್ನೊಂದಿಗೆ ಆಟವಾಡುವ ಸಂದರ್ಭ ಬಲಗಾಲಿಗೆ ಗಾಯ ಮಾಡಿಕೊಂಡಿದ್ದಾರೆ. ನಾಯಿಯೊಂದಿಗೆ ಓಡುವ ಸಂದರ್ಭ ಬಲಗಾಲಿನಲ್ಲಿ ಉಳುಕು ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಳಿಕ ಆಸ್ಪತ್ರೆಗೆ ದಾಖಲಿಸಿ ಎಕ್ಸ್ರೇ ಮಾಡಿಸಲಾಗಿದ್ದು, ಯಾವುದೇ ಗಂಭೀರ ಸ್ವರೂಪದ ಗಾಯವಾಗಿಲ್ಲ ಎಂದು ತಿಳಿಸಿದ್ದಾರೆ.
ಬೈಡನ್ ಹೆಚ್ಚಿನ ಚಿಕಿತ್ಸೆಗಾಗಿ ಹಾಗೂ ವಿಶ್ರಾಂತಿ ಪಡೆಯುವ ಕಾರಣದಿಂದಾಗಿ ಅವರ ಕಚೇರಿ ಕಾರ್ಯಗಳಲ್ಲಿ ವಿಳಂಬವಾಗಲಿದೆ. ಇದಲ್ಲದೇ ಮೊದಲೇ ನಿಗದಿಯಾಗಿದ್ದ ಕಾರ್ಯಕ್ರಮದಲ್ಲೂ ಬದಲಾವಣೆ ನಿರೀಕ್ಷಿಸಬೇಕಿದೆ ಎಂದು ವಕ್ತಾರರು ತಿಳಿಸಿದ್ದಾರೆ.
78 ವರ್ಷದ ಬೈಡನ್ ಅಮೆರಿಕದ 46ನೇ ಅಧ್ಯಕ್ಷರಾಗಿ ಮುಂದಿನ ಜನವರಿ 20ರಂದು ಅಧಿಕೃತವಾಗಿ ಅಧಿಕಾರ ಪಡೆಯುವುದು ನಿಚ್ಚಳವಾಗಿದೆ. ಇದಕ್ಕೂ ಮೊದಲು ಡಾ. ಒ ಕೊನ್ನರ್, ಬೈಡನ್ ಆರೋಗ್ಯ ಉತ್ತಮವಾಗಿದೆ. ಅವರು ಫಿಟ್ ಅಂಡ್ ಫೈನ್ ಆಗಿದ್ದಾರೆ ಎಂದು ವರದಿ ನೀಡಿದ್ದರು. ಇದೀಗ ಕಾಲಿನ ಉಳುಕಿನ ಸಮಸ್ಯೆಯಿಂದಾಗಿ ವಿಶ್ರಾಂತಿ ಪಡೆಯುವುದು ಅನಿವಾರ್ಯವಾಗಿದೆ.