ಬಾಲಿವುಡ್ನ ಬಹು ನಿರೀಕ್ಷಿತ ಚಿತ್ರ ಪಠಾಣ್ ಬಿಡುಗಡೆಗೂ ಮುನ್ನ ಭಾರಿ ಸುದ್ದಿ ಮಾಡಿದೆ. ಪಠಾಣ್ ಟ್ರೈಲರ್ ಅನ್ನು ಇದೇ ಜನವರಿ 10ರಂದು ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಸಿನಿಮಾ ಯಶಸ್ವಿಗೊಳಿಸುವ ಸಲುವಾಗಿ ಚಿತ್ರತಂಡ ಟ್ರೈಲರ್ಗೂ ಮುನ್ನ ಜನರನ್ನು ತಲುಪಲು ಎರಡು ಹಾಡುಗಳನ್ನು ಬಿಡುಗಡೆ ಮಾಡಿದೆ. ಡಿಸೆಂಬರ್ 12ರಂದು ಬಿಡುಗಡೆ ಆದ ಬೇಶರಂ ರಂಗ್ ಹಾಡು ನಟಿಯ ವೇಷಭೂಷಣದ ಹಿನ್ನೆಲೆ ಭಾರಿ ವಿವಾದಕ್ಕೊಳಗಾಯಿತು.
ಅದಾದ ಬಳಿಕ ಡಿಸೆಂಬರ್ 22ರಂದು ಜೂಮೆ ಜೋ ಪಠಾಣ್ ಹಾಡು ರಿಲೀಸ್ ಆಯಿತು. 2 ನಿಮಿಷ 37 ಸೆಕೆಂಡ್ಸ್ ಉಳ್ಳ ಟ್ರೈಲರ್ ಇದೇ 10ರಂದು ಬಿಡುಗಡೆ ಆಗಲಿದ್ದು, ಸಿನಿಮಾ ಜನವರಿ 25 ರಂದು ಅದ್ಧೂರಿಯಾಗಿ ತೆರೆ ಕಾಣಲಿದೆ. 2022ನೇ ವರ್ಷ ಬಾಲಿವುಡ್ಗೆ ಹೇಳುವಷ್ಟರ ಮಟ್ಟಿಗೇನೂ ಯಶಸ್ಸನ್ನು ತಂದುಕೊಡಲಿಲ್ಲ ಎಂದರೆ ತಪ್ಪಾಗಲ್ಲ. ಸೌತ್ ಸಿನಿಮಾಗಳ ಅಬ್ಬರಕ್ಕೆ ನಲುಗಿ, ಚೇತರಿಕೆ ಮಾರ್ಗದಲ್ಲಿದ್ದ ಬಾಲಿವುಡ್ ಚಿತ್ರತಂಗಕ್ಕೆ ಮತ್ತೆ ಬಾಯ್ಕಾಟ್ ಬಿಸಿ ತಾಗಿದೆ ನೋಡಿ. ಬಹುನಿರೀಕ್ಷಿತ ಪಠಾಣ್ ಸಿನಿಮಾ ಈಗ ವಿವಾದದ ಸುಳಿಯಲ್ಲಿ ಸಿಲುಕಿದೆ. ಬೇಶರಂ ಹಾಡು ರಿಲೀಸ್ ಆಗಿದ್ದೇ ತಡ ಅದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.
ನಟಿಯ ವೇಷಭೂಷಣ ಮತ್ತು ಕೇಸರಿ ಬಣ್ಣದ ಬಿಕಿನಿ ಬಗ್ಗೆ ವಿರೋಧ ವ್ಯಕ್ತವಾಗುತ್ತಲೇ ಇದೆ. ಹಾಗಂತ ಹಾಡನ್ನು ಮೆಚ್ಚಿ ಕೊಂಡಾಡಿದವರ ಸಂಖ್ಯೆಯೂ ಕಡಿಮೆ ಇಲ್ಲ. ಅದರಲ್ಲೂ 57ರ ವಯಸ್ಸಿನಲ್ಲೂ ಶಾರುಖ್ ಖಾನ್ ತಮ್ಮ ಬಾಡಿ ಮೈಂಟೈನ್ ಮಾಡಿರೋ ಬಗ್ಗೆ, ಹಾಡಿನಲ್ಲಿ ಸಖತ್ ಹಾಟ್ ಅಂಡ್ ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡಿರುವ ಬಗ್ಗೆ ಸಖತ್ ಮೆಚ್ಚುಗೆ ವ್ಯಕ್ತವಾಗಿದೆ.
ಇದೀಗ ಉತ್ತರ ಪ್ರದೇಶದ ಬಹ್ರೈಚ್ (Bahraich) ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯು (ಸಿಡಬ್ಲ್ಯುಸಿ) ಪಠಾಣ್ ಚಿತ್ರದ ಹಾಡು ಬೇಷರಮ್ ರಂಗ್ ಮತ್ತು ಇತರ ಅಶ್ಲೀಲ ವಿಷಯಗಳನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದು ಹಾಕುವಂತೆ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಸಲಹೆ ನೀಡಿದೆ. ಹದಿಹರೆಯದವರ ಮನಸ್ಸಿನ ಮೇಲೆ ಪ್ರಭಾವ ಬಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳುವಂತೆ ತಿಳಿಸಿದೆ.
ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ 2015ರ ಸಂಬಂಧಿತ ಸೆಕ್ಷನ್ ಅಡಿ ನೀಡಲಾದ ಅಧಿಕಾರವನ್ನು ಬಳಸಿಕೊಂಡು, ಮಕ್ಕಳ ಕಲ್ಯಾಣ ಸಮಿತಿ, ಬಹ್ರೈಚ್ (ಮ್ಯಾಜಿಸ್ಟ್ರೇಟ್ ಬೆಂಚ್)ಯು ಡಿಜಿಪಿಗೆ ಪತ್ರ ಬರೆದಿದೆ. ಬೇಷರಮ್ ರಂಗ್ ಹಾಡು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅಶ್ಲೀಲ ವಿಡಿಯೋ ತೆಗೆಯುವಂತೆ ತಿಳಿಸಿದೆ.
ಇದನ್ನೂ ಓದಿ: ಬೇಶರಂ ರಂಗ್ ಹಾಡಿನಲ್ಲಿ ಬದಲಾವಣೆ ಮಾಡಲು ಚಿತ್ರತಂಡಕ್ಕೆ ಸಿಬಿಎಫ್‌ಸಿ ಸೂಚನೆ
ಡಿಜಿಪಿಗೆ ಕಳುಹಿಸಿದ ಪತ್ರದಲ್ಲಿ, ಬಹ್ರೈಚ್ ಸಿಡಬ್ಲ್ಯೂಸಿ ಅಧ್ಯಕ್ಷ ಸತೀಶ್ ಕುಮಾರ್ ಶ್ರೀವಾಸ್ತವ ಮತ್ತು ದೀಪಮಾಲಾ ಪ್ರಧಾನ್, ಅರ್ಚನಾ ಪಾಂಡೆ ಮತ್ತು ನವನೀತ್ ಮಿಶ್ರಾ ಅವರನ್ನೊಳಗೊಂಡ ನಾಲ್ವರು ಸದಸ್ಯರ ಪೀಠವು ಹದಿಹರೆಯದವರಿಗೆ ಉತ್ತರ ಪ್ರದೇಶ ಸರ್ಕಾರವು ಅವರ ಸರ್ವಾಂಗೀಣಕ್ಕಾಗಿ ಸ್ಮಾರ್ಟ್ ಮೊಬೈಲ್ ಫೋನ್‌ಗಳನ್ನು ಒದಗಿಸಿದೆ ಎಂದು ಹೇಳಿದೆ. ಸುಲಭವಾಗಿ ಲಭ್ಯವಿರುವ ವಿಷಯಗಳನ್ನು ವೀಕ್ಷಿಸುವುದನ್ನು ನಿಲ್ಲಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ಮಾಧ್ಯಮದಿಂದ ಅಶ್ಲೀಲ ವಿಷಯವನ್ನು ತೆಗೆದುಹಾಕುವುದು ಅವರ ಹಿತದೃಷ್ಟಿಯಿಂದ ಅಗತ್ಯ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ 'ಪಠಾಣ್' ಸಿನಿಮಾದ್ದಲ್ಲ
ಏತನ್ಮಧ್ಯೆ, ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದಡಿ ದೆಹಲಿ ಮೂಲದ ವಕೀಲರೊಬ್ಬರು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಮತ್ತು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ)ಗೆ ದೂರು ಸಲ್ಲಿಸಿದ್ದರು. ಆದಾದ ಬಳಿಕ ಚಲನಚಿತ್ರ ಮತ್ತು ಹಾಡುಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಮತ್ತು ಅದರ ಬಿಡುಗಡೆಗೂ ಮೊದಲು ಪರಿಷ್ಕೃತ ಆವೃತ್ತಿಯನ್ನು ಸಲ್ಲಿಸಲು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಚಿತ್ರ ತಯಾರಕರಿಗೆ ಸೂಚಿಸಿದೆ ಎಂದು ಸಿಬಿಎಫ್‌ಸಿ ಅಧ್ಯಕ್ಷ ಪ್ರಸೂನ್ ಜೋಶಿ ಹೇಳಿದ್ದರು.