'ಗರುಡ ಗಮನ ವೃಷಭ ವಾಹನ' ಸಿನಿಮಾದ ಬಳಿಕ, ನಿರ್ದೇಶಕ ಹಾಗೂ ನಟ ರಿಷಭ್ ಶೆಟ್ಟಿ ಅಭಿನಯದ ಹೊಸ ಸಿನಿಮಾ 'ಹರಿಕಥೆ ಅಲ್ಲ ಗಿರಿಕಥೆ'. ಬಹುತೇಕ ಚಿತ್ರೀಕರಣ ಮುಗಿಸಿರುವ ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಈ ಚಿತ್ರದ, 'ಜೂ ಮೊನಾಲಿಸಾ' ಹಾಡನ್ನು ಅನಾವರಣ ಮಾಡಿದ್ದಾರೆ. ತ್ರಿಲೋಕ್ ತ್ರಿವಿಕ್ರಮ ಬರೆದಿರುವ ಈ ಹಾಡಿಗೆ ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ.
ಹಾಡನ್ನು ಬಿಡುಗಡೆ ಮಾಡಿ ಮಾತನಾಡಿದ ಯೋಗರಾಜ್ ಭಟ್, ಸಹಾಯಕ ನಿರ್ದೇಶಕರ ಬಗ್ಗೆ ಸುಂದರ ಕ್ಷಣಗಳನ್ನು ಮೆಲಕು ಹಾಕಿದರು. ಆ ಕುರಿತು ಕಥೆಯೊಂದನ್ನು ಹೇಳಿದರು. ತಾವು ಕೂಡ ಈ ಚಿತ್ರಕ್ಕೆ ಹಾಡು ಬರೆದಿದ್ದು, ಜತೆಗೆ ನಿರ್ದೇಶಕನ ಪಾತ್ರವನ್ನು ಮಾಡಿರುವುದಾಗಿ ಹೇಳಿದರು.
ರಿಷಬ್ ಶೆಟ್ಟಿ ಮಾತನಾಡಿ, ಇದು ಫಿಲಂ ಮೇಕರ್ ಒಬ್ಬನ ಜೀವನ ಕುರಿತಾದ ಕಥೆ. ಹಾಗಾಗಿ ಯೋಗರಾಜ್ ಭಟ್ ಅವರ ಕೈಯಿಂದ ಹಾಡು ಬಿಡುಗಡೆ ಮಾಡಿಸಿದ್ದೇವೆ. ಚಿತ್ರರಂಗದಲ್ಲಿ ಸಾಕಷ್ಟು ಅನುಭವವಿರುವ ಹೊನ್ನವಳ್ಳಿ ಕೃಷ್ಣ ನನ್ನ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಚನಾ ಇಂದರ್, ತಪಸ್ವಿನಿ ಪೂನ್ನಚ ಈ ಚಿತ್ರದ ನಾಯಕಿಯರು. ಬಹಳ ಚೆನ್ನಾಗಿ ನಟಿಸಿದ್ದಾರೆ. ಸಿನಿಮಾ ಕೂಡ ಚೆನ್ನಾಗಿ ಮೂಡಿ ಬಂದಿದೆ ಎಂದರು.
ನಟಿ ತಪಸ್ವಿನಿ ಪೂನ್ನಚ ಮಾತನಾಡಿ, ನನ್ನ ಪಾತ್ರ ನೋಡುಗರಿಗೆ ಇಷ್ಟ ಆಗುತ್ತದೆ. ಇದು ನನ್ನ ಮೊದಲ ಚಿತ್ರ ಎಂದರು. ಕರಣ್ ಅನಂತ್ ಹಾಗೂ ಅನಿರುಧ್ ಮಹೇಶ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಂದ್ರಶೇಖರ್ ಹಾಗೂ ರಂಗನಾಥ್ ಕ್ಯಾಮರಾ ವರ್ಕ್ ಮಾಡಿದ್ದಾರೆ. ಸಂದೇಶ್ ನಾಗರಾಜ್ ಪ್ರೊಡಕ್ಷನ್ಸ್ ಅಡಿಯಲ್ಲಿ ಸಂದೇಶ್ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ಟೈಟಲ್ನಿಂದಲೇ ಗಮನ ಸೆಳೆಯುತ್ತಿರುವ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾ ಜೂನ್ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಇದನ್ನೂ ಓದಿ: 'ಹರಿಕಥೆ ಅಲ್ಲ ಗಿರಿಕಥೆ' ಹೇಳೋಕೆ ರೆಡಿಯಾದ ರಿಷಭ್ ಶೆಟ್ಟಿ