ಕನ್ನಡ ಸಿನಿಮಾಗಳು ವಿಶ್ವದಾದ್ಯಂತ ಸದ್ದು ಮಾಡುತ್ತಿವೆ. ಅದ್ಧೂರಿ ಮೇಕಿಂಗ್ ಜೊತೆಗೆ ಬೆಸ್ಟ್ ಕಂಟೆಂಟ್ ಆಧಾರಿತ ಚಿತ್ರಗಳು ಸಿನಿಪ್ರಿಯರನ್ನು ಆಕರ್ಷಿಸುತ್ತಿವೆ. ಸ್ಯಾಂಡಲ್ವುಡ್ನಲ್ಲಿ ಹೊಸ ಸಿನಿಮಾಗಳ ಭರಾಟೆ ಜೋರಾಗಿದೆ. ಆದರೆ ಚಿತ್ರಮಂದಿರಗಳು ಮಾತ್ರ ಮಂಕಾಗಿವೆ. ಪ್ರೇಕ್ಷಕರು ಅಷ್ಟಾಗಿ ಚಿತ್ರಮಂದಿರಗಳತ್ತ ಬರುತ್ತಿಲ್ಲ ಅನ್ನೋದು ಮಾಲೀಕರ ಅಳಲು. ಇದರ ಎಫೆಕ್ಟ್ ನಿರ್ಮಾಪಕರು ಹಾಗೂ ಚಿತ್ರಮಂದಿರದ ಮಾಲೀಕರಿಗೆ ತಟ್ಟುತ್ತಿದೆ.
ಓಟಿಟಿಯಲ್ಲಿ ಶೀಘ್ರ ಬಿಡುಗಡೆ: ಅಷ್ಟಕ್ಕೂ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಏಕೆ ಬರುತ್ತಿಲ್ಲ ಅನ್ನೋದಕ್ಕೆ ಹಲವು ಕಾರಣಗಳಿವೆ. ಮೊದಲನೆಯದು, ಯಾವುದೇ ಹೊಸ ಸಿನಿಮಾ ಅಥವಾ ಸ್ಟಾರ್ ನಟರ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆದ ಒಂದೇ ತಿಂಗಳಿಗೆ ಓಟಿಟಿಯಲ್ಲಿ ಪ್ರಸಾರ ಪ್ರಾರಂಭಿಸುವುದು. ಈ ಹಿಂದೆ ಯಾವುದೇ ಸ್ಟಾರ್ ಸಿನಿಮಾ ಥಿಯೇಟರ್ನಲ್ಲಿ ಬಿಡುಗಡೆ ಆದ ಆರು ಅಥವಾ ಎಂಟು ತಿಂಗಳ ಬಳಿಕ ಟಿವಿ ಆಥವಾ ಓಟಿಟಿಯಲ್ಲಿ ರಿಲೀಸ್ ಆಗುತ್ತಿತ್ತು. ಆಗ ಜನರು ಥಿಯೇಟರ್ಗೆ ಬರುತ್ತಿದ್ದರು. ಆದ್ರೀಗ ಸಿನಿಮಾಗಳು ಕೆಲವೇ ದಿನಗಳೊಳಗೆ ಓಟಿಟಿಯಲ್ಲಿ ಬರುತ್ತೆ ಅಲ್ವಾ ಅನ್ನೋ ಕಾರಣಕ್ಕೆ ಅದೆಷ್ಟೋ ಪ್ರೇಕ್ಷಕರು ಚಿತ್ರಮಂದಿರಗಳ ಕಡೆ ಮುಖ ಮಾಡುತ್ತಿಲ್ಲ.
ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ ದುಬಾರಿ: ಇದರ ಜೊತೆಗೆ ಪ್ರೇಕ್ಷಕರಿಗೆ ದೊಡ್ಡ ಹೊರೆಯಾಗಿರುವ ವಿಷಯವೆಂದರೆ, ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ಗಳಲ್ಲಿ ಅತಿಯಾದ ಟಿಕೆಟ್ ಬೆಲೆ. ಹೌದು, ಕರ್ನಾಟಕದಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಲ್ಲಿ 150 ರೂಪಾಯಿಂದ 250 ರೂಪಾಯಿ, ಮಲ್ಟಿಪ್ಲೆಕ್ಸ್ಗಳಲ್ಲಿ 250 ರೂಪಾಯಿಯಿಂದ ಹಿಡಿದು 1,500 ರೂಪಾಯಿ ಇದೆ. ಸಹಜವಾಗಿ ಒಂದು ಫ್ಯಾಮಿಲಿ ಮಲ್ಟಿಪ್ಲೆಕ್ಸ್ನಲ್ಲಿ ಸಿನಿಮಾ ನೋಡಬೇಕಾದ್ರೆ, ಟಿಕೆಟ್, ಪಾಪ್ ಕಾರ್ನ್, ಕೂಲ್ ಡ್ರಿಂಕ್ಸ್, ಕಾರು ಪಾರ್ಕಿಂಗ್ ಅಂತಾ ಸೇರಿ ಸುಮಾರು ಸಾಕಷ್ಟು ಹಣ ಖರ್ಚಾಗುತ್ತದೆ. ಇದೆನ್ನೆಲ್ಲಾ ಲೆಕ್ಕ ಹಾಕುವ ಮನೆ ಯಜಮಾನ, ಸಿನಿಮಾಗಳನ್ನು ಮನೆಯಲ್ಲೇ ಓಟಿಟಿಯಲ್ಲಿ ಫ್ಯಾಮಿಲಿ ಸಮೇತ ನೋಡಬಹುದು ಅಂತಾ ಅಂದುಕೊಳ್ಳುತ್ತಾರೆ.
ಟಿಕೆಟ್ ದರ ಇಳಿಸಿ: ಇನ್ನೂ ಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು ಹಾಗೂ ಮಹಾರಾಷ್ಟ್ರದಲ್ಲಿರುವಂತೆ ಸಿನಿಮಾ ಟಿಕೆಟ್ ಬೆಲೆಯನ್ನು 60 ರೂಪಾಯಿಯಿಂದ 100 ರೂಪಾಯಿ ಮಾಡಬೇಕು. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಎಸಿ 80 ರೂ., ನಾನ್ ಎಸಿ 60 ರೂ. ಇದೆ. ಮಲ್ಟಿಪ್ಲೆಕ್ಸ್ಗಳಲ್ಲಿ ಕೂಡ 100 ರೂಪಾಯಿ ಟಿಕೆಟ್ ಬೆಲೆ ಇದೆ. ಇದು ಸಿನಿಮಾ ನೋಡುವ ಪ್ರೇಕ್ಷಕರಿಗೆ ಹೊರೆ ಆಗಲ್ಲ. ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ಮಾದರಿಯಂತೆ ಕರ್ನಾಟಕದಲ್ಲಿ ಟಿಕೆಟ್ ಬೆಲೆ 60 ರೂ.ನಿಂದ 100 ರೂ. ಆಗಬೇಕು ಅಂತಾ ಹಿರಿಯ ನಟ ಅಶೋಕ್ ಹೇಳಿದ್ದಾರೆ.
ಪಿಆರ್ಕೆ ಬ್ಯಾನರ್ನಲ್ಲಿ ನಿರ್ಮಾಣ ಆಗಿರುವ ಆಚಾರ್ ಅಂಡ್ ಕೋ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಹಿರಿಯ ನಟ ಅಶೋಕ್, ಚಿತ್ರಮಂದಿರಗಳಿಗೆ ಪ್ರೇಕ್ಷಕರು ಏಕೆ ಬರುತ್ತಿಲ್ಲ ಎಂಬ ಪ್ರಶ್ನೆಗೆ ಬಹಳ ಚೆನ್ನಾಗಿ ಉತ್ತರಿಸಿದರು. ಥಿಯೇಟರ್ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬರಬೇಕು ಅಂದರೆ, ಸರ್ಕಾರ ಹಾಗೂ ಕನ್ನಡ ಫಿಲ್ಮ್ ಚೇಂಬರ್ ಸೇರಿ ಸಿನಿಮಾ ಟಿಕೆಟ್ ಬೆಲೆಯನ್ನು ಕಡಿಮೆ ಮಾಡ ಮಾಡಬೇಕು. ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ಗಳಲ್ಲಿ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ಮಾದರಿಯಲ್ಲಿ ಟಿಕೆಟ್ ಬೆಲೆ ಮಾಡಿದಾಗ ಪ್ರೇಕ್ಷಕರು ಬರುತ್ತಾರೆ. ಕೂಡಲೇ ಸರ್ಕಾರ ಹಾಗೂ ಫಿಲ್ಮ್ ಚೇಂಬರ್ ಈ ಕೆಲಸ ಮಾಡಬೇಕಿದೆ ಅಂತಾ ನಟ ಅಶೋಕ್ ತಿಳಿಸಿದರು.
ಇದನ್ನೂ ಓದಿ: ಚಿರಂಜೀವಿ ಮೊಮ್ಮಗಳಿಗೆ ಸ್ಪೆಷಲ್ ರೂಂ... ಫಾರೆಸ್ಟ್ ಥೀಮ್ನೊಂದಿಗೆ ರೆಡಿಯಾಯ್ತು ರಾಮ್ ಚರಣ್ ಪುತ್ರಿಯ ಕೊಠಡಿ!
ಇಂದಿನ ಪರಿಸ್ಥಿತಿಯಲ್ಲಿ ಪ್ರೇಕ್ಷಕ ಚಿತ್ರಮಂದಿರಕ್ಕೆ ಬರಬೇಕು ಅಂದರೆ ವರ್ಷಕ್ಕೆ ಸ್ಟಾರ್ ನಟರ ಎರಡು ಅಥವಾ ಮೂರು ಸಿನಿಮಾಗಳು ಬಿಡುಗಡೆ ಆಗಬೇಕಿದೆ. ಹಾಗೆ ಆದ್ರೆ ಸಹಜವಾಗಿ ಪ್ರೇಕ್ಷಕರು ಥಿಯೇಟರ್ ಕಡೆ ಬರುವ ಮನಸ್ಸು ಮಾಡುತ್ತಾರೆ. ನೆಚ್ಚಿನ ನಟನಿಗಾಗಿ ಅಭಿಮಾನಿಗಳು ಬರುತ್ತಾರೆ. ಒಮ್ಮೆ ಬಂದವರಿಗೆ ಥಿಯೇಟರ್‌ಗಳ ಮೇಲೆ ವಿಶ್ವಾಸ ಬರುತ್ತದೆ.