ನ್ಯೂಯಾರ್ಕ್(ಅಮೆರಿಕ): ವಿಶ್ವದಾದ್ಯಂತ ಸುಮಾರು ನೂರು ಕೋಟಿ (ಒಂದು ಬಿಲಿಯನ್) ಮಕ್ಕಳು ಹವಾಮಾನ ಬಿಕ್ಕಟ್ಟಿನ ಪರಿಣಾಮಗಳ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಗುರುವಾರ ತನ್ನ ವರದಿಯಲ್ಲಿ ತಿಳಿಸಿದೆ.
ಹವಾಮಾನ ಬದಲಾವಣೆಯು ಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ರಕ್ಷಣೆಗೆ ಅಪಾಯವನ್ನು ಉಂಟುಮಾಡುತ್ತದೆ. ವಿಶೇಷವಾಗಿ ಮಧ್ಯ ಆಫ್ರಿಕಾದ ಗಣರಾಜ್ಯ, ಚಾಡ್, ನೈಜೀರಿಯಾ ಮತ್ತು ಇತರ ದೇಶಗಳ ಮಕ್ಕಳ ಮೇಲೆ ಹವಾಮಾನ ಬದಲಾವಣೆ ಗಂಭೀರ ಪರಿಣಾಮಗಳನ್ನು ಬೀರಿದೆ ಎಂದು ಯುನಿಸೆಫ್ ಮಾಹಿತಿ ನೀಡಿದೆ.
ಇದನ್ನೂ ಓದಿ: ಗುಲಾಬಿ ಬಣ್ಣಕ್ಕೆ ತಿರುಗಿದ ಅರ್ಜೆಂಟೀನಾದ ನದಿ : ಪರಿಸರ ಕಾರ್ಯಕರ್ತರ ಆಕ್ರೋಶ
ವಾಯು ಮಾಲಿನ್ಯ, ಜಲ ಮಾಲಿನ್ಯ, ತಾಪಮಾನ ಏರಿಕೆ, ಬಿಸಿ ಗಾಳಿ ಮತ್ತು ನೈಸರ್ಗಿಕ ವಿಕೋಪಗಳಾದ ಚಂಡಮಾರುತ, ಭೂಕಂಪ, ಪ್ರವಾಹಗಳು ಮಕ್ಕಳನ್ನು ಅಪಾಯಕ್ಕೆ ತಂದೊಡ್ಡುತ್ತದೆ. ಹವಾಮಾನ ವೈಪರೀತ್ಯ ಹೆಚ್ಚಾದಂತೆ ಅಪಾಯಕ್ಕೆ ಸಿಲುಕುವ ಮಕ್ಕಳ ಸಂಖ್ಯೆ ಕೂಡ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಯುನಿಸೆಫ್ ಎಚ್ಚರಿಸಿದೆ.
ಹವಾಮಾನ ಬದಲಾವಣೆಯಿಂದಾಗಿ ಮಕ್ಕಳು ವಿವಿಧ ಕಾಯಿಲೆಗಳಿಗೆ ಒಳಗಾಗಬೇಕಾಗುತ್ತದೆ. ಚಂಡಮಾರುತ, ಭೂಕಂಪ, ಪ್ರವಾಹಗಳಿಂದ ಪೋಷಕರನ್ನು ಕಳೆದುಕೊಂಡು ಬದುಕುವ ಮಕ್ಕಳ ವಿದ್ಯಾಭ್ಯಾಸ ನಿಂತು ಹೋಗುತ್ತದೆ. ಇವರ ರಕ್ಷಣೆಗೆ ಯಾರೂ ಇಲ್ಲದೆ ಮಕ್ಕಳು ಅನಾಥರಾಗಬೇಕಾಗುತ್ತದೆ.
ಇದನ್ನೂ ಓದಿ: ಕೊರೊನಾ ಬಳಿಕ 'ಹಸಿರು ಮನೆ' ಹಾಳು ಮಾಡೋದ್ರಲ್ಲೂ ಚೀನಾಗೆ ಜಾಗತಿಕವಾಗಿ ಅಗ್ರಸ್ಥಾನ
ಹೀಗಾಗಿ ಪರಿಸರ ಮಾಲಿನ್ಯ ತಡೆಗಟ್ಟಲು, ಹವಾಮಾನ ಬದಲಾವಣೆಯಾಗದಂತೆ ನೋಡಿಕೊಳ್ಳಲು ಮತ್ತು ಮಕ್ಕಳು ಇವುಗಳ ಅಪಾಯದಲ್ಲಿ ಸಿಲುಕದಂತೆ ಅಥವಾ ಸಿಲುಕಿದರೆ ಅದರಿಂದ ಬೇಗ ಹೊರಬರುವಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಎಲ್ಲಾ ದೇಶಗಳ ಸರ್ಕಾರಗಳಿಗೆ ಯುನಿಸೆಫ್ ಕರೆ ನೀಡಿದೆ.