ಹೈದರಾಬಾದ್: ಬಾಲಿವುಡ್ ನಟ ಸನ್ನಿ ಡಿಯೋಲ್ ನಟನೆಯ 'ಗದರ್ 2' ಸಿನಿಮಾ ಹೊಸ ದಾಖಲೆ ಬರೆದಿದೆ. ಆಗಸ್ಟ್ 11ರಂದು ಬಿಡುಗಡೆಯಾದ ದಿನದಿಂದ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಈವರೆಗೆ 300 ಕೋಟಿ ರೂ.ಗೂ ಹೆಚ್ಚು ಆದಾಯ ಗಳಿಸಿದೆ. ಟ್ರೇಡ್ ಪೋರ್ಟಲ್ Sacnilk ಪ್ರಕಾರ, ಚಿತ್ರವು ಶನಿವಾರ 32 ಕೋಟಿ ರೂಪಾಯಿ ಸಂಗ್ರಹಿಸಿದೆ.
Sacnilk ಪ್ರಕಾರ, ಗದರ್ 2 ಬಿಡುಗಡೆಯಾದ ಮೊದಲ ವಾರದಲ್ಲಿ 284.63 ಕೋಟಿ ಸಂಗ್ರಹಿಸಿತ್ತು. ಆರಂಭಿಕ ಅಂದಾಜಿನಂತೆ, 2ನೇ ಶನಿವಾರ (ಆಗಸ್ಟ್ 19) 9ನೇ ದಿನದಂದು ಭಾರತದಲ್ಲಿ 32 ಕೋಟಿ ಕೊಳ್ಳೆ ಹೊಡೆದಿದೆ. ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಚಿತ್ರದ ಒಟ್ಟು ಕಲೆಕ್ಷನ್ 336.13 ಕೋಟಿ ರೂ. ಈ ಚಿತ್ರ ಬಿಡುಗಡೆಯಾದ 3 ದಿನದಲ್ಲಿ 100 ಕೋಟಿ, ಐದು ದಿನದಲ್ಲಿ 200 ಕೋಟಿ ರೂ ಗಳಿಸಿತ್ತು. ಬಳಿಕ ಎಂಟನೇ ದಿನವಾದ ಶುಕ್ರವಾರ ಚಿತ್ರ 300 ಕೋಟಿ ಕ್ಲಬ್ ಸೇರಿತ್ತು.
'ಗದರ್ 2' 2001ರ ಗದರ್ ಚಿತ್ರದ ಮುಂದುವರಿದ ಭಾಗ. ಸನ್ನಿ ಡಿಯೋಲ್ ಮೊದಲ ಚಿತ್ರದಲ್ಲಿ ತಾರಾ ಸಿಂಗ್ ಎಂಬ ಟ್ರಕ್ ಡ್ರೈವರ್ ಪಾತ್ರ ನಿರ್ವಹಿಸಿದ್ದರೆ, ಅಮೀಶಾ ಪಟೇಲ್ ಸಕೀನಾ ಪಾತ್ರದಲ್ಲಿ ನಟಿಸಿದ್ದರು. ಗದರ್ 2 ಚಿತ್ರವನ್ನು ಝೀ ಸ್ಟುಡಿಯೋಸ್ ನಿರ್ಮಿಸಿದೆ.
ವಿಮರ್ಶಕರ ಪ್ರತಿಕ್ರಿಯೆ: ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ಅಭಿನಯದ 'ಗದರ್ 2' ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿದೆ. ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಸಕಾರಾತ್ಮಕ ಪ್ರತಿಕ್ರಿಯೆಯೂ ಸಿಕ್ಕಿದೆ. ಸನ್ನಿ ಮತ್ತು ಅಮೀಷಾ ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿ ಮೋಹಕವಾಗಿ ಕಂಡುಬಂದರೆ, ತಾರಾ ಸಿಂಗ್ ಸಾಹಸ ದೃಶ್ಯಗಳು ಪ್ರೇಕ್ಷಕರನ್ನು ಶಿಳ್ಳೆ ಹೊಡೆಯುವಂತೆ ಪ್ರೇರೇಪಿಸುತ್ತಿವೆ.
ಭಾರತ-ಪಾಕಿಸ್ತಾನಕ್ಕೆ ಸಂದೇಶ: ನಟಿ ಹೇಮಾ ಮಾಲಿನಿ ಆಗಸ್ಟ್ 19ರಂದು ಮುಂಬೈನ ಥಿಯೇಟರ್‌ನಲ್ಲಿ ಚಿತ್ರ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡುತ್ತಾ, "ಗದರ್-2 ನೋಡಿ ಬಂದೆ. ಚಿತ್ರ ತುಂಬಾ ಆಸಕ್ತಿದಾಯಕವಾಗಿತ್ತು. 70-80ರ ದಶಕದ ಚಿತ್ರಗಳಲ್ಲಿದ್ದ ಆ ಯುಗವನ್ನು ಅನಿಲ್ ಶರ್ಮಾ ತೆರೆಗೆ ತಂದಿದ್ದಾರೆ ಎನಿಸಿತು. ತುಂಬಾ ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ" ಎಂದರು.
