ಲೂಯಿಸಿಯಾನ (ಅಮೆರಿಕ): ಲೂಯಿಸಿಯಾನಲ್ಲಿರುವ ಗ್ರಾಂಬ್ಲಿಂಗ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಕಳೆದೊಂದು ವಾರದಲ್ಲಿ ಎರಡು ಬಾರಿ ಗುಂಡಿನ ದಾಳಿ ನಡೆದಿದ್ದು, ನಿನ್ನೆ ನಡೆದ ಘಟನೆಯಲ್ಲಿ ಮೊತ್ತೊಬ್ಬ ಮೃತಪಟ್ಟಿದ್ದಾನೆ. ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ವಿಶ್ವವಿದ್ಯಾಲಯ ಪೋಸ್ಟ್ ಮಾಡಿರುವಂತೆ, ಎರಡನೇ ದಾಳಿಯು ಭಾನುವಾರ ತಡರಾತ್ರಿ 1 ಗಂಟೆಗೆ ನಡೆದಿದೆ. ಸಾವನ್ನಪ್ಪಿದ ವ್ಯಕ್ತಿಯು ವಿಶ್ವವಿದ್ಯಾಲಯದಲ್ಲಿ ಪ್ರವೇಶಾತಿ ಪಡೆದ ವ್ಯಕ್ತಿಯಲ್ಲ. ಗಾಯಗೊಂಡ ವಿದ್ಯಾರ್ಥಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಆದರೆ, ಮೃತನ ಹಾಗೂ ಗಾಯಾಳುಗಳ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.
ಇದನ್ನೂ ಓದಿ: ತಂದೆಯ ಅಂತಿಮಯಾತ್ರೆಗೆ ಹೆಗಲಾಗಿ ಅಂತ್ಯಸಂಸ್ಕಾರ ಮುಗಿಸಿದ 'ವಿಶೇಷಚೇತನ' ಸಹೋದರಿಯರು
ಕಳೆದ ಬುಧವಾರಷ್ಟೇ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದರು. ದುಷ್ಕರ್ಮಿಗಳು ನಮ್ಮ ಸಂಸ್ಥೆಗೆ ಸೇರಿದವರಲ್ಲ ಎಂದು ವಿಶ್ವವಿದ್ಯಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ, ಘಟನೆ ಸಂಬಂಧ ಇನ್ನೂ ಯಾರನ್ನೂ ಪೊಲೀಸರು ಬಂಧಿಸಿಲ್ಲ. ತನಿಖೆ ಮುಂದುವರೆದಿದೆ. ಸದ್ಯ ಮುಂದಿನ ಆದೇಶದ ವರೆಗೆ ತರಗತಿಗಳನ್ನು ರದ್ದುಗೊಳಿಸಲಾಗಿದೆ.