ಬೆಂಗಳೂರು: ಜಾಗತಿಕ ಸಾಂಕ್ರಾಮಿಕ ಕೋವಿಡ್-19ರ ಹಿನ್ನೆಲೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರತಿ ವಿಧಾನಸಭಾ ಕ್ಷೇತ್ರದ ಶಾಸಕರೊಂದಿಗೆ ಮಾತುಕತೆ ನಡೆಸುತ್ತಿದ್ದು, ಅವರವರ ಕ್ಷೇತ್ರಗಳ ಜನತೆಯ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಖುದ್ದು ಕೋವಿಡ್‌ಗೆ ತುತ್ತಾಗಿದ್ದ ಸ್ಪೀಕರ್ ಅವರು ಅಲ್ಪ ವಿಶ್ರಾಂತಿ ನಂತರ ಕರ್ತವ್ಯ ನಿರ್ವಹಣೆಗೆ ಮುಂದಾಗಿದ್ದು, ಎಲ್ಲಾ ಶಾಸಕರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸುವ ಮೂಲಕ ಪ್ರತಿ ವಿಧಾನಸಭಾ ಕ್ಷೇತ್ರದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ನಿಮ್ಮ ಆರೋಗ್ಯ ಮಹತ್ವದ್ದಾಗಿದೆ, ನೀವು ಆರೋಗ್ಯವಾಗಿದ್ದರೆ ಕ್ಷೇತ್ರದ ಜನತೆಯ ಆರೋಗ್ಯದತ್ತ ಹೆಚ್ಚು ಗಮನ ವಹಿಸಬಹುದು ಎಂದು ಶಾಸಕರಿಗೆ ಕಿವಿಮಾತು ಹೇಳಿರುವ ಸಭಾಧ್ಯಕ್ಷ ಕಾಗೇರಿ, ಜಾಗತಿಕ ಸಾಂಕ್ರಾಮಿಕ ಕೊರೊನಾ ತಡೆಗೆ ತಮ್ಮ ಕ್ಷೇತ್ರದ ಜನತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೂಚನೆಗಳನ್ನು ಪಾಲಿಸುವಂತೆ ಪ್ರೇರೇಪಿಸಬೇಕು. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಜನತೆ ಜತೆಗಿನ ನಿಮ್ಮ ಸಂಬಂಧ ಉತ್ತಮವಾಗಿರಲಿ ಮತ್ತು ಜನತೆಯ ಮೂಲಭೂತ ಅಗತ್ಯ ಮತ್ತು ಪರಿಹಾರ ಒದಗಿಸುವ ಪ್ರಯತ್ನಗಳು ಶ್ಲಾಘನೀಯ ಎಂದು ಶಾಸಕರನ್ನು ಪ್ರೇರೇಪಿಸಿದ್ದಾರೆ.
ಮುಂದಿನ ದಿನಗಲ್ಲಿ ಲಾಕ್‌ಡೌನ್ ವಿನಾಯ್ತಿಗಳು ಹೆಚ್ಚಿದ ಸಂದರ್ಭದಲ್ಲಿ ತಮ್ಮ ತಮ್ಮ ಕ್ಷೇತ್ರದ ಜನತೆಗೆ ಜಾಗರೂಕರಾಗಿರುವಂತೆ ಕ್ರಮವಹಿಸಬೇಕೆಂದು ಸ್ಪೀಕರ್ ತಿಳಿ ಹೇಳಿದ್ದಾರೆ.