ಕನ್ನಡ ಚಿತ್ರರಂಗದಲ್ಲಿ ಕ ಅಕ್ಷರ ಈಗ ಸಿನಿಮಾ ಟೈಟಲ್ ಆಗುವ ಟ್ರೆಂಡ್ ಹೆಚ್ಚಾಗುತ್ತಿದೆ. ನಿರ್ದೇಶಕ ಪ್ರೇಮ್ ಹಾಗು ಧ್ರುವ ಸರ್ಜಾ ಕಾಂಬಿನೇಷನ್ ನಲ್ಲಿ KD ಸಿನಿಮಾ ಬರ್ತಾ ಇರೋದು ಗೊತ್ತಿರುವ ವಿಚಾರ. ಇದೀಗ KA15 ಹೆಸರಿನಲ್ಲಿ ಮತ್ತೊಂದು ಚಿತ್ರ ತಯಾರಾಗುತ್ತಿದೆ. ಹೊಸ ರೀತಿಯ ಸದಭಿರುಚಿಯ ಧರಣಿ ಮಂಡಲ ಮಧ್ಯದೊಳಗೆ ಚಿತ್ರ ಮಾಡಿದ ತಂಡ ಕ ಎಂಬ ಶೀರ್ಷಿಕೆಯನ್ನು ಇಟ್ಟುಕೊಂಡು ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆಯುತ್ತಿದೆ. ಇತ್ತೀಚೆಗೆ ವಿಜಯನಗರದ ಶ್ರೀ ವರಸಿದ್ಧಿ ವಿನಾಯಕ ಮತ್ತು ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಶೀರ್ಷಿಕೆ ಅನಾವರಣದ ಮಾಡಿದೆ.
ಈಗಾಗಲೇ ವಿಭಿನ್ನ ಪಾತ್ರಗಳ ಮೂಲಕ ತನ್ನದೇ ಬೇಡಿಕೆ ಹೊಂದಿರುವ ಯಶ್ ಶೆಟ್ಟಿ ಹಾಗೂ ಯುವ ನಟ ಸಿದ್ದು ಮೂಲಿಮನಿ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಯಶ್ ಶೆಟ್ಟಿ ಈಗಾಗಲೇ ಹಲವಾರು ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಹಾಗೆಯೇ ಸಿದ್ದು ಮೂಲಿಮನಿ ಕೂಡ ತಮ್ಮ ಅಭಿನಯ ಚತುರತೆಯನ್ನು ಪ್ರೇಕ್ಷಕರ ಮುಂದಿಟ್ಟು ತಾನೊಬ್ಬ ಒಳ್ಳೆಯ ಕಲಾವಿದ ಎನ್ನುವುದನ್ನು ನಿರೂಪಿಸಿದ್ದಾರೆ.
ಧರಣಿ ಮಂಡಲ ಮಧ್ಯದೊಳಗೆ ಚಿತ್ರಕ್ಕೆ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದ ಸಂತೋಷ್ ಈಗ ಸ್ವತಂತ್ರ ನಿರ್ದೇಶಕನಾಗಿ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಧರಣಿ ಮಂಡಲ ಮಧ್ಯದೊಳಗೆ ಚಿತ್ರದಲ್ಲಿ ಕಾರ್ಯ ನಿರ್ವಹಿಸಿದ್ದ ಬಹುತೇಕ ತಂತ್ರಜ್ಞರು ಈ ಚಿತ್ರದಲ್ಲಿ ಕೈ ಜೋಡಿಸಿದ್ದಾರೆ. ಛಾಯಾಗ್ರಾಹಕನಾಗಿ ಕೀರ್ತನ್ ಪೂಜಾರಿ, ಸಂಗೀತ ನಿರ್ದೇಶಕರಾಗಿ ರೋಣದ ಬಕ್ಕೇಷ್ ಹಾಗೂ ಕಾರ್ತೀಕ್ ಚಿನ್ನೋಜಿ ರಾವ್ ಜಂಟಿಯಾಗಿ ಕೆಲಸ ಮಾಡುತ್ತಿದ್ದಾರೆ.
ಗೀತ ರಚನೆ ಗೌಸ್ ಪೀರ್, ಸಂಕಲನಕಾರನಾಗಿ ಉಜ್ವಲ್ ಚಂದ್ರ, ಸಾಹಸ ನಿರ್ದೇಶಕನಾಗಿ ಚಂದ್ರು ಬಂಡೆ, ಪ್ರಶಾಂತ್ ಚಿತ್ರದ ಕಲೆಯ ಭಾಗದ ಜವಾಬ್ದಾರಿ ಹೊತ್ತಿದ್ದಾರೆ. ಸಂಭಾಷಣೆಗೆ ಅಭಿನಂದನ್ ದೇಶ್ ಪ್ರಿಯ, ಪ್ರಶಾಂತ್, ಶಿವಕುಮಾರ್, ಕಡ್ಡಿಪುಡಿ ಕಾಂತರಾಜ್ ಜೊತೆಯಾಗಿದ್ದಾರೆ. ಈ ಚಿತ್ರ ಸದ್ಯದಲ್ಲೇ ಸೆಟ್ಟೇರಲಿದ್ದು, ಈ ಸಿನಿಮಾದಲ್ಲಿ ಇನ್ನು ಉಳಿದ ಕಲಾವಿದರ ಬಗ್ಗೆ ಮಾಹಿತಿ ನೀಡಲಿದೆ.
ಇದನ್ನೂ ಓದಿ: ವಿಭಿನ್ನ ಪಾತ್ರಗಳನ್ನು ಮಾಡುವ ಹಸಿವಿದೆ: ನಟಿ ಭಾವನ