ಇಸ್ಲಾಮಾಬಾದ್: ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನದ ಮಧ್ಯಂತರ ಸರ್ಕಾರದೊಂದಿಗೆ ಮಾತುಕತೆ ನಡೆಸಲು, ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಗುರುವಾರ ಕಾಬೂಲ್‌ಗೆ ಭೇಟಿ ನೀಡಿದ್ದು, ಐಎಸ್‌ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಸಹ ಅವರೊಂದಿಗೆ ಭೇಟಿ ನೀಡಿದ್ದಾರೆ.
ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನದ ನಿಯೋಗವನ್ನು ಅಫ್ಘಾನಿಸ್ತಾನದ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುಟ್ಟಾಕಿ ಸ್ವಾಗತಿಸಿದರು. ಇನ್ನು ಈ ಭೇಟಿ ಸಮಯದಲ್ಲಿ, ಪಾಕಿಸ್ತಾನದ ನಿಯೋಗವು ಮುಟ್ಟಾಕಿ ಅವರೊಂದಿಗೆ ಮಾತುಕತೆ ನಡೆಸುತ್ತಿದೆ.
ಎರಡೂ ಕಡೆಯ ನಡುವಿನ ಮಾತುಕತೆಯು ದ್ವಿಪಕ್ಷೀಯ ಸಂಬಂಧಗಳ ಬಲಪಡಿಸುವಿಕೆಯನ್ನ ಒಳಗೊಂಡಿರಲಿದೆ ಮತ್ತು ವಿವಿಧ ಪ್ರದೇಶಗಳಲ್ಲಿ ಸಹಕಾರವನ್ನು ಸಾಧಿಸುವ ಮಾರ್ಗಗಳು ಮತ್ತು ವಿಧಾನಗಳ ಮೇಲೆ ಕೇಂದ್ರೀಕೃತವಾಗಿದೆ ಎಂದು ಪಾಕ್ ವಿದೇಶಾಂಗ ಕಚೇರಿ ತಿಳಿಸಿದೆ.
ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯ ವಿಷಯಗಳಲ್ಲಿ ಪಾಕಿಸ್ತಾನದ ದೃಷ್ಟಿಕೋನವನ್ನು ವಿದೇಶಾಂಗ ಸಚಿವರು ಹಂಚಿಕೊಳ್ಳುತ್ತಾರೆ ಎಂದು ಅದು ಹೇಳಿದೆ. ನಿಕಟ ನೆರೆಯ ದೇಶವಾಗಿ ಪಾಕಿಸ್ತಾನ ಯಾವಾಗಲೂ ಅಫ್ಘಾನಿಸ್ತಾನಕ್ಕೆ ಬೆಂಬಲವಾಗಿ ನಿಂತಿದೆ ಎಂದೂ ತಿಳಿಸಿದೆ.
ಅಫ್ಘಾನ್ ಪ್ರಜೆಗಳಿಗೆ ಅನುಕೂಲವಾಗುವ ವೀಸಾ ಮತ್ತು ವ್ಯಾಪಾರ ಮತ್ತು ಸರಕುಗಳಿಗಾಗಿ ಗಡಿ ದಾಟುವ ಕಾರ್ಯ ವಿಧಾನಗಳನ್ನು ಸ್ಥಾಪಿಸಲಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಪಾಕಿಸ್ತಾನವು ಮಾನವೀಯ ನೆರವು ಮತ್ತು ಆಹಾರ ಪದಾರ್ಥಗಳು ಮತ್ತು ಔಷಧಗಳ ರೂಪದಲ್ಲಿ ಸಹಾಯವನ್ನು ಒದಗಿಸಿದೆ.