ವಾಷಿಂಗ್ಟನ್: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದ ತಾಲಿಬಾನ್ ಜೊತೆಗಿನ ಒಪ್ಪಂದದ ಪ್ರಕಾರ ಮೇ 1 ರೊಳಗೆ ಅಮೆರಿಕದ ಸೈನ್ಯವನ್ನು ಅಫ್ಘಾನಿಸ್ತಾನದಿಂದ ಹಿಂತೆಗೆದುಕೊಳ್ಳಬೇಕಿತ್ತು. ಆದರೆ ಈ ಗಡುವನ್ನು ಜೋ ಬೈಡನ್ ಸರ್ಕಾರ ತಿರಸ್ಕರಿಸಿದೆ.
"ಮೇ 1 ರ ಗಡುವನ್ನು ಯುದ್ಧತಂತ್ರದ ಕಾರಣಗಳ ಪ್ರಕಾರ ಪೂರೈಸುವುದು ಕಷ್ಟ. ಆ ಸೈನಿಕರನ್ನು ಹೊರಹಾಕುವುದು ಕಷ್ಟ. ನಾವು ನಮ್ಮ ಮಿತ್ರರಾಷ್ಟ್ರಗಳೊಂದಿಗೆ ಭೇಟಿಯಾಗುತ್ತಿದ್ದೇವೆ. ಸೈನ್ಯವನ್ನು ಹೊಂದಿರುವ ನ್ಯಾಟೋ ಮಿತ್ರರಾಷ್ಟ್ರಗಳ ಸಲಹೆ ಪಡೆಯುತ್ತೇವೆ. ಒಂದೊಮ್ಮೆ ನಾವು ಅಲ್ಲಿಂದ ಸೈನ್ಯವನ್ನು ಹಿಂಪಡೆದರೆ ಸುರಕ್ಷಿತ ಮತ್ತು ಕ್ರಮಬದ್ಧ ರೀತಿಯಲ್ಲಿ ಮಾಡಲಿದ್ದೇವೆ” ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.
ಗುರುವಾರ ಶ್ವೇತಭವನದ ಪೂರ್ವ ಕೊಠಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬೈಡನ್, ಅಫ್ಘಾನಿಸ್ತಾನದಲ್ಲಿ ಹೇಗೆ ಮುಂದುವರಿಯುವುದು ಎಂಬುದರ ಕುರಿತು ತಮ್ಮ ಆಡಳಿತವು ಮಿತ್ರರಾಷ್ಟ್ರಗಳು ಮತ್ತು ಪಾಲುದಾರರೊಂದಿಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳುತ್ತದೆ ಎಂದು ಹೇಳಿದ್ದಾರೆ.
ಯುಎಸ್ ವಿದೇಶಾಂಗ ಕಾರ್ಯದರ್ಶಿ ಟೋನಿ ಬ್ಲಿಂಕೆನ್ ಈ ವಾರ ಬ್ರಸೆಲ್ಸ್‌ನಲ್ಲಿ ನ್ಯಾಟೋ ಮಿತ್ರರಾಷ್ಟ್ರಗಳೊಂದಿಗೆ ಸಭೆ ನಡೆಸುತ್ತಿದ್ದಾರೆ. ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರ ಅಫ್ಘಾನಿಸ್ತಾನ ಭೇಟಿಯನ್ನು ಬೈಡನ್ ಉಲ್ಲೇಖಿಸಿದ್ದಾರೆ.