ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ'ದ ಹಿಂದಿ ಟೀಸರ್ ಇಂದು ಬಿಡುಗಡೆಗೊಂಡಿದೆ. ಹಿಂದಿ ಅವತರಣಿಕೆಯ ಹಕ್ಕುಗಳನ್ನು ಬಾಲಿವುಡ್ನ ಪ್ರತಿಷ್ಠಿತ ನಿರ್ಮಾಣ ಮತ್ತು ವಿತರಣಾ ಸಂಸ್ಥೆಯಾದ ಆನಂದ್ ಮೋಷನ್ ಪಿಕ್ಚರ್ಸ್ ತನ್ನದಾಗಿಸಿಕೊಂಡಿದೆ.
ಸ್ವಾತಂತ್ರ್ಯ ಹೋರಾಟಗಾರ ಅಮರೇಶ್ವರನ ಮಗ ಅರ್ಕೇಶ್ವರ, 1960-1984 ರ ಅವಧಿಯಲ್ಲಿ ಭಾರತದ ಭೂಗತ ಜಗತ್ತಿನ ರಾಜನಾಗುತ್ತಾನೆ ಮತ್ತು ಭಾರತೀಯ ಇತಿಹಾಸದಲ್ಲಿ ತನ್ನ ಛಾಪು ಮೂಡಿಸುತ್ತಾನೆ. ಇಂಥದ್ದೊಂದು ಕಥೆ ಇರುವ ‘ಕಬ್ಜ’ ಚಿತ್ರದ ಬಗ್ಗೆ ಬರೀ ಕನ್ನಡವಷ್ಟೇ ಅಲ್ಲ, ಇಡೀ ಸಿನಿಮಾ ಇಂಡಸ್ಟ್ರಿಯೇ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳನ್ನಿಟ್ಟುಕೊಂಡಿದೆ.
ಈ ಬಗ್ಗೆ ಕಬ್ಜ ಚಿತ್ರದ ವಿತರಣೆಯ ಹಕ್ಕನ್ನು ಪಡೆದಿರುವ ಆನಂದ್ ಪಂಡಿತ್ ಮಾತನಾಡಿದ್ದು, ಪ್ರೇಕ್ಷಕರನ್ನು ಮನರಂಜಿಸುವುದೇ ನಮ್ಮ ಉದ್ದೇಶ. ಖಂಡಿತವಾಗಿಯೂ ಆ ಕೆಲಸವನ್ನು ಕಬ್ಜ ಚಿತ್ರ ಮಾಡುತ್ತದೆ ಎಂಬ ಸಂಪೂರ್ಣ ನಂಬಿಕೆ ನಮಗಿದೆ ಎಂದು ಹೇಳಿಕೊಂಡಿದ್ದಾರೆ. ಚಿತ್ರದ ನಾಯಕ ನಟ ಉಪೇಂದ್ರ ಕೂಡ ಈ ಬಗ್ಗೆ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ ಮತ್ತು ಆನಂದ್ ಅವರ ಸಹಕಾರ ಯಾವಾಗಲೂ ಹೀಗೆಯೇ ಮುಂದುವರೆಯಲಿ ಎಂದು ಹೇಳಿದ್ದಾರೆ. ಇನ್ನು ಈ ಚಿತ್ರದಲ್ಲಿ ಸುದೀಪ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಈ ಕುರಿತು ಮಾತನಾಡಿದ್ದು, ಇದು ಚಿತ್ರತಂಡದ ಕಠಿಣ ಪರಿಶ್ರಮಕ್ಕೆ ಸಿಕ್ಕ ಫಲ ಎಂದಿದ್ದಾರೆ.
ಮುಕುಂದ ಮುರಾರಿ ಸಿನಿಮಾದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದ ಉಪೇಂದ್ರ ಮತ್ತು ಸುದೀಪ್ ಮತ್ತೆ ಕಬ್ಜ ಚಿತ್ರದಲ್ಲೂ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗಂತೂ ಫುಲ್ ಖುಷಿಕೊಟ್ಟಿದೆ. ಇನ್ನು, ಈ ಚಿತ್ರದಲ್ಲಿ ಶ್ರೀಯಾ ಶರಣ್, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ಮುರಳಿ ಶರ್ಮ ನವಾಬ್ ಷಾ, ಮತ್ತು ತೆಲುಗು ನಟ ಪೊಸಾನಿ ಕೃಷ್ಣ ಮುರಳಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
- " class="align-text-top noRightClick twitterSection" data="">
ಎಂ.ಟಿ.ಬಿ ನಾಗರಾಜ್ ಅರ್ಪಿಸುವ, ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್. ಚಂದ್ರು ನಿರ್ಮಿಸುತ್ತಿರುವ 'ಕಬ್ಜ'ಕ್ಕೆ ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನವಿದೆ. ಎ.ಜೆ ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್ ಮತ್ತು ಶೇಖರ್ ನೃತ್ಯ ನಿರ್ದೇಶನ, ರವಿವರ್ಮ, ವಿಕ್ರಂಮೋರ್ ಮತ್ತು ವಿಜಯ್ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಕಬ್ಜದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿದ್ದು, ಮುಂದಿನ ವರ್ಷ ಹಲವು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿದೆ.
ಈ ಬಗ್ಗೆ ನಿರ್ದೇಶಕ ಆರ್.ಚಂದ್ರು ಮಾತಾಡಿದ್ದು, ಆನಂದ್ ಮೋಷನ್ ಪಿಕ್ಚರ್ಸ್ ಸಂಸ್ಥೆಯು ನಮ್ಮೊಂದಿಗೆ ಕೈ ಜೋಡಿಸಿರುವುದು ನಮ್ಮ ಬದ್ಧತೆ ಮತ್ತು ಪ್ರಯತ್ನಕ್ಕೆ ಸಿಕ್ಕ ಮನ್ನಣೆ. ಟೀಸರ್ನಿಂದಲೇ ಕುತೂಹಲ ಹುಟ್ಟಿಸಿರೋ ಚಿತ್ರದ ಬಿಡುಗಡೆ ದಿನಾಂಕ ಸದ್ಯದಲ್ಲೇ ಅಧಿಕೃತವಾಗಿ ಘೋಷಿಸುತ್ತೇವೆ ಎಂದು ಹೇಳಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಬ್ಜ ಚಿತ್ರವು ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ.
ಇದನ್ನೂ ಓದಿ:ಬಾಲಿವುಡ್ನ ಖ್ಯಾತ ನಿರ್ಮಾಪಕ ಆನಂದ್ ಪಂಡಿತ್ ಪಾಲಾದ ಕಬ್ಜ ಚಿತ್ರದ ಹಿಂದಿ ವಿತರಣೆ ಹಕ್ಕು