ಚಲನಚಿತ್ರ ನಿರ್ದೇಶಕ ಹನ್ಸಲ್ ಮೆಹ್ತಾ (Hansal Mehta) ಅವರ ಚೊಚ್ಚಲ ಸೀರಿಸ್ ಸ್ಕೂಪ್ (Scoop) ಪ್ರಸಾರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಜೂನ್ 2ರಂದು ಸ್ಕೂಪ್ ಪ್ರಥಮ ಪ್ರದರ್ಶನಕ್ಕೆ ಸಿದ್ಧವಾಗಿದೆ ಎಂದು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ಇಂದು ತಿಳಿಸಿದೆ.
ಸ್ಕೂಪ್ ಸೀರಿಸ್, ಜಿಗ್ನಾ ವೋರಾ ಅವರ ಜೀವನಚರಿತ್ರೆಯ ಪುಸ್ತಕ ಬಿಹೈಂಡ್ ಬಾರ್ಸ್ ಇನ್ ಬೈಕುಲ್ಲಾ: ಮೈ ಡೇಸ್ ಇನ್ ಪ್ರಿಸನ್ (Behind Bars in Byculla: My Days in Prison), ನೈಜ ಘಟನೆಗಳಿಂದ ಪ್ರೇರಿತವಾಗಿದೆ ಎಂದು ವೆಬ್ ಸೀರಿಸ್ ತಂಡ ಹೇಳಿಕೊಂಡಿದೆ.
ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ ಮತ್ತು ರಾಜ್‌ಕುಮಾರ್ ಹಿರಾನಿ ನಿರ್ದೇಶನದಲ್ಲಿ ಮೂಡಿ ಬಂದ ಚಲನಚಿತ್ರ 'ಸಂಜು' ಸಿನಿಮಾ ಮೂಲಕ ಹೆಸರುವಾಸಿಯಾಗಿರುವ ಕರಿಷ್ಮಾ ತನ್ನಾ, ಸ್ಕೂಪ್ ಸೀರಿಸ್ನ ಮೊದಲ ಸೀಸನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸರಣಿಯನ್ನು ಹನ್ಸಲ್ ಮೆಹ್ತಾ ಮತ್ತು ಮೃಣ್ಮಯೀ ಲಗೂ ವೈಕುಲ್ ರಚಿಸಿದ್ದಾರೆ. ಸರಣಿಯ ಮೊದಲ ಸೀಸನ್ ಕ್ರೈಮ್ ಜರ್ನಲಿಸ್ಟ್ ಜಾಗೃತಿ ಪಾಠಕ್ ವೃತ್ತಿಜೀವನವನ್ನು ವ್ಯಾಖ್ಯಾನಿಸಲಿದೆ. ಪೊಲೀಸ್, ಭೂಗತ ಜಗತ್ತು ಮತ್ತು ಮಾಧ್ಯಮಗಳ ನಡುವೆ ಸಿಲುಕುವ ಜಾಗೃತಿ ಪಾಠಕ್ ಕಥೆ ಹೇಳಲಿದೆ ಸ್ಕೂಪ್ ಸೀರಿಸ್ನ ಮೊದಲ ಸೀಸನ್.
ಇದನ್ನೂ ಓದಿ: ಕನ್ನಡತಿ ರಶ್ಮಿಕಾ ಮಂದಣ್ಣಗೆ ಬಾಲಿವುಡ್ನಲ್ಲಿ ಆಫರ್ ಮೇಲೆ ಆಫರ್: ಮುಂದಿನ ಹಿಂದಿ ಚಿತ್ರ ಯಾವುದು?
ಪತ್ರಕರ್ತೆ ಆಗಿ ಕೆಲಸ ಮಾಡುವ ಜಾಗೃತಿ ಪಾಠಕ್ ಅವರೇ ಆರೋಪಿಯಾಗಿ ಪ್ರಕರಣವೊಂದರಲ್ಲಿ ಸಿಲುಕುತ್ತಾರೆ. ಸಹ ಪತ್ರಕರ್ತನ ಹತ್ಯೆ ಪ್ರಕರಣ ಸಂಬಂಧ ಪೊಲೀಸ್, ಭೂಗತ ಜಗತ್ತು ಮತ್ತು ಮಾಧ್ಯಮಗಳ ನಡುವೆ ಸಿಕ್ಕಿಬೀಳುತ್ತಾರೆ. ಮುಖ್ಯಾಂಶ ಬರೆಯುವ ಪತ್ರಕರ್ತೆಯೇ ಹೆಡ್ಲೈನ್ ಹೇಗೆ ಆಗುತ್ತಾರೆ? ಎಂಬುದನ್ನು ಈ ಸೀರಿಸ್ ಹೇಳಲಿದೆ.
ಇದನ್ನೂ ಓದಿ: 'ನಾನೆಂದಿಗೂ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿಲ್ಲ': ಕಂಗನಾ ರಣಾವತ್ ಹೀಗಂದಿದ್ದೇಕೆ?!
ಮೃಣ್ಮಯೀ ಲಗೂ ವೈಕುಲ್ ಮತ್ತು ಮೀರತ್ ತ್ರಿವೇದಿ ಬರೆದಿರುವ ಈ ಸೀರಿಸ್ನಲ್ಲಿ ಪ್ರೊಸೆನ್‌ಜಿತ್ ಚಟರ್ಜಿಯೊಂದಿಗೆ ಮೊಹಮ್ಮದ್ ಜೀಶನ್ ಅಯೂಬ್ ಮತ್ತು ಹರ್ಮನ್ ಬವೇಜಾ ಸೇರಿದಂತೆ ಪ್ರತಿಭಾವಂತ ನಟರು ಕಾಣಿಸಿಕೊಳ್ಳಲಿದ್ದಾರೆ. ಪತ್ರಕರ್ತೆ ಕುರಿತಾದ ಈ ಕಥೆ ಬಗ್ಗೆ ಪ್ರೇಕ್ಷಕರು ಸಾಕಷ್ಟು ನಿರಿಕ್ಷೆ ಇಟ್ಟುಕೊಂಡಿದ್ದಾರೆ.