ಬೆಂಗಳೂರು: ಖಾಸಗಿ ಲೇವಾದೇವಿದಾರರಿಂದ ಪಡೆದ ಸಾಲ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾದ ರೈತಾಪಿ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತ ಪ್ರಸ್ತಾವನೆ ಮುಖ್ಯಮಂತ್ರಿ ಪರಿಶೀಲನೆಯಲ್ಲಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
2016ರಿಂದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ನಷ್ಟ ವಿಮೆ ಪರಿಹಾರ ವಿತರಿಸಿಲ್ಲ ಎಂದು ಆಕ್ಷೇಪಿಸಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ರೈತರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ, ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಖಾಸಗಿ ಲೇವಾದೇವಿಯವರಿಂದ ಪಡೆದ ಸಾಲ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾದ ರೈತರ ಕುಟುಂಬಗಳಿಗೆ ಪರಿಹಾರ ನೀಡುವ ಪ್ರಸ್ತಾವನೆ ಮುಖ್ಯಮಂತ್ರಿಗಳ ಮುಂದೆ ಪರಿಶೀಲನೆಯಲ್ಲಿದೆ ಎಂದು ತಿಳಿಸಿದರು.
ಹೇಳಿಕೆ ಪರಿಗಣಿಸಿದ ಪೀಠ, ಪ್ರಸ್ತಾವನೆ ಸಂಬಂಧ ಕೈಗೊಂಡ ಕ್ರಮಗಳ ಕುರಿತು ಜೂನ್ 30ರ ಒಳಗೆ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದ ಪೀಠ, ವಿಚಾರಣೆಯನ್ನು ಜುಲೈ.2ಕ್ಕೆ ಮುಂದೂಡಿತು.
ಪರಿಹಾರಕ್ಕೆ ಸೂಚಿಸಿದ್ದ ಕೋರ್ಟ್ :
ಹಿಂದಿನ ವಿಚಾರಣೆ ವೇಳೆ ಸರ್ಕಾರ ವಾದ ಮಂಡಿಸಿ, ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳು ಹಾಗೂ ಸಹಕಾರಿ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲ ಮರುಪಾವತಿಸಲಾಗದೇ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡುತ್ತದೆ. ಆದರೆ, ಖಾಸಗಿ ಲೇವಾದೇವಿದಾರರಿಂದ ಸಾಲ ಪಡೆದವರಿಗೆ ಈ ಪರಿಹಾರ ನೀಡಲು ಅವಕಾಶವಿಲ್ಲ ಎಂದಿತ್ತು.
ಇದಕ್ಕೆ ಆಕ್ಷೇಪಿಸಿದ್ದ ಪೀಠ, ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪರಿಹಾರ ನೀಡುವ ವಿಚಾರದಲ್ಲಿ ತಾರತಮ್ಯ ಮಾಡುವುದು ಸಂವಿಧಾನದ ಪರಿಚ್ಛೇದದ 14ರ ಅಡಿ ಒದಗಿಸಲಾಗಿರುವ ಸಮಾನತೆ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು. ಅಲ್ಲದೇ, ಈ ವಿಚಾರವನ್ನು ಸರ್ಕಾರದ ನೀತಿ ನಿರ್ಣಯ ಕೈಗೊಳ್ಳುವ ಅಧಿಕಾರ ಹೊಂದಿರುವ ಸೂಕ್ತ ಪ್ರಾಧಿಕಾರದ ಗಮನಕ್ಕೆ ತಂದು 8 ವಾರಗಳಲ್ಲಿ ನಿರ್ಧಾರ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದಶಿರ್ಗೆ ನಿರ್ದೇಶಿಸಿತ್ತು.