ಹ್ಯಾಟ್ರಿಕ್ ಹೀರೋ ಶಿವ ರಾಜ್‌ಕುಮಾರ್ ಪುತ್ರಿ ನಿವೇದಿತಾ ಶಿವ ರಾಜ್‌ಕುಮಾರ್ ಸಿನಿಮಾ ನಿರ್ಮಾಣಕ್ಕಿಳಿದಿರುವುದು ಗೊತ್ತೇ ಇದೆ. ಶ್ರೀ ಮುತ್ತು ಸಿನಿ ಸರ್ವೀಸ್‌ನಡಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲೆಂದು ಆರಂಭಿಸಿರುವ ಈ ನಿರ್ಮಾಣ ಸಂಸ್ಥೆಯ ಚೊಚ್ಚಲ ಕೊಡುಗೆಯೇ ಫೈರ್ ಫ್ಲೈ. ಪೋಸ್ಟರ್ ಮೂಲಕ ಗಮನ ಸೆಳೆದಿದ್ದ ಚಿತ್ರದ ಮೊದಲ ಹಂತದ ಚಿತ್ರೀಕರಣ ಇದೀಗ ಮುಕ್ತಾಯಗೊಂಡಿದೆ. ಮೈಸೂರು ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ.
ಅಕ್ಟೋಬರ್ ತಿಂಗಳ 3ನೇ ವಾರದಿಂದ ದ್ವಿತೀಯ ಹಂತದ ಚಿತ್ರೀಕರಣ ಶುರುವಾಗಲಿದೆ. ಫೈರ್ ಫ್ಲೈ ಸಿನಿಮಾವನ್ನು ಯುವನಟ ವಂಶಿ ನಿರ್ದೇೆಶನ ಮಾಡುತ್ತಿದ್ದಾರೆ. ಪೂರ್ಣ ಪ್ರಮಾಣದ ನಾಯಕರಾಗಿಯೂ ಈ ಮೂಲಕ ವಂಶಿ ಕನ್ನಡಕ್ಕೆ ಪರಿಚಯವಾಗುತ್ತಿದ್ದಾರೆ. ಚಿತ್ರಕ್ಕೆ ಅಭಿಲಾಷ್ ಕಲ್ಲಟ್ಟಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಚರಣ್ ರಾಜ್ ಸಂಗೀತ, ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.
ಇದನ್ನೂ ಓದಿ: ಸೆಟ್ಟೇರಿತು ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಚೊಚ್ಚಲ ಸಿನಿಮಾ : ಟೈಟಲ್ ಏನು ಗೊತ್ತಾ ?
ಯುವ ಪ್ರತಿಭೆಗಳಿಗೆ ಪ್ರೋತ್ಸಾಹ: ಚಿತ್ರದ ನಾಯಕ, ನಿರ್ದೇಶಕ ವಂಶಿ ಈ ಹಿಂದೆ ಪಿಆರ್ಕೆ ಸಂಸ್ಥೆಯ ಮಾಯಾಬಜಾರ್ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಗುರು ದೇಶಪಾಂಡೆ ಅವರ ಪೆಂಟಗನ್ ಸಿನಿಮಾದಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದ್ದರು. ವಂಶಿ ಅವರಿಗೆ ಇಲ್ಲಿ ಜಯ್‌ರಾಮ್ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ನಿರ್ಮಾಣ ಸಂಸ್ಥೆ ಶ್ರೀ ಮುತ್ತು ಸಿನಿ ಸರ್ವಿಸ್ ಸಂಸ್ಥೆ ಈ ಮೂಲಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದೆ.
ಬದಲಾದ ಕಾಲಘಟ್ಟದಲ್ಲಿ ಸಿನಿಮಾ ಟ್ರೆಂಡ್ ಕೂಡ ಬದಲಾಗಿದೆ. ಈ ಬದಲಾವಣೆಯ ಓಟಕ್ಕೆ ತಕ್ಕಂತೆ ಚಂದನವನ ಕೂಡ ಬದಲಾಗುತ್ತಿದೆ. ಈ ಮೂಲಕ ಮತ್ತಷ್ಟು ಉತ್ತಮ ಚಿತ್ರಗಳು ಹಾಗೂ ಹೊಸಬರು ಚಿತ್ರರಂಗಕ್ಕೆ ಬರಲಿ ಎಂಬುವುದು ಕನ್ನಡ ಚಿತ್ರರಂಗದ ಅಭಿಮಾನಿಗಳ ಆಶಯ.
ನಿವೇದಿತಾ ನಿರ್ಮಾಣದ ಚೊಚ್ಚಲ ಸಿನಿಮಾ: ಅಂದು ಡಾ.ರಾಜ್‌ಕುಮಾರ್ ಬೆಳ್ಳಿ ಪರದೆಯಲ್ಲಿ ರಾರಾಜಿಸುತ್ತಿದ್ದರೆ, ತೆರೆ ಹಿಂದೆ ಅವರಿಗೆ ಬೆನ್ನೆಲುಬಾಗಿ ಚಿತ್ರ ನಿರ್ಮಾಣ ಸಂಸ್ಥೆಯನ್ನು ಕಟ್ಟಿ ಪಾರ್ವತಮ್ಮ ರಾಜ್‌ಕುಮಾರ್ ನೆರವಾಗಿದ್ದರು. ಪೂರ್ಣಿಮಾ ಎಂಟರ್ಪ್ರೈಸರ್ಸ್ ಮೂಲಕ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ಪಾರ್ವತಮ್ಮ ಕೊಡುಗೆಯಾಗಿ ನೀಡಿದ್ದಾರೆ. ಅದನ್ನೇ ಅಣ್ಣಾವ್ರ ಇಡೀ ತಲೆಮಾರು ಮುಂದುವರೆಸಿಕೊಂಡು ಬಂದಿದೆ.
ಹ್ಯಾಟ್ರಿಕ್ ಹೀರೋ ಶಿವ ರಾಜ್‌ಕುಮಾರ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೆ, ಪತ್ನಿ ಗೀತಾ ಶಿವ ರಾಜ್‌ಕುಮಾರ್ ಗೀತಾ ಪಿಕ್ಚರ್ಸ್ ಅಡಿ ನಿರ್ಮಾಪಕರು. ದಿ.ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ನಿಧನದ ನಂತರ ಪಿಆರ್ಕೆ ಪ್ರೊಡಕ್ಷನ್ ಅಡಿ ಅಶ್ವಿನಿ ಪುನೀತ್ ರಾಜ್ ಕುಮಾರ್ ನಿರ್ಮಾಪಕರಾಗಿ ಚಿತ್ರರಂಗಕ್ಕೆ ದುಡಿಯುತ್ತಿದ್ದಾರೆ. ಇದೀಗ ಶಿವಣ್ಣನ ಎರಡನೇ ಪುತ್ರಿ ನಿವೇದಿತಾ ಶಿವ ರಾಜ್‌ಕುಮಾರ್ ತಮ್ಮದೇ ಒಡೆತನದ ನಿರ್ಮಾಣ ಸಂಸ್ಥೆಯಡಿ ಚೊಚ್ಚಲ ಚಿತ್ರದ ನಿರ್ಮಾಣಕ್ಕಿಳಿದಿದ್ದಾರೆ.
ಇದನ್ನೂ ಓದಿ: ನಿರ್ಮಾಪಕಿಯಾದ ನಿವೇದಿತಾ; ವಂಶಿ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ಹಣ ಹೂಡಿದ ಶಿವಣ್ಣನ ಪುತ್ರಿ