ಸನ್ನಿ ಡಿಯೋಲ್ ಮತ್ತು ಚಿತ್ರತಂಡವನ್ನು ಅಭಿನಂದಿಸಿದ ಹೇಮಾ ಮಾಲಿನಿ, "ಸನ್ನಿ ಸೂಪರ್ಬ್, ಅನಿಲ್ ಶರ್ಮಾ ಅವರ ಮಗ ಉತ್ಕರ್ಷ್ ಕೂಡ ಅದ್ಭುತವಾಗಿ ನಟಿಸಿದ್ದಾರೆ. ಚಿತ್ರ ನೋಡಿದಾಗ ರಾಷ್ಟ್ರದ ಬಗ್ಗೆ ಇರಬೇಕಾದ ಏಕೈಕ ಭಾವನೆ ದೇಶಪ್ರೇಮ. ಮುಸ್ಲಿಮರ ಬಗ್ಗೆ ಇರಬೇಕಾದ ಸಹೋದರತ್ವದ ವಿಷಯವನ್ನು ಕೊನೆಯವರೆಗೂ ತರಲಾಗಿದೆ. ಇದು ಭಾರತ ಮತ್ತು ಪಾಕಿಸ್ತಾನಕ್ಕೆ ಉತ್ತಮ ಸಂದೇಶ" ಎಂದು ಹೇಳಿದರು.
ಓಎಂಜಿ 2 ಕಲೆಕ್ಷನ್: ಅಮಿತ್ ರೈ ನಿರ್ದೇಶನದ ಓಹ್ ಮೈ ಗಾಡ್ 2 (OMG 2) ಗದರ್ 2 ಅಲೆಯ ನಡುವೆಯೂ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರದ ಕಲೆಕ್ಷನ್ ಕೇವಲ ಒಂಬತ್ತು ದಿನಗಳ 100 ಕೋಟಿ ರೂ. ಗಡಿ ದಾಟಿದೆ. ಆರಂಭಿಕ ಅಂದಾಜಿನಂತೆ, ಸಿನಿಮಾ ಶನಿವಾರ ಭಾರತದಲ್ಲಿ 10.5 ಕೋಟಿ ರೂ ನಿವ್ವಳ ಆದಾಯ ಗಳಿಸಿತು. ಅದರ ಒಟ್ಟು ದೇಶೀಯ ಬಾಕ್ಸ್ ಆಫೀಸ್ ಸಂಗ್ರಹ 101.58 ಕೋಟಿ ರೂ. ಅಮಿತ್ ರೈ ಅವರ ಓಎಂಜಿ 2ನಲ್ಲಿ ಅಕ್ಷಯ್ ಕುಮಾರ್ ಶಿವನ ಪಾತ್ರದಲ್ಲಿ ನಟಿಸಿದ್ದಾರೆ. ಯಾಮಿ ಗೌತಮ್, ಪಂಕಜ್ ತ್ರಿಪಾಠಿ ಮತ್ತು ರಾಮಾಯಣ ಖ್ಯಾತಿಯ ಅರುಣ್ ಗೋವಿಲ್ ಕೂಡ ಇದ್ದಾರೆ. ಚಿತ್ರವನ್ನು ಕೇಪ್ ಆಫ್ ಗುಡ್ ಫಿಲ್ಮ್ಸ್, ಅಶ್ವಿನ್ ವರ್ಡೆ, ವಿಪುಲ್ ಡಿ ಶಾ ಮತ್ತು ರಾಜೇಶ್ ಬಹ್ಲ್ ನಿರ್ಮಿಸಿದ್ದಾರೆ.
80 ಕೋಟಿ ರೂ ಬಜೆಟ್‌ನಲ್ಲಿ ತಯಾರಾದ ಗದರ್ 2, ಪಠಾಣ್ ನಂತರ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ. ಮತ್ತೊಂದೆಡೆ, ಜೈಲರ್ ಮತ್ತು ಓಎಂಜಿ 2 ಸಹ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಸಂಪಾದನೆ ಕಾಣುತ್ತಿವೆ. ಗದರ್ 2 ಗೆ ಹೋಲಿಸಿದರೆ ಇದು ತುಂಬಾ ಕಡಿಮೆ.
ಇದನ್ನೂ ಓದಿ: ಬಾಕ್ಸ್ ಆಫೀಸ್‌ನಲ್ಲಿ Gadar 2 vs OMG 2 ಫೈಟ್: 7ನೇ ದಿನದ ಕಲೆಕ್ಷನ್ ಎಷ್ಟು?