ಕನ್ನಡ ಚಿತ್ರರಂಗದಲ್ಲಿ 'ಗಂಟುಮೂಟೆ', 'ಟಾಮ್ ಅಂಡ್ ಜೆರ್ರಿ' ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಯುವ ನಟ ನಿಶ್ಚಿತ್ ಕೊರೋಡಿ ಸದ್ಯ 'ಸಪ್ಲೈಯರ್ ಶಂಕರ' ಸಿನಿಮಾ ಶೂಟಿಂಗ್ ಮುಗಿಸಿದ್ದು, ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಹಾಡುಗಳಿಂದ ಗಮನ ಸೆಳೆಯುತ್ತಿರೋ ಸಪ್ಲೈಯರ್ ಶಂಕರ ಚಿತ್ರ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ. ಟೀಸರ್ ಹಾಗೂ ಹಾಡುಗಳಿಂದ ಸದ್ದು ಮಾಡುತ್ತಿರುವ ಚಿತ್ರವು ಸಿನಿಪ್ರೇಮಿಗಳಲ್ಲಿ ಕುತೂಹಲ ಹುಟ್ಟಿಸಿದೆ.
ಸಪ್ಲೆಯರ್ ಶಂಕರ ಚಿತ್ರವು ಬಾರ್ ಸಪ್ಲೈಯರ್ ಒಬ್ಬನ ಸುತ್ತ ನಡೆಯುವ ಕಥೆಯಾಗಿದೆ. ನಿಶ್ಚಿತ್ ಕರೋಡಿ ಈ ಚಿತ್ರದಲ್ಲಿ ಸಪ್ಲೈಯರ್ ಶಂಕರನಾಗಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಆರಾಧ್ಯ ಈ ಚಿತ್ರದ ನಾಯಕಿ. ಗೋಪಾಲಕೃಷ್ಣ ದೇಶಪಾಂಡೆ, ನವೀನ್ ಪಡೀಲ್, ಜ್ಯೋತಿ ರೈ ಮುಂತಾದವರು ತಾರಾಬಳಗದಲ್ಲಿದ್ದಾರೆ.
ನಿರ್ದೇಶಕ ರಂಜಿತ್ ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಲವ್, ಕಾಮಿಡಿ, ತಾಯಿ-ಮಗನ ಸೆಂಟಿಮೆಂಟ್, ಬಾರ್ ಸಪ್ಲೈಯರ್ ಜೀವನದ ಜೊತೆಗೆ ಸಸ್ಪೆನ್ ಥ್ರಿಲ್ಲರ್ ಕಥಾಹಂದರವನ್ನು ಈ ಚಿತ್ರ ಒಳಗೊಂಡಿದೆ. ಸತೀಶ್ ಕುಮಾರ್ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಅವರ ಸಂಕಲನ ಹಾಗೂ ಬಾಲಾಜಿ ಅವರ ಕಲಾ ನಿರ್ದೇಶನವಿದೆ.
ತ್ರಿನೇತ್ರ ಫಿಲಂಸ್ ಲಾಂಛನದಲ್ಲಿ ಎಂ. ಚಂದ್ರಶೇಖರ್ ಹಾಗೂ ಎಂ.ನಾಗೇಂದ್ರ ಸಿಂಗ್ ನಿರ್ಮಿಸಿರುವ ಸಪ್ಲೈಯರ್ ಶಂಕರ ಫೆಬ್ರವರಿ 2 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಆನಂದ್ ಆಡಿಯೋ ಮೂಲಕ ಟೀಸರ್ ಹಾಗೂ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಬಿಡುಗಡೆ ದಿನಾಂಕವನ್ನು ತಿಳಿಸಿದೆ.
ಅಕ್ಟೋಬರ್ನಲ್ಲಿ ಸಿನಿಮಾ ಟೀಸರ್ ರಿಲೀಸ್ ಆಗಿದ್ದು, ಸಿನಿಮಾ ಕುರಿತು ನಾಯಕ ನಟ ನಿಶ್ಚಿತ್ ಕೊರೋಡಿ ಮಾತನಾಡಿದ್ದರು. "ನಾನು ಈ ಹಿಂದೆ ಗಂಟು ಮೂಟೆ ಹಾಗೂ ಟಾಮ್ & ಜೆರ್ರಿ ಚಿತ್ರಗಳಲ್ಲಿ ನಟಿಸಿದ್ದೆ. ಇದು ನನ್ನ ಮೂರನೇ ಚಿತ್ರ. ಬಾರ್ ಸಪ್ಲೈಯರ್ ಪಾತ್ರ ನನ್ನದು. ಹಾಗಂತ ಈ ಚಿತ್ರದಲ್ಲಿ ಬರೀ ಸಪ್ಲೈಯರ್ ಕಥೆ ಮಾತ್ರ ಇಲ್ಲ. ಕಾಮಿಡಿ, ಸೆಂಟಿಮೆಂಟ್, ಲವ್, ಥ್ರಿಲ್ಲರ್ ಎಲ್ಲವೂ ಇದೆ. ನಿರ್ದೇಶಕ ರಂಜಿತ್ ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ನಮ್ಮ ಚಿತ್ರ ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ" ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ರಂಗಾಯಣ ರಘು 'ರಂಗಸಮುದ್ರ' ಚಿತ್ರಕ್ಕೆ ರಾಘವೇಂದ್ರ ರಾಜ್ಕುಮಾರ್ ಸಾಥ್: ಟ್ರೇಲರ್ ರಿಲೀಸ್