ನವದಂಪತಿ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಮದುವೆ ನಂತರ ಇಂದು ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಇಟಲಿಯಿಂದ ಆಗಮಿಸಿದ ಜೋಡಿಗೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ ಸಿಕ್ಕಿತು. ಏರ್ಪೋರ್ಟ್ನಲ್ಲಿ ಹೂವಿನ ಬೊಕ್ಕೆಗಳೊಂದಿಗೆ ತಾರಾ ದಂಪತಿಯನ್ನು ವೆಲ್ಕಮ್ ಮಾಡಿಕೊಳ್ಳುತ್ತಿರುವ ದೃಶ್ಯ ಕಂಡು ಬಂತು.
ಬಹುಕಾಲದ ಪ್ರೀತಿಗೆ ಮದುವೆ ಎಂಬ ಅಧಿಕೃತ ಮುದ್ರೆ ಸಿಕ್ಕಿರುವ ಖುಷಿಯಲ್ಲಿದ್ದ ಜೋಡಿ ಪಾಪರಾಜಿಗಳ ಕ್ಯಾಮರಾಗೆ ನಗುಮುಖದಿಂದಲೇ ಪೋಸ್ ನೀಡಿದರು. ಈ ವೇಳೆ, ವರುಣ್ ತೇಜ್ ನೀಲಿ ಟಿ ಶರ್ಟ್, ಕಂದು ಬಣ್ಣದ ಜಾಕೆಟ್, ಬ್ಲ್ಯಾಕ್ ಸನ್ಗಾಸ್ ಮತ್ತು ಕುತ್ತಿಗೆಗೆ ಚೈನ್ ಧರಿಸಿದ್ದರು. ಲಾವಣ್ಯ ಹಳದಿ ಸಲ್ವಾರ್ ಸೂಟ್ನಲ್ಲಿ ಮುದ್ದಾಗಿ ಕಾಣುತ್ತಿದ್ದರು. ಇಬ್ಬರ ಮುಖದಲ್ಲಿ ಹೊಸತಾಗಿ ಮದುವೆಯಾದ ಕಳೆ ಎದ್ದು ಕಾಣುತ್ತಿತ್ತು.
ತಾರಾ ಜೋಡಿ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಇಟಲಿಯ ಟಸ್ಕನಿಯ ಬೋರ್ಗೊ ಸ್ಯಾನ್ ಫೆಲಿಸ್ ಹೋಟೆಲ್‌ನಲ್ಲಿ ನವೆಂಬರ್ 2ರಂದು ಹಸೆಮಣೆ ಏರಿದರು. ಚಿರಂಜೀವಿ, ಪವನ್ ಕಲ್ಯಾಣ್, ಅಲ್ಲು ಅರ್ಜುನ್, ರಾಮ್ ಚರಣ್ ಸೇರಿದಂತೆ ಆಪ್ತರು ಮತ್ತು ಕುಟುಂಬ ಸದಸ್ಯರು ಸಂತೋಷಕೂಟದಲ್ಲಿ ಭಾಗಿಯಾಗಿದ್ದರು. ಹಿಂದೂ ಸಂಪ್ರದಾಯಗಳ ಪ್ರಕಾರವೇ ಮದುವೆ ನಡೆದಿತ್ತು.
ನವದಂಪತಿ ವರುಣ್ ಮತ್ತು ಲಾವಣ್ಯ ತಮ್ಮ ಬದುಕಿನ ವಿಶೇಷ ದಿನದಂದು ಆಕರ್ಷಕವಾಗಿ ಕಾಣುತ್ತಿದ್ದರು. ವಧು ಲಾವಣ್ಯ ತ್ರಿಪಾಠಿ ಕೆಂಪು ಸೀರೆಯಲ್ಲಿ ಕಂಗೊಳಿಸಿದರೆ, ವರುಣ್ ತೇಜ್ ದಂತ ಬಣ್ಣದ ಶೇರ್ವಾನಿಯಲ್ಲಿ ಮಿಂಚಿದ್ದರು. ವರುಣ್ ತೇಜ್ ಸೋದರ ಸಂಬಂಧಿಗಳಾದ ಅಲ್ಲು ಅರ್ಜುನ್ ಮತ್ತು ರಾಮ್ ಚರಣ್, ಚಿಕ್ಕಪ್ಪ ಚಿರಂಜೀವಿ ಮತ್ತು ಪವನ್ ಕಲ್ಯಾಣ್ ತಮ್ಮ ಕುಟುಂಬಸ್ಥರೊಂದಿಗೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: ವರುಣ್ ತೇಜ್ ಲಾವಣ್ಯ ತ್ರಿಪಾಠಿ ಮದುವೆ: ಕಾಕ್ಟೈಲ್ ಪಾರ್ಟಿಯಲ್ಲಿ ಅಲ್ಲು ಅರ್ಜುನ್, ರಾಮ್ಚರಣ್ ಸೇರಿ ತಾರಾ ಕುಟುಂಬ ಭಾಗಿ
ಮದುವೆ ನಂತರ ವರುಣ್ ತೇಜ್ ತಮ್ಮಿಬ್ಬರ ಫೋಟೋಗಳನ್ನು ಹಂಚಿಕೊಂಡಿದ್ದರು. 'ಮೈ ಲವ್' ಎಂದು ಕ್ಯಾಪ್ಶನ್ ನೀಡಿದ್ದರು. ಇಂದು ಇಟಲಿಯಿಂದ ಹೈದರಾಬಾದ್ಗೆ ಆಗಮಿಸಿದ ಈ ಜೋಡಿ ನಾಳೆ ಸ್ನೇಹಿತರು, ಚಿತ್ರರಂಗದ ಸಹದ್ಯೋಗಿಗಳಿಗಾಗಿ ಅದ್ಧೂರಿ ಆರತಕ್ಷತೆ ಆಯೋಜಿಸಿದ್ದಾರೆ. ನವೆಂಬರ್ 5ರಂದು ನಡೆಯುವ ಈ ಕಾರ್ಯಕ್ರಮಕ್ಕೆ ನವದಂಪತಿ, ಖ್ಯಾತ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ದಿರಿಸಿನಲ್ಲಿ ಕಂಗೊಳಿಸಲಿದ್ದಾರೆ.
ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ 2016 ರಿಂದ ಡೇಟಿಂಗ್ನಲ್ಲಿದ್ದರು. ಇವರಿಬ್ಬರು 2017ರ 'ಮಿಸ್ಟರ್' ಚಿತ್ರದ ಸೆಟ್ನಲ್ಲಿ ಪರಸ್ಪರ ಭೇಟಿಯಾದರು. ಅಲ್ಲಿಂದ ಸ್ನೇಹ ಬೆಳೆದು ನಂತರ ಪ್ರೀತಿಸಲು ಶುರು ಮಾಡಿದರು. ಇದೇ ವರ್ಷ ಜೂನ್ 9ರಂದು ಎಂಗೇಜ್ಮೆಂಟ್ ಮಾಡಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದರು. ಇದೀಗ ಜೋಡಿ ತಮ್ಮ ಇಷ್ಟು ವರ್ಷದ ಪ್ರೀತಿಗೆ ದಾಂಪತ್ಯದ ಮುದ್ರೆ ಒತ್ತಿದ್ದಾರೆ. ವರುಣ್ ತೇಜ್ ನಟ ಹಾಗೂ ನಿರ್ಮಾಪಕ ನಾಗೇಂದ್ರ ಬಾಬು ಅವರ ಪುತ್ರ. ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಅವರ ಸೋದರಳಿಯ.
ಇದನ್ನೂ ಓದಿ: ಅದ್ಧೂರಿಯಾಗಿ ದಾಂಪತ್ಯಕ್ಕೆ ಕಾಲಿರಿಸಿದ ವರುಣ್ ತೇಜ್- ಲಾವಣ್ಯ ತ್ರಿಪಾಠಿ; ಫೋಟೋಸ್