ಮಾಯಾಮೃಗ, ಮುಕ್ತ ಮುಕ್ತ,ಮಹಾ ಪರ್ವ ಹೀಗೆ ಹಲವಾರು ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಲೋಕದಲ್ಲಿ ಗುರುತಿಸಿಕೊಂಡಿದ್ದ ಕಲಾವಿದ, ಯಲಹಂಕ ಬಾಲಾಜಿ ಇಹಲೋಕ ತ್ಯಜಿಸಿದ್ದಾರೆ.
ಅಲ್ಪ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಯಲಹಂಕ ಬಾಲಾಜಿ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಬಾಲಾಜಿ ನಿಧನರಾಗಿರುವುದಕ್ಕೆ ನಿರ್ದೇಶಕ ಟಿ.ಎನ್.ಸೀತಾರಾಮ್ ಸಂತಾಪ ಸೂಚಿಸಿದ್ದಾರೆ.
ಏಪ್ರಿಲ್ 16, 1963 ರಂದು ಯಲಹಂಕ ಬಾಲಾಜಿ ಜನಿಸಿದ್ದರು. ಅಭಿನಯದ ಹಾಗೂ ಫೋಟೋಗ್ರಫಿಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರಿಂದ ಕಿರುತೆರೆ ಲೋಕಕ್ಕೆ ಪದಾರ್ಪಣೆ ಮಾಡಿದ್ದರು. ಅಲ್ಲಿ ಪರಿಚಯ ಆದವರೇ ನಿರ್ದೇಶಕ ಟಿ.ಎನ್ ಸೀತಾರಾಮ್. ಅಲ್ಲಿಂದ ಯಲಹಂಕ ಬಾಲಾಜಿ, ಮಾಯಾಮೃಗ, ಮುಕ್ತ ಮುಕ್ತ, ಮಹಾ ಪರ್ವ ಮನ್ವಂತರ, ಮುಕ್ತ, ಮಿಂಚು, ಮಗಳು ಜಾನಕಿ ಹೀಗೆ ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು.
ನನ್ನ ಆತ್ಮೀಯ ಗೆಳೆಯ ಯಲಹಂಕ ಬಾಲಾಜಿ ಅಲ್ಪ ಕಾಲದ ಅನಾರೋಗ್ಯದ ನಂತರ ನಿಧನ ಹೊಂದಿದ್ದಾರೆ. ನನ್ನ ಎಲ್ಲ ಧಾರಾವಾಹಿಗಳಲ್ಲೂ ನಟಿಸಿದ್ದರು. ಮಾಯಾಮೃಗದಿಂದ ಮಗಳು ಜಾನಕಿ ಧಾರಾವಾಹಿವರಗೂ ನನ್ನ ಜೊತೆ ಕೆಲಸ ಮಾಡಿದ ಅತ್ಯಂತ ಹೃದಯವಂತ ಗೆಳೆಯ. ಎಲ್ಲ ಕಷ್ಟಗಳಲ್ಲೂ, ಸಂತೋಷಗಳಲ್ಲೂ ಜತೆಗೆ ಇರುತ್ತಿದ್ದ ಮನುಷ್ಯ. ಇಡೀ ಬದುಕಿನುದ್ದಕ್ಕೂ ಕಷ್ಟ ಕಂಡಿದ್ದರೂ ನಗುತ್ತಾ ಬದುಕಿದ ಗೆಳೆಯ.
ಬಾಲಾಜಿ ಇನ್ನಿಲ್ಲ ಎಂದು ನೆನೆಸಿಕೊಂಡರೆ ತುಂಬಾ ನೋವಾಗುತ್ತಿದೆ. ಬಾಲಾಜಿ ನಿಧನದಿಂದ ಅವರ ಕುಟುಂಬಕ್ಕೆ ದೊಡ್ಡ ಆಘಾತ ಉಂಟು ಮಾಡಿದೆ. ಆ ದೇವರು ಅವರ ಕುಟುಂಬಕ್ಕೆ ಈ ನೋವನ್ನ ನೀಗುವ ಶಕ್ತಿ ನೀಡಲಿ ಅಂತಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಯಲಹಂಕ ಬಾಲಾಜಿ ಅಂತ್ಯ ಸಂಸ್ಕಾರ ಮಾಡಲು ಕುಟುಂಬವರ್ಗ ನಿರ್ಧರಿಸಿದೆ.
ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ನೂತನ ಮುಖ್ಯ ನ್ಯಾಯಮೂರ್ತಿ ನೇಮಕಕ್ಕೆ ಸುಪ್ರೀಂಕೋರ್ಟ್ ಕೊಲಿಜಿಯಂ ಸಭೆ