ನವದೆಹಲಿ: ದೇಶಾದ್ಯಂತ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿ, ಗಲ್ಲಾಪೆಟ್ಟಿಗೆ ಸೂರೆಗೈದ ವಿವೇಕ್ ಅಗ್ನಿಹೋತ್ರಿ ಅವರ 'ದಿ ಕಾಶ್ಮೀರಿ ಫೈಲ್ಸ್' ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ. ಇದರ ಬೆನ್ನಲ್ಲೇ ನಿರ್ದೇಶಕರು ತಮ್ಮ ಮುಂದಿನ ಸಿನಿಮಾ ಬಹಿರಂಗ ಮಾಡಿದ್ದಾರೆ. ರಾಜಕೀಯ ಪಕ್ಷಗಳ ಮಧ್ಯೆ ವಿವಾದ, ಕೆಸರೆರಚಾಟಕ್ಕೆ ಕಾರಣವಾಗಿದ್ದ 'ದಿ ಕಾಶ್ಮೀರಿ ಫೈಲ್ಸ್ 'ಸಿನಿಮಾ ಬಳಿಕ ಇದೀಗ 'ದಿ ಡೆಲ್ಲಿ ಫೈಲ್ಸ್' ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ.
ತಮ್ಮ ಮುಂದಿನ ಸಿನಿಮಾ ಬಗ್ಗೆ ಟ್ವಿಟರ್ನಲ್ಲಿ ಪ್ರಕಟಿಸಿರುವ ಅವರು, ಯಾವ ಘಟನೆ ಆಧಾರವಾಗಿಟ್ಟುಕೊಂಡು ಚಿತ್ರ ನಿರ್ಮಾಣಗೊಳ್ಳಲಿದೆ ಎಂಬುದರ ಬಗ್ಗೆ ಸುಳಿವು ಬಿಟ್ಟುಕೊಟ್ಟಿಲ್ಲ. ದಿ ಕಾಶ್ಮೀರಿ ಫೈಲ್ಸ್ ಸಿನಿಮಾವನ್ನು ದೇಶದ ಜನರು ಪ್ರೀತಿಯಿಂದ ಸ್ವೀಕಾರ ಮಾಡಿದ್ದಾರೆ. ಕಳೆದ 4 ವರ್ಷಗಳ ಕಾಲ ನಾವು ಪಟ್ಟ ಸತತ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಕಾಶ್ಮೀರಿ ಹಿಂದೂಗಳಿಗೆ ಆದ ಅನ್ಯಾಯ ಮತ್ತು ಅಲ್ಲಿನ ನರಮೇಧದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ನನ್ನ ಉದ್ದೇಶವಾಗಿತ್ತು, ಅದು ಫಲಿಸಿದೆ. ಇದೀಗ ಮತ್ತೊಂದು ಹೊಸ ಚಿತ್ರಕ್ಕೆ ಕೆಲಸ ಮಾಡುವ ಸಮಯ ಬಂದಿದ್ದು, ದಿ ಡೆಲ್ಲಿ ಫೈಲ್ಸ್ ಎಂಬ ನಿರ್ದೇಶನ ಮಾಡುತ್ತೇನೆಂದು ಹೇಳಿದ್ದಾರೆ.
1990ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದ ಹಿಂಸಾಚಾರವನ್ನು ಪ್ರಮುಖವಾಗಿಟ್ಟುಕೊಂಡು ದಿ ಕಾಶ್ಮೀರಿ ಫೈಲ್ಸ್ ನಿರ್ಮಾಣವಾಗಿತ್ತು. ಈ ಚಿತ್ರದಲ್ಲಿ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಷಿ, ದರ್ಶನ್ ಕುಮಾರ್ ಸೇರಿದಂತೆ ಅನೇಕರು ನಟಿಸಿದ್ದರು. ಚಿತ್ರ ಬಿಡುಗಡೆಯಾಗುತ್ತಿದ್ದಂತೆ ಅನೇಕ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ಸಹ ಸಿಕ್ಕಿತ್ತು.