ಕೀವ್( ಉಕ್ರೇನ್): ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿದಾಗಿನಿಂದ ಈ ವರೆಗೂ ತೊಂಬತ್ತೇಳು ಮಕ್ಕಳು ಮೃತಪಟ್ಟಿದ್ದಾರೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಮಂಗಳವಾರ ಕೆನಡಾದ ಸಂಸತ್ ಉದ್ದೇಶಿಸಿ ಮಾತನಾಡಿದ ಝೆಲೆನ್ಸ್ಕಿ ಈ ವಿಷಯ ತಿಳಿಸಿದರು. ಇದೇ ವೇಳೆ ರಷ್ಯಾ ವಿರುದ್ಧದ ಹೋರಾಟದಲ್ಲಿ ನಮಗೆ ಸಹಾಯ ಮಾಡಿ ಎಂದು ಕೆನಡಾ ಸೇರಿದಂತೆ ಐರೋಪ್ಯ ರಾಷ್ಟ್ರಗಳನ್ನು ಝೆಲೆನ್ಸ್ಕಿ ಕೇಳಿಕೊಂಡರು.
ವಿಡಿಯೋ ಕಾನ್ಫೆರೆನ್ಸ್ನಲ್ಲಿ ಮಾತನಾಡಿದ ಉಕ್ರೇನ್ ಅಧ್ಯಕ್ಷರು, ರಷ್ಯಾದ ಮಿಲಿಟರಿ ಎಲ್ಲವನ್ನು ನಾಶಪಡಿಸುತ್ತಿದ್ದು, ದೇಶದ ಸ್ಮಾರಕಗಳು, ಶಾಲೆ, ಆಸ್ಪತ್ರೆ, ವಸತಿ ಸಂಕೀರ್ಣಗಳನ್ನೂ ಬಿಡದಂತೆ ಕೆಡವಿ ಹಾಕುತ್ತಿದೆ ಎಂದು ಸಂಕಷ್ಟ ತೋಡಿಕೊಂಡರು. ಯುದ್ಧದ ವೇಳೆ 97 ಉಕ್ರೇನಿಯನ್ ಮಕ್ಕಳು ಭಯಾನಕ ಯುದ್ಧದಲ್ಲಿ ಅಸುನೀಗಿದ್ದಾರೆ ಎಂದು ಝೆಲೆನ್ಸ್ಕಿ ಹೇಳಿದರು.
ನಾವು ನಿಮ್ಮ ಬಳಿಯೇನು ಹೆಚ್ಚು ಕೇಳುತ್ತಿಲ್ಲ, ನ್ಯಾಯಕ್ಕಾಗಿ ನಿಜವಾದ ಬೆಂಬಲ ಕೇಳುತ್ತಿದ್ದೇವೆ. ರಷ್ಯಾ ವಿರುದ್ಧದ ಹೋರಾಟಕ್ಕೆ ನಿಮ್ಮ ಬೆಂಬಲ ನಮಗೆ ನಮ್ಮ ರಾಷ್ಟ್ರವನ್ನು ರಕ್ಷಣೆ ಮಾಡಿಕೊಳ್ಳಲು ನೀಡಿದ ಸಹಾಯ ಎಂದು ಭಾವಿಸುತ್ತೇವೆ ಎಂದು ಕೆನಡಾ ಸಂಸದರ ಬಳಿ ಉಕ್ರೇನ್ ಅಧ್ಯಕ್ಷರು ಮನವಿ ಮಾಡಿದರು.
ಝೆಲೆನ್ಸ್ಕಿ ಕೆನಡಾ ಸಂಸತ್ ಉದ್ದೇಶಿಸಿ ಮಾತನಾಡುವ ಮುನ್ನ, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ರಷ್ಯಾದ 15 ಅಧಿಕಾರಗಳ ವಿರುದ್ಧ ಹಲವು ನಿರ್ಬಂಧಗಳನ್ನು ಹೇರಿ ಆದೇಶಿಸಿದರು. ವ್ಲಾಡಿಮಿರ್ ಪುಟಿನ್ ಅವರ ಈ ರಣನೀತಿ ಸ್ವೀಕಾರಾರ್ಹವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿ:ಉಕ್ರೇನ್ನ ಕೀವ್ನತ್ತ ಹೊರಟ ಯೂರೋಪಿನ ಮೂರು ದೇಶಗಳ ಪ್ರಧಾನಿಗಳು