ಬಾಲಿವುಡ್ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಅವರ ಮುಂದಿನ ರಾಮಾಯಣ ಆಧಾರಿತ ಚಿತ್ರದಲ್ಲಿ ನಟ ರಣ್ಬೀರ್ ಕಪೂರ್ ಮತ್ತು ಅವರ ಪತ್ನಿ, ನಟಿ ಆಲಿಯಾ ಭಟ್ ರಾಮ-ಸೀತೆ ಪಾತ್ರದಲ್ಲಿ ಹಾಗೂ ರಾವಣನ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟಿಸಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಆದರೆ ಈ ಆಫರ್ ಅನ್ನು ಯಶ್ ನಯವಾಗಿಯೇ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ನಟ ಈ ಯೋಜನೆಯಿಂದ ಹಿಂದೆ ಸರಿದಿರುವುದಾಗಿ ವರದಿಯಾಗಿದೆ.
ನಿತೇಶ್ ತಿವಾರಿವರು ಇತ್ತೀಚೆಗೆ ಬವಾಲ್ ಚಿತ್ರವನ್ನು ಪೂರ್ಣಗೊಳಿಸಿದ್ದಾರೆ. ಸದ್ಯ ಅವರು ರಾಮಾಯಣ ಆಧಾರಿತ ಸಿನಿಮಾ ಮಾಡುತ್ತಿರುವ ಮಾಹಿತಿ ಇದೆ. ಈ ವರ್ಷದ ದೀಪಾವಳಿಯ ಸಂದರ್ಭದಲ್ಲಿ ಈ ಸಿನಿಮಾವನ್ನು ಘೋಷಿಸಬಹುದು. ಚಿತ್ರದ ಅಧಿಕೃತ ಘೋಷಣೆಗೂ ಮುನ್ನವೇ ಅವರು ಯಶ್ಗೆ ರಾವಣನ ಪಾತ್ರಕ್ಕೆ ಆಫರ್ ನೀಡಿದ್ದಾರೆ. ಆದರೆ ಇದನ್ನು ಅಷ್ಟೇ ಸಲೀಸಾಗಿ ಕೆಜಿಎಫ್ ಸ್ಟಾರ್ ನಿರಾಕರಿಸಿದ್ದಾರೆ.
ಆದರೆ ಯಶ್ ಅವರು ರಾವಣನ ಪಾತ್ರವನ್ನು ಮಾಡಲು ನಿಜಕ್ಕೂ ಉತ್ಸುಕರಾಗಿದ್ದರು. ರಾಮನ ಪಾತ್ರ ಮಾಡುವುದಕ್ಕಿಂತ ರಾವಣನ ಪಾತ್ರ ನಿಜಕ್ಕೂ ಸವಾಲಿನ ಕೆಲಸ. ರಾಮನ ಪಾತ್ರವನ್ನು ರಣಬೀರ್ ಮಾಡುವುದರಿಂದ ರಾವಣನ ಪಾತ್ರವನ್ನು ಸ್ವೀಕರಿಸಲು ಯಶ್ ಒಮ್ಮೆ ಯೋಚಿಸಿದ್ದರು. ಆದರೆ ಅವರ ಆಪ್ತರು ಈ ಪಾತ್ರವನ್ನು ಒಪ್ಪಿಕೊಳ್ಳದಂತೆ ಯಶ್ಗೆ ಸಲಹೆ ನೀಡಿದ್ದಾರೆ.
ರಾವಣನ ಪಾತ್ರವು ಪ್ರಬಲವಾಗಿದ್ದರೂ ಅವರ ಅಭಿಮಾನಿಗಳು ಯಶ್ ಅವರನ್ನು ನಕಾರಾತ್ಮಕ ಪಾತ್ರದಲ್ಲಿ ನೋಡಲು ಇಷ್ಟಪಡುವುದಿಲ್ಲ. ಈ ಹಿಂದೆ ಸಂದರ್ಶನವೊಂದರಲ್ಲಿ ಯಶ್ ಈ ಮಾತನ್ನು ಉಚ್ಚರಿಸಿದ್ದರು. "ನನ್ನ ಅಭಿಮಾನಿಗಳ ಭಾವನೆಗಳ ಬಗ್ಗೆ ನಾನು ಜಾಗರೂಕನಾಗಿರಬೇಕು. ಅವರ ಇಚ್ಛೆಯ ವಿರುದ್ಧವಾಗಿ ನಾನು ನಡೆದುಕೊಳ್ಳುವುದಿಲ್ಲ" ಎಂದು ಹೇಳಿದ್ದರು. ಹೀಗಾಗಿ ಯಶ್ ರಾವಣನ ಪಾತ್ರವನ್ನು ಅಭಿಮಾನಿಗಳಿಗಾಗಿಯೇ ಬಿಟ್ಟುಕೊಟ್ಟಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇದು ಫ್ಯಾನ್ಸ್ಗೆ ನಟನ ಮೇಲಿದ್ದ ಪ್ರೀತಿ, ಅಭಿಮಾನವನ್ನು ಮತ್ತಷ್ಟು ಹೆಚ್ಚಿಸಿದೆ.
ಇದನ್ನೂ ಓದಿ: Weekend with Ramesh: ಡಿಕೆಶಿ ಬದುಕಿನ ಅನಾವರಣದೊಂದಿಗೆ ಮುಕ್ತಾಯಗೊಂಡ ಸಾಧಕರ ಶೋ 'ವೀಕೆಂಡ್ ವಿತ್ ರಮೇಶ್'
ಭಗವನಂತನಂತೆ ಕಾಣ್ತಾರೆ ಯಶ್: ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಕಂಗನಾ ರಣಾವತ್ ಯಶ್ ಅವರನ್ನು ಭಗವನಂತನಿಗೆ ಹೋಲಿಸಿ ಮಾತನಾಡಿದ್ರು. ರಾವಣನ ಪಾತ್ರಕ್ಕಿಂತ ಅವರಿಗೆ ರಾವಣನ ಪಾತ್ರವೇ ಸೂಕ್ತ ಎಂದು ಹೇಳಿದ್ರು. ಜೊತೆಗೆ ನಿತೇಶ್ ತಿವಾರಿ ತಮ್ಮ ಹೊಸ ರಾಮಾಯಣ ಆಧಾರಿತ ಸಿನಿಮಾಗೆ ರಣಬೀರ್ ಅವರನ್ನು ರಾಮನ ಪಾತ್ರಕ್ಕೆ ಆಯ್ಕೆ ಮಾಡಿದ್ದು ಸರಿಯಲ್ಲ ಎಂದು ಹೇಳಿದ್ದರು.
"ಬಾಲಿವುಡ್ನಲ್ಲಿ ರಾಮಾಯಣವನ್ನು ಕಥಾವಸ್ತುವನ್ನಾಗಿರಿಸಿ ಮತ್ತೊಂದು ಸಿನಿಮಾದ ಬಗ್ಗೆ ಕೇಳುತ್ತಿದ್ದೇನೆ. ಆತ್ಮಸಾಕ್ಷಿಯ ಅಗತ್ಯವಿರುವ ತೆಳ್ಳಗಿನ ಬಿಳಿ ಇಲಿ ಈ ಚಿತ್ರದಲ್ಲಿ ನಟಿಸಲಿದ್ದಾರೆಂದು ಹೇಳಲಾಗುತ್ತಿದೆ. ಸ್ತ್ರೀವಿಷಯ ಮತ್ತು ಮಾದಕ ವ್ಯಸನಕ್ಕೆ (ಡ್ರಗ್ಸ್) ಹೆಸರುವಾಸಿಯಾದ ಅವರು ಸಿನಿಮಾವೊಂದರಲ್ಲಿ ತನ್ನನ್ನು ತಾನು ಭಗವಾನ್ ಶಿವ ಎಂದು ಸಾಬೀತುಪಡಿಸಲು ತೀವ್ರವಾಗಿ ಪ್ರಯತ್ನಿಸಿದ ನಂತರ ಈಗ ಭಗವಾನ್ ರಾಮನಾಗಲು ಹೊರಟಿದ್ದಾರೆ."
"ಆದರೆ ಸ್ವಯಂ ನಿರ್ಮಿತ ಪ್ರತಿಭಾವಂತ ನಟ ಎಂದು ಕರೆಯಲ್ಪಡುವ ಒಬ್ಬ ದಕ್ಷಿಣದ ಸೂಪರ್ ಸ್ಟಾರ್, ಒಬ್ಬ ನಿಷ್ಠಾವಂತ ಕುಟುಂಬದ ವ್ಯಕ್ತಿ, ಸಂಪ್ರದಾಯವಾದಿ, ವಾಲ್ಮೀಕಿ ಜಿ ವಿವರಣೆಯ ಪ್ರಕಾರ, ಮೈಬಣ್ಣ, ನಡವಳಿಕೆ ಮತ್ತು ಮುಖದ ವೈಶಿಷ್ಟ್ಯಗಳಲ್ಲಿ ಶ್ರೀರಾಮನಂತೆ ಕಾಣುವ ಆ ನಟನಿಗೆ ರಾವಣನ ಪಾತ್ರವನ್ನು ನೀಡಲು ಮುಂದಾಗುತ್ತಿದ್ದಾರೆ. ಇದು ಯಾವ ರೀತಿಯ ಕಲಿಯುಗ? ಯಾವುದೇ ಕಾರಣಕ್ಕೂ ಡ್ರಗ್ಗಿ ಹುಡುಗನು ರಾಮನ ಪಾತ್ರವನ್ನು ಮಾಡಬಾರದು" ಎಂದು ತಮ್ಮ ಇನ್ಸ್ಟಾದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದರು.
ಇದನ್ನೂ ಓದಿ: Bhimaa movie: ಟಾಲಿವುಡ್ ನಿರ್ದೇಶಕನಾಗಿ 'ಭಜರಂಗಿ' ಹರ್ಷ ಎಂಟ್ರಿ.. 'ಭೀಮ'ನಾಗಿ ಗೋಪಿಚಂದ್ ಫಿಕ್ಸ್!