ಡಾಲಿ ಧನಂಜಯ್ ನಿರ್ಮಾಣದ ಗ್ರಾಮೀಣ ಸೊಗಡಿನ ಕಥೆ ಹೊಂದಿರುವ 'ಟಗರು ಪಲ್ಯ' ಸಿನಿಮಾ ಇಂದು ರಾಜ್ಯಾದ್ಯಂತ ತೆರೆ ಕಂಡಿದೆ. ಹೆಚ್ಚಿನ ಥಿಯೇಟರ್ಗಳು ಹೌಸ್ ಫುಲ್ ಆಗಿದೆ. ಚಿತ್ರ ವೀಕ್ಷಿಸಿದ ಸಿನಿಪ್ರೇಮಿಗಳಿಂದ ಕಥೆಗೆ ಮೆಚ್ಚುಗೆ ಸಿಕ್ಕಿದ್ದು, ಈ ವರ್ಷದ ಕನ್ನಡದ ಹಿಟ್ ಸಿನಿಮಾಗಳ ಸಾಲಿನಲ್ಲಿ 'ಟಗರು ಪಲ್ಯ'ವೂ ಒಂದು ಅಂತಿದ್ದಾರೆ.
ಇಂದು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವೀರೇಶ್ ಚಿತ್ರಮಂದಿರದಲ್ಲಿ 'ಟಗರು ಪಲ್ಯ' ಹೌಸ್ಫುಲ್ ಪ್ರದರ್ಶನ ಕಂಡಿದೆ. ಥಿಯೇಟರ್ ಮುಂದೆ ನಟ ನೆನಪಿರಲಿ ಪ್ರೇಮ್, ಮಗಳು ಅಮೃತಾ ಜೊತೆ ಭರ್ಜರಿ ಡ್ಯಾನ್ಸ್ ಮಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಬಳಿಕ ನಟರಾದ ಧನಂಜಯ್, ನಾಗಭೂಷಣ್ ಸೇರಿದಂತೆ ಇಡೀ 'ಟಗರು ಪಲ್ಯ' ಚಿತ್ರತಂಡ ಫಸ್ಟ್ ಡೇ ಫಸ್ಟ್ ಶೋವನ್ನು ಪ್ರೇಕ್ಷಕರ ಜೊತೆ ಕುಳಿತು ವೀಕ್ಷಿಸಿ ಎಂಜಾಯ್ ಮಾಡಿದ್ದಾರೆ.
ಚಿತ್ರಕಥೆ: ಈ ಸಿನಿಮಾದಲ್ಲಿ ನಾಗಭೂಷಣ್, ಅಮೃತಾ ಪ್ರೇಮ್ ಅಲ್ಲದೇ ರಂಗಾಯಣ ರಘು, ತಾರಾ ಅನುರಾಧ ಮುಖ್ಯಭೂಮಿಕೆಯಲ್ಲಿದ್ದಾರೆ. ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ ಜೊತೆ ಹೊಟ್ಟೆ ಹುಣ್ಣಾಗಿಸುವ ಸಿನಿಮಾ. ಚಿತ್ರಕಥೆ ಏನಪ್ಪಾ ಅಂದ್ರೆ, ಮಂಡ್ಯ ಭಾಗದ ಹಳ್ಳಿಯೊಂದರ ದಂಪತಿ ರಂಗಾಯಣ ರಘು ಮತ್ತು ತಾರಾ. ಇವರ ಮಗಳೇ ಅಮೃತಾ ಪ್ರೇಮ್.
ಇದನ್ನೂ ಓದಿ: 'ಟಗರು ಪಲ್ಯ' ಸಿನಿಮಾ ವೀಕ್ಷಣೆಗೆ ಸಿಎಂ ಸಿದ್ದರಾಮಯ್ಯರನ್ನು ಆಹ್ವಾನಿಸಿದ ಡಾಲಿ ಧನಂಜಯ್
ಮಗಳ ಮದುವೆ ಫಿಕ್ಸ್ ಆಯ್ತು ಅಂತ ಹರಕೆ ತೀರಿಸಲು ಕುಟುಂಬದವರು ತೀರ್ಮಾನ ಮಾಡುತ್ತಾರೆ. ಅದರಂತೆ ಟಗರು ತಂದು ಊರ ದೇವರಿಗೆ ಹರಕೆ ತೀರಿಸಲು ಊರಿನವರ ಜೊತೆ ಜಲಪಾತದ ಮಧ್ಯೆ ಇರುವ ದೇವಸ್ಥಾನಕ್ಕೆ ಬರುತ್ತಾರೆ. ಟಗರನ್ನು ಬಲಿ ಕೊಟ್ಟು ಹರಕೆ ತೀರಿಸುವ ಸಂಪ್ರದಾಯ ಇಲ್ಲಿನ ಜನರದ್ದಾಗಿರುತ್ತದೆ. ಆದರೆ ಇಲ್ಲಿ ಹರಕೆಗೆ ತಂದ ಟಗರು ದೇವರ ಮುಂದೆ ಒದರುವುದಿಲ್ಲ. ಅಲ್ಲಿಂದ ಮುಂದೆ ಏನಾಗುತ್ತದೆ ಅನ್ನೋದು 'ಟಗರು ಪಲ್ಯ' ಚಿತ್ರದ ಜೀವಾಳ.
ಹಾಸ್ಯ ಪಾತ್ರಗಳಿಂದ ಗಮನ ಸೆಳೆದಿದ್ದ ನಟ ನಾಗಭೂಷಣ್ 'ಟಗರು ಪಲ್ಯ' ಚಿತ್ರದಲ್ಲಿ ಕಾಮಿಡಿ ಜೊತೆಗೆ ಜವಾಬ್ದಾರಿಯುತ ಪಾತ್ರದಲ್ಲಿ ಮಿಂಚಿದ್ದಾರೆ. ಅಮೃತಾ ಪ್ರೇಮ್ ಅವರಿಗೆ ಇದು ಮೊದಲ ಸಿನಿಮಾವಾದ್ರೂ, ಹಾಗನಿಸುವುದಿಲ್ಲ. ಸಿಕ್ಕ ಅವಕಾಶವನ್ನು ತುಂಬಾ ಚೆನ್ನಾಗಿಯೇ ಬಳಸಿಕೊಂಡು ಚೊಚ್ಚಲ ಚಿತ್ರದಲ್ಲೇ ಭರವಸೆಯ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ನಾಗಭೂಷಣ್ ಹಾಗೂ ಅಮೃತಾ ಪ್ರೇಮ್ ಜೋಡಿ ತೆರೆ ಮೇಲೆ ನೋಡುವುಕ್ಕೇನೆ ಚೆಂದ.
'ಟಗರು ಪಲ್ಯ'ದಲ್ಲಿ ಯಾರಿದ್ದಾರೆ?: ಚಿತ್ರಕ್ಕೆ ನಾಗಭೂಷಣ್ ನಾಯಕನಾದ್ರೆ, ಅಮೃತಾ ಪ್ರೇಮ್ ನಾಯಕಿ. ಇವರಲ್ಲದೇ, ತಾರಾ ಅನುರಾಧ, ಶರತ್ ಲೋಹಿತಾಶ್ವ, ರಂಗಾಯಣ ರಘು, ವೈಜನಾಥ್ ಬಿರಾದಾರ್, ಚಿತ್ರ ಶೆಣೈ ಇದ್ದಾರೆ. ಉಮೇಶ್.ಕೆ.ಕೃಪ ನಿರ್ದೇಶನ, ವಾಸುಕಿ ವೈಭವ್ ಸಂಗೀತ ನಿರ್ದೇಶನ, ಎಸ್.ಕೆ.ರಾವ್ ಕ್ಯಾಮರಾ ವರ್ಕ್ ಚಿತ್ರಕ್ಕಿದೆ. ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಡಾಲಿ ಧನಂಜಯ್ ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: ಟಗರು ಪಲ್ಯ 'ಸಂಬಂಜ ಅನ್ನೋದು ದೊಡ್ದು ಕನಾ' ಸಾಂಗ್ ಔಟ್