ಸ್ಟಾಕ್ ಹೋಮ್: 2019ರ ನೊಬೆಲ್ ಶಾಂತಿ ಪ್ರಶಸ್ತಿಗೆ ಇಥಿಯೋಪಿಯಾದ ಪ್ರಧಾನಿ ಅಬಿ ಅಹಮದ್ ಅಲಿ ಪಾತ್ರರಾಗಿದ್ದಾರೆ. ಎರಿಟ್ರಿಯಾದೊಂದಿಗಿನ ತನ್ನ ದೇಶದ ದೀರ್ಘಕಾಲದ ಗಡಿ ಸಂಘರ್ಷವನ್ನು ಕೊನೆಗೊಳಿಸಲು ಪ್ರಯತ್ನಿಸಿ ಶಾಂತಿ ಸ್ಥಾಪನೆಗಾಗಿ ಮಾಡಿದ ಕಾರ್ಯಕ್ಕೆ ಅವರಿಗೆ 2019 ರ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ.
ವ್ಯಾಪಕ ಪ್ರತಿಭಟನೆಗಳು ಹಾಗೂ ದೀರ್ಘಕಾಲದ ಆಡಳಿತ ಒಕ್ಕೂಟಕ್ಕೆ ಒತ್ತಡ ಹೇರಿದ ನಂತರ, ಅಬಿ ಅಹಮದ್ ಅಲಿ ಅಧಿಕಾರ ವಹಿಸಿಕೊಂಡು, ಇಥಿಯೋಪಿಯಾ ಮತ್ತು ಎರಿಟ್ರಿಯಾ ನಡುವಿನ 20 ವರ್ಷಗಳ ಯುದ್ಧವನ್ನು ಕೊನೆಗೊಳಿಸುವ ಗುರುತರ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.
ವಿವಾದಿತ ಗಡಿ ಪ್ರದೇಶದ ಈ ಯುದ್ಧ ಬಹುತೇಕ ಅರ್ಥಹೀನ ಎಂದು ಗಮನಿಸಿದ ಅವರು, ಇದರಿಂದ ಎರಡೂ ರಾಷ್ಟ್ರಗಳಿಗೆ ಭಾರಿ ಆರ್ಥಿಕ ಮತ್ತು ಮಾನವ ಸಂಪತ್ತಿನ ನಷ್ಟವಾಗುತ್ತದೆ ಎಂಬ ಸತ್ಯವನ್ನು ಅರಿತುಕೊಂಡಿದ್ದರು. ಬಳಿಕ ಎರಿಟ್ರಿಯನ್ ಪ್ರಧಾನಿ ಇಸಾಯಾಸ್ ಅಫ್ವೆರ್ಕಿ ಅವರೊಂದಿಗೆ ಶಾಂತಿ ಮತ್ತು ಸ್ನೇಹಕ್ಕಾಗಿ ಜಂಟಿ ಘೋಷಣೆಗೆ ಸಹಿ ಹಾಕಿದ್ದರು.
1998 ರಿಂದ 2000 ರವರೆಗೆ ಗಡಿ ಯುದ್ಧ ನಡೆಸಿದ ಇಥಿಯೋಪಿಯಾ ಮತ್ತು ಎರಿಟ್ರಿಯಾ ಹಲವು ವರ್ಷಗಳ ಹಗೆತನದ ನಂತರ ಜುಲೈ 2018 ರಲ್ಲಿ ಸಂಬಂಧವನ್ನು ಪುನಃ ಸ್ಥಾಪಿಸಿದ್ದವು. ಈ ಹಿನ್ನಲೆಯಲ್ಲಿ ಶಾಂತಿ ಸ್ಥಾಪನೆಗಾಗಿ ಅವರು ಪಟ್ಟ ಪ್ರಯತ್ನಕ್ಕೆ ಈ ಪ್ರಶಸ್ತಿ ದೊರೆತಿದೆ.
2018 ರಲ್ಲಿ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ಪಕ್ಕದ ಎರಿಟ್ರಿಯಾದೊಂದಿಗಿನ ತನ್ನ ದೇಶದ ಸಂಘರ್ಷ ಕೊನೆಗೊಳಿಸುವ ಕ್ರಮಗಳಿಗೆ ಅಹ್ಮದ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ಹೆಸರಿಸಲಾಗಿದೆ ಎಂದು ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡುವ ನಾರ್ವೇಜಿಯನ್ ನೊಬೆಲ್ ಸಂಸ್ಥೆಯ ಅಧ್ಯಕ್ಷರಾದ ಬೆರಿಟ್ ರೀಸ್-ಆಂಡರ್ಸನ್ ಹೇಳಿದ್ದಾರೆ.
ಸುಮಾರು 900,000 ಡಾಲರ್ ಮೌಲ್ಯದ ಬಹುಮಾನವನ್ನು ಡಿಸೆಂಬರ್ 10 ರಂದು ಇಥಿಯೋಪಿಯಾದ ಪ್ರಧಾನಿ ಅಬಿ ಅಹಮದ್ ಅಲಿ ಓಸ್ಲೋದಲ್ಲಿ ನೀಡಲಾಗುವುದು.