ದುನಿಯಾ ಖ್ಯಾತಿಯ ಸೂರಿ ಗರಡಿಯಲ್ಲಿ ಪಳಗಿರುವ ಹುಡುಗರು ನಟ ಹಾಗೂ ನಿರ್ದೇಶಕರಾಗಿ ಹೊರ ಹೊಮ್ಮುತ್ತಿದ್ದಾರೆ. ಇದೀಗ ಕಡ್ಡಿಪುಡಿ, ಕೆಂಡಸಂಪಿಗೆ, ದೊಡ್ಡಮನೆ ಹುಡುಗ, ಟಗರು ಚಿತ್ರಗಳಿಗೆ ಸಹ ನಿರ್ದೇಶಕರಾಗಿ ದುಡಿದಿದ್ದ ಅಭಿ ಈ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಸಲಗ ಸಿನಿಮಾದಲ್ಲಿ ಕೆಂಡ ಎಂಬ ಪಾತ್ರದಿಂದಲೇ ಗಮನ ಸೆಳೆದಿರೋ ಶ್ರೇಷ್ಠ ಈಗ ನಟನಾಗುತ್ತಿದ್ದಾರೆ. ಉತ್ತರ ಕರ್ನಾಟಕದ ಸೊಗಡಿನ ಸಿನಿಮಾ ಸೋಮು ಸೌಂಡ್ ಇಂಜಿನಿಯರ್ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ಸುಕ್ಕ ಸೂರಿ ಗರಡಿಯಲ್ಲಿ ಪಳಗಿರುವ ಅಭಿಗೆ ಈ ಸಿನಿಮಾ ಚೊಚ್ಚಲ ನಿರ್ದೇಶನವಾಗಿದೆ. ವಿಭಿನ್ನ ಶೀರ್ಷಿಕೆ ಜೊತೆಗೆ ವಿಭಿನ್ನ ಕಥಾಹಂದರ ಹೊಂದಿರುವ ಸೋಮು ಸೌಂಡ್ ಇಂಜಿನಿಯರ್ ಸಿನಿಮಾದ ಮೊದಲ ಗಾನಲಹರಿ ಅನಾವರಣಗೊಂಡಿದೆ. ಎ2 ಮ್ಯೂಸಿಕ್ ಯೂಟ್ಯೂಬ್ನಲ್ಲಿ ಸೋಮು ಸೌಂಡ್ ಇಂಜಿನಿಯರ್ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ. ಧನಂಜಯ್ ರಂಜನ್ ಕ್ಯಾಚಿ ಮ್ಯಾಚಿ ಸಾಹಿತ್ಯದ ಹಾಡಿಗೆ ಸ್ವರೂಪ್ ಖಾನ್ ಧ್ವನಿಯಾಗಿ, ಚರಣ್ ರಾಜ್ ಟ್ಯೂನ್ ಹಾಕಿದ್ದಾರೆ. ನಾಯಕ ಸೋಮು ಹಾವ - ಭಾವ, ವರ್ತನೆಯನ್ನು ಈ ಹಾಡಿನಲ್ಲಿ ಸೊಗಸಾಗಿ ಕಟ್ಟಿಕೊಡಲಾಗಿದೆ. ಹಳ್ಳಿ ಬ್ಯಾಕ್ ಡ್ರಾಪ್ನಲ್ಲಿ ಮೂಡಿಬಂದಿರುವ ಹಾಡಿಗೆ ಚರಣ್ ಅದ್ಭುತವಾದ ಮ್ಯೂಸಿಕ್ ಟಚ್ ಕೊಟ್ಟಿದ್ದು, ಶ್ರೇಷ್ಠ ಅಭಿನಯ ಅಮೋಘವಾಗಿದೆ.
ಸಲಗದ ಕೆಂಡ ಖ್ಯಾತಿಯ ಶ್ರೇಷ್ಠ ನಾಯಕನಾಗಿ, ಶೃತಿ ಪಾಟೀಲ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಜಹಾಂಗೀರ್, ಅಪೂರ್ವ, ಯಶ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ವೈದ್ಯರಾಗಿರುವ ಕ್ರಿಸ್ಟೋಪರ್ ಕಿಣಿ ಸೋಮ ಸೌಂಡ್ ಇಂಜಿನಿಯರ್ಗೆ ಹಣ ಹಾಕಿದ್ದು, ಮಾಸ್ತಿ ಮಾತು ಪೊಣಿಸಿದ್ದಾರೆ. ಶಿವಸೇನಾ ಕ್ಯಾಮೆರಾ ಕೈಚಳಕ, ಚರಣ್ ಸಂಗೀತದ ಪುಳಕ ಚಿತ್ರದ ಫ್ಲಸ್ ಪಾಯಿಂಟ್. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಗಂಜಿಹಾಳ ಕೂಡಲಸಂಗಮದ ಭಾಗದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ಶೂಟಿಂಗ್ ಮುಗಿಸಿರುವ ಸೋಮು ಸೌಂಡ್ ಇಂಜಿನಿಯರ್ ಬಳಗ ರೀ ರೆಕಾರ್ಡಿಂಗ್ ಕೆಲಸದಲ್ಲಿ ಬ್ಯುಸಿಯಾಗಿದೆ.
ಇದನ್ನೂ ಓದಿ: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ: ಅಧ್ಯಕ್ಷ ಸ್ಥಾನಕ್ಕೆ ಎನ್.ಎಮ್ ಸುರೇಶ್ ನಾಮಪತ್ರ ಸಲ್ಲಿಕೆ
ಭಗೀರಥ ಚಿತ್ರಕ್ಕೆ ಸಿಕ್ತು ನಿರ್ದೇಶಕ ಓಂ ಸಾಯಿ ಪ್ರಕಾಶ್ ಸಾಥ್: ಕನ್ನಡ ಚಿತ್ರಂಗದಲ್ಲಿ ಬಗೆಬಗೆಯ ಸಿನಿಮಾ, ಹೊಸಬರ ಆಗಮನ ಆಗುತ್ತಲೇ ಇದೆ. ಇದೀಗ 'ಭಗೀರಥ' ಚಿತ್ರತಂಡ ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆಯುತ್ತಿದೆ. ಜಮಾನ ಚಿತ್ರದ ನಾಯಕ ಜಯಪ್ರಕಾಶ್ ಮತ್ತು ನಿರ್ದೇಶಕ ರಾಮ್ ಜನಾರ್ದನ್ ಕಾಂಬೋದಲ್ಲಿ 'ಭಗೀರಥ' ಸಿನಿಮಾ ರೆಡಿಯಾಗುತ್ತಿದೆ. ಭಗೀರಥ ಚಿತ್ರದ ಮುಹೂರ್ತ ಸಮಾರಂಭ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿತು. ಮೊದಲ ಸನ್ನಿವೇಶಕ್ಕೆ ಹೆಸರಾಂತ ನಿರ್ದೇಶಕ ಓಂ ಸಾಯಿ ಪ್ರಕಾಶ್ ಆರಂಭ ಫಲಕ ತೋರಿದರು.
ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಮಾತನಾಡಿ, ನಾನು ನಿರ್ದೇಶನ ಮಾಡಿರುವುದು ಹೆಚ್ಚು. ಅಭಿನಯಿಸಿರುವುದು ಕಡಿಮೆ. ನಿರ್ದೇಶಕರು ಮಠಾಧಿಪತಿ ಪಾತ್ರವನ್ನು ನೀವೇ ಮಾಡಬೇಕೆಂದರು, ಹಾಗಾಗಿ ಈ ಚಿತ್ರದಲ್ಲಿ ಮಠಾಧಿಪತಿ ಪಾತ್ರ ನಿರ್ವಹಿಸುತ್ತಿದ್ದೇನೆ ಎಂದು ತಿಳಿಸಿದರು. ನಿರ್ದೇಶಕ ರಾಮ್ ಜನಾರ್ದನ್ ಮಾತನಾಡಿ, 2005ರಲ್ಲಿ ಬಾಯ್ ಫ್ರೆಂಡ್ ಮೂಲಕ ನನ್ನ ಸಿನಿ ಜರ್ನಿ ಆರಂಭವಾಯಿತು. ನಂತರ ಕೆಲ ಚಿತ್ರಗಳಲ್ಲಿ ನಟಿಸಿದ್ದೇನೆ ಹಾಗೂ ಕೆಲವನ್ನು ನಿರ್