ಔಗಡೌಗೌ(ಬುರ್ಕಿನಾ ಫ್ಯಾಸೋ): ಶಂಕಿತ ಭಯೋತ್ಪಾದಕರ ದಾಳಿಯಲ್ಲಿ 9 ಮಂದಿ ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟು 19 ಮಂದಿ ಸಾವನ್ನಪ್ಪಿರುವ ಘಟನೆ ಪಶ್ಚಿಮ ಆಫ್ರಿಕಾದ ರಾಷ್ಟ್ರವಾದ ಬುರ್ಕಿನಾ ಫ್ಯಾಸೋದಲ್ಲಿ ನಡೆದಿದೆ ಎಂದು ಸರ್ಕಾರಿ ಮಾಧ್ಯಮ ಸಂಸ್ಥೆಗಳು ಮಾಹಿತಿ ನೀಡಿವೆ.
ಫೌಬ್ ಎಂಬ ನಗರದ ದಾಳಿ ನಡೆದಿದ್ದು, ಪೊಲೀಸ್ ತಂಡವನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಡಾಕ್ಟರ್ಸ್ ವಿಥೌಟ್ ಬಾರ್ಡರ್ಸ್ ಎಂಬ ಆರೋಗ್ಯ ಸಂಸ್ಥೆಯ ಸಿಬ್ಬಂದಿ ಗಾಯಗೊಂಡಿದ್ದು, ಆರೋಗ್ಯ ಕೇಂದ್ರವೊಂದನ್ನೂ ಭಯೋತ್ಪಾದಕರು ಸುಟ್ಟುಹಾಕಿದ್ದಾರೆ.
ಈ ಘಟನೆಯಿಂದ ನಾವು ಆಘಾತಕ್ಕೆ ಒಳಗಾಗಿದ್ದೇವೆ ಎಂದು ಡಾಕ್ಟರ್ಸ್ ವಿಥೌಟ್ ಬಾರ್ಡರ್ಸ್ ಮುಖ್ಯಸ್ಥ ಮಮಡೌ ಡಿಯಾರಾ ಆತಂಕ ವ್ಯಕ್ತಪಡಿಸಿದ್ದು, ಇನ್ನು ಮುಂದೆ ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ನಿತ್ಯವೂ ಹಿಂಸಾಚಾರ ಹೆಚ್ಚುತ್ತಲೇ ಇದೆ. ಇದು ಒಳ್ಳೆಯದಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
IS attack on Burkina Faso ಆಲ್ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್ಸ್ ಉಗ್ರಗಾಮಿ ಸಂಘಟನೆಗಳು ಬುರ್ಕಿನಾ ಫ್ಯಾಸೋದಲ್ಲಿ ದಾಳಿ ನಡೆಸುತ್ತಿದ್ದು, ಈವರೆಗೆ ಸಾವಿರಾರು ಮಂದಿ ಬಲಿಯಾಗಿದ್ದಾರೆ. ಇದರ ಜೊತೆಗೆ 1.4 ಮಿಲಿಯನ್ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ.
ಇದೇ ತಿಂಗಳ ಆರಂಭದಲ್ಲಿ ಸಹೇಲ್ನ ಸೌಮ್ ಪ್ರಾಂತ್ಯದಲ್ಲಿ ನಡೆದ ದಾಳಿಯಲ್ಲಿ 49 ಮಂದಿ ಪೊಲೀಸರು ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ದಾಳಿಗಳನ್ನು ತಡೆಯದ ಸರ್ಕಾರದ ವಿರುದ್ಧವೂ ಆಕ್ರೋಶ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಬುರ್ಕಿನಾ ಫ್ಯಾಸೋ ಅಧ್ಯಕ್ಷ ರೋಚ್ ಮಾರ್ಕ್ ಕ್ರಿಶ್ಚಿಯನ್ ಕ್ಯಾಬೋರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ, ನವೆಂಬರ್ 27ರಂದು ಪ್ರತಿಭಟನೆಗಳು ನಡೆಯಲಿವೆ.
ಇದನ್ನೂ ಓದಿ: ಪ್ರಾಣ ತೆಗೆಯಲು ಅಲ್ಲ, ಪ್ರಾಣ ರಕ್ಷಣೆಗೆ ಕಾರು ಅಪಘಾತ ಮಾಡಿಸಿದ ಚಾಲಕ: ವಿಡಿಯೋ ನೋಡಿ