ಬೆಂಗಳೂರು: ಕೋವಿಡ್ನಿಂದಾಗಿ ಸಾವೀಗಿಡಾಗುವವರ ಶವಗಳನ್ನ ಸ್ಮಶಾನಕ್ಕೆ ಸಾಗಿಸಲು ಸರ್ಕಾರವು ಶೀಘ್ರದಲ್ಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಉಚಿತ ಆ್ಯಂಬುಲೆನ್ಸ್ ಸೇವೆಯನ್ನ ಒದಗಿಸುವ ವ್ಯವಸ್ಥೆ ಮಾಡಲಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಶವಗಳನ್ನ ಸ್ಮಶಾನಕ್ಕೆ ತಲುಪಿಸಲು ದುಬಾರಿ ಹಣ ವಸೂಲಿ ಮಾಡಲಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಈ ಕಾರಣಕ್ಕೆ ಸರ್ಕಾರ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಮೊದಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ವ್ಯವಸ್ಥೆ ಪರಿಚಯಿಸಲಾಗುವುದು. ನಂತರದಲ್ಲಿ ಇದು ಬೆಂಗಳೂರು ನಗರಕ್ಕೂ ಕೂಡಾ ಪರಿಚಯಿಸಲಾಗುವುದು ಎಂದು ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಸರ್ಕಾರಿ ಜಮೀನಿನಲ್ಲಿ ತಾತ್ಕಾಲಿಕ ಚಿತಾಗಾರ ಸಿದ್ಧಪಡಿಸಲಾಗಿದೆ. ಜಿಲ್ಲೆಯ ಪ್ರತಿ ತಾಲೂಕಿನಲ್ಲಿರುವ ಸರ್ಕಾರಿ ಜಮೀನಿನಲ್ಲಿ ಈ ರೀತಿಯ ತಾತ್ಕಾಲಿಕ ಚಿತಾಗಾರವನ್ನ ಸಿದ್ಧಪಡಿಸಲು ಚಿಂತನೆ ನಡೆದಿದೆ. ಪ್ರಸ್ತುತ ತಾವರೆಕೆರೆ ಮತ್ತು ಗಿಡ್ಡೇನಹಳ್ಳಿಯಲ್ಲಿ ತಾತ್ಕಾಲಿಕ ಚಿತಾಗಾರಗಳು ಕಾರ್ಯ ನಿರ್ವಹಿಸುತ್ತಿವೆ. ಆನೇಕಲ್‌ನಲ್ಲಿಯೂ ಇದೇ ರೀತಿಯ ಚಿತಾಗಾರ ನಿರ್ಮಾಣ ಮಾಡುವ ಕುರಿತಂತೆ ಯೋಚನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕೋವಿಡ್ ಸೋಂಕಿತರು ಮತ್ತು ಅವರ ಸಂಬಂಧಿಗಳ ಜೊತೆಗೆ ಅನುಚಿತವಾಗಿ ವರ್ತಿಸುವ ಸಿಬ್ಬಂದಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಮಂಗಳವಾರದಂದು ಪ್ರತಿ ತಾಲೂಕಿಗೆ 40ರಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 160 ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳನ್ನ ಅಳವಡಿಸಲಾಗುವುದು. ಹೀಗಾಗಿ ಇನ್ನು ಮುಂದೆ ಸೋಂಕಿತರಿಗೆ ಕೋವಿಡ್ ಆರೈಕೆ ಕೇಂದ್ರದಲ್ಲಿಯೇ ಆಕ್ಸಿಜನ್ ಸೌಲಭ್ಯ ದೊರೆಯಲಿದೆ. ಒಂದು ವೇಳೆ ಅವರಿಗೆ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಸಾಧ್ಯವಿಲ್ಲ ಎಂದು ವೈದ್ಯರಿಗೆ ಮನವರಿಕೆಯಾದ ತಕ್ಷಣ ಐಸಿಯೂಗಾಗಿ ಆಸ್ಪತ್ರೆಗೆ ದಾಖಲಿಸಲಾಗುವುದು. ಮನೆಯಲ್ಲಿಯೇ ಆರೈಕೆ ಪಡೆಯುತ್ತಿರುವ ಕೋವಿಡ್ ಪಾಸಿಟಿವ್ ಬಂದ ಕೆಲವೇ ಗಂಟೆಯೊಳಗೆ ಸೋಂಕಿತರಿಗೆ ಉಚಿತವಾಗಿ ವೈದ್ಯಕೀಯ ಕಿಟ್ಗಳನ್ನ ವಿತರಿಸಲಾಗುವುದು ಎಂದರು.