ಕನ್ನಡ ಚಿತ್ರರಂಗಕ್ಕೆ ವಿಭಿನದ ಕಥಾಹಂದರವುಳ್ಳ ಸಿನಿಮಾಗಳ ಮೂಲಕ ಹೊಸ ಹೊಸ ತಂಡಗಳ ಆಗಮನವಾಗುತ್ತಲೇ ಇದೆ. ಇದೀಗ ಹೊಸ ತಂಡವೊಂದು ಚಿತ್ರರಂಗ ಪ್ರವೇಶಿಸಿದ್ದು, The Darwins in ದಂಡಿದುರ್ಗ ಎಂಬ ಸಿನಿಮಾ ತಯಾರಿಸುತ್ತಿದ್ದಾರೆ. ಕಳೆದ ಎಂಟು ವರ್ಷಗಳಿಂದ ಅಸಿಸ್ಟೆಂಟ್, ಅಸೋಸಿಯೇಟ್ ಆಗಿ, ಕೋ ಡೈರೆಕ್ಟರ್, ರೈಟರ್ ಕೆಲಸ ಮಾಡಿರುವ ಅನುಭವ ಇರುವ ತ್ರಿಭುವನ್ ಶ್ರೀಕಾಂತ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಇದು ಇವರ ಚೊಚ್ಚಲ ಸಿನಿಮಾ. ಈ ಚಿತ್ರ ಮೂಲಕ ತ್ರಿಭುವನ್ ಶ್ರೀಕಾಂತ್ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.
ಗುರುವಾರದಂದು ಬೆಂಗಳೂರಿನ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ಸಿನಿಮಾದ ಮುಹೂರ್ತ ನೆರವೇರಿದ್ದು, ನಿರ್ದೇಶಕ ಕಂ ನಿರ್ಮಾಪಕ ಸತ್ಯಪ್ರಕಾಶ್, ನಟ ಅಜಯ್ ರಾವ್, ನಿರ್ಮಾಪಕ ಕೆ ಮಂಜು ಅವರು ಹೊಸಬರ ಈ ಚಿತ್ರಕ್ಕೆ ಸಾಥ್ ಕೊಡುವ ಮೂಲಕ ಹೊಸತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದರು.
ಈ ಬಗ್ಗೆ ಮಾತನಾಡಿದ ನಿರ್ದೇಶಕ ತ್ರಿಭುವನ್ ಶ್ರೀಕಾಂತ್, ಇದು ನನ್ನ ನಿರ್ದೇಶನದ ಮೊದಲ ಸಿನಿಮಾ. The Darwins in ದಂಡಿದುರ್ಗ ಹೆಸರೇ ಹೇಳುವ ಹಾಗೆ ದಂಡಿದುರ್ಗ ಒಂದು ಜಾಗ. ಪ್ರತಿ ಜಾಗಕ್ಕೂ ಅದರದ್ದೇ ಆದ ವ್ಯಾಕರಣ, ಇತಿಹಾಸ, ಸೊಗಡು, ಘಮಲು ಇರುತ್ತದೆ. ಈ ಸಿನಿಮಾ ಮೂಲಕ ದಂಡಿದುರ್ಗದ ಘಮಲನ್ನು ಎಲ್ಲರಿಗೂ ತೋರಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಬೈ ಒನ್ ಗೆಟ್ ಒನ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಯುವ ಪ್ರತಿಭೆಗಳಾದ ಮಿಥುನ್ ಮತ್ತು ಮಿಲನ್ The Darwins in ದಂಡಿದುರ್ಗ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ಆರತಿ ನಾಯರ್ ನಾಯಕಿಯಾಗಿ ಬಣ್ಣ ಹಚ್ಚಲಿದ್ದು, ಇದು ಇವರ ಮೊದಲ ಸಿನಿಮಾವಾಗಿದೆ. ಸಿನಿಮಾದ ಟೈಟಲ್ ಹೇಳುವಂತೆ ಇದು ದಂಡಿದುರ್ಗದ ಕಥೆ. ಅಲ್ಲಿನ ಜನರ ಪ್ರೀತಿ , ದ್ವೇಷ, ಕಾಮ, ರಾಜಕೀಯ ಹೋರಾಟ, ದೇವರು, ಧರ್ಮ ಎಲ್ಲವನ್ನೂ ಸಿನಿಮಾದಲ್ಲಿ ಕಟ್ಟಿಕೊಡಲಾಗುತ್ತದೆ. ದಂಡಿದುರ್ಗದ ಗದ್ದುಗೆಗೆ ಪ್ರಬಲ ಶಕ್ತಿಗಳ ನಡುವಿನ ಹೋರಾಟದ ಕಥಾನಕ ಸಿನಿಮಾದ ಮುಖ್ಯವಸ್ತುವಾಗಿದೆ.
ಇದನ್ನೂ ಓದಿ: ಶಿವ 143 ಸಿನಿಮಾ ಬಿಡುಗಡೆ.. ಧೀರನ್ ರಾಮ್ ಕುಮಾರ್ ಬಗ್ಗೆ ಶಿವರಾಜ್ ಕುಮಾರ್ ಹೇಳಿದ್ದೇನು ಗೊತ್ತಾ?
ಎಸ್ಬಿಎಸ್ಸಿ ಕ್ರಿಯೇಷನ್ ನಡಿ ಮಧುರಾಜ್ ನಿರ್ಮಾಣ ಮಾಡ್ತಿರುವ ಎರಡನೇ ಸಿನಿಮಾ ಇದಾಗಿದ್ದು, ರಾಮ ರಾಮ ರೇ ಸಿನಿಮಾ ಖ್ಯಾತಿಯ ಲವಿತ್ ಕ್ಯಾಮರಾ ಕೈಚಳಕ, ಉಮೇಶ್ ಸಂಕಲನ, ಅನಿಲ್ ಸಿಜೆ ಸಂಗೀತ ಈ ಸಿನಿಮಾಕ್ಕಿದೆ. ಎರಡು ಹಂತದಲ್ಲಿ ಶೂಟಿಂಗ್ ನಡೆಸುವ ಪ್ಲ್ಯಾನ್ ಹಾಕಿಕೊಂಡಿರುವ ಚಿತ್ರತಂಡ ಮೈಸೂರು, ಮಂಡ್ಯ, ಶ್ರೀರಂಗಪಟ್ಟಣ ಸುತ್ತಮುತ್ತ ಹಾಗೂ ಬಳ್ಳಾರಿಯಲ್ಲಿ ಚಿತ್ರೀಕರಣ ನಡೆಸಲಿದೆ. ಸೆಪ್ಟಂಬರ್ ಮೂರನೇ ವಾರದಲ್ಲಿ The Darwins in ದಂಡಿದುರ್ಗ ಸಿನಿಮಾ ಶೂಟಿಂಗ್ ಆರಂಭವಾಗಲಿದೆ. ಇನ್ನೂ ಸೌತ್ ಫಿಲ್ಮ್ ಇಂಡಸ್ಟ್ರಿ ಇಬ್ಬರು ಸೂಪರ್ ಸ್ಟಾರ್ ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಅನ್ನೋ ಮಾಹಿತಿ ಇದೆ.