ವಾಷಿಂಗ್ಟನ್: ಅಮೆರಿಕದ ಬಳಿಕ ಅತಿ ಹೆಚ್ಚು ಕೋವಿಡ್-19 ಟೆಸ್ಟ್ ನಡೆದಿರುವುದು ಭಾರತದಲ್ಲಿ ಎಂದು ಶ್ವೇತ ಭವನ ಅಧಿಕೃತವಾಗಿ ಪ್ರಕಟಣೆ ಹೊರಡಿಸಿದೆ.
ಅಮೆರಿಕದಲ್ಲಿ ಇಲ್ಲಿಯವರೆಗೆ 42 ಮಿಲಿಯನ್ ಟೆಸ್ಟ್ ನಡೆಸಲಾಗಿದ್ದು, ಭಾರತದಲ್ಲಿ 12 ಮಿಲಿಯನ್ ಟೆಸ್ಟ್ ನಡೆಸಿದ್ದಾಗಿ ಹೇಳಿದೆ. ಯುಎಸ್ನಲ್ಲಿ 3.5 ಮಿಲಿಯನ್ ಜನರಲ್ಲಿ ಕೊರೊನಾ ಕಾಣಿಸಿಕೊಂಡಿದ್ದು, ಇಲ್ಲಿಯವರೆಗೆ 138,000 ಜನರು ಸಾವನ್ನಪ್ಪಿದ್ದಾರೆ. ಭಾರತದಲ್ಲಿ 10,03,832 ಕೋವಿಡ್ ಕೇಸ್ಗಳ ಪೈಕಿ 3,42,473 ಆ್ಯಕ್ಟೀವ್ ಕೇಸ್ಗಳಿದ್ದು, 25,602 ಜನರು ಸಾವನ್ನಪ್ಪಿದ್ದಾರೆ.
ಈ ವಿಷಯವಾಗಿ ಮಾತನಾಡಿರುವ ಶ್ವೇತ ಭವನದ ಕಾರ್ಯದರ್ಶಿ ಕೇಲು ಮ್ಯಾಕ್ ಎನಾನಿ, ಬೇರೆ ದೇಶದಲ್ಲಿ ನಡೆಯುತ್ತಿರುವ ಟೆಸ್ಟ್ಗಳಿಗಿಂತಲೂ ನಮ್ಮಲ್ಲಿ ಅತಿ ಹೆಚ್ಚು ಟೆಸ್ಟಿಂಗ್ ನಡೆಯುತ್ತಿದ್ದು, ಇದರ ನಂತರದ ಸ್ಥಾನದಲ್ಲಿ ಭಾರತವಿದೆ ಎಂದಿದ್ದಾರೆ.
ಹಿಂದಿನ ಹಾಗೂ ಈಗಿನ ಸರ್ಕಾರದ ಆಡಳಿತದಲ್ಲಿ ಭಿನ್ನತೆ ಇದ್ದು, 2009ರಲ್ಲಿ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ವಿಚಾರವಾಗಿ ಒಬಾಮಾ ಸರ್ಕಾರ H1N1 ಜ್ವರ ಪತ್ತೆ ಮಾಡುವ ಟೆಸ್ಟಿಂಗ್ ನಿಲ್ಲಿಸಿತ್ತು. ಆದರೆ ನಮ್ಮಲ್ಲಿ ಅದು ಮುಂದುವರೆದಿದ್ದು, ಸದ್ಯ ರೋಗಿಗಳಿಗೆ ವೆಂಟಿಲೇಟರ್ ಹಾಗೂ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರತಿ ದಿನ ಅತಿ ಹೆಚ್ಚು ಕೋವಿಡ್ ಟೆಸ್ಟ್ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕೋವಿಡ್ ಲಸಿಕೆ ಕಂಡು ಹಿಡಿಯುವ ಕಾರ್ಯ ಕೂಡ ಮುಂದುವರೆದಿದ್ದು, ಇದೀಗ ಮೂರನೇ ಹಂತದ ಪ್ರಯೋಗದಲ್ಲಿ ನಾವು ಮಗ್ನರಾಗಿದ್ದೇವೆ. ಒಂದು ವೇಳೆ ಇದರಲ್ಲಿ ನಾವು ಯಶಸ್ಸು ಸಾಧಿಸಿದರೆ ಹೊಸ ಇತಿಹಾಸ ರಚನೆ ಮಾಡಲಿದ್ದೇವೆ ಎಂದಿದ್ದಾರೆ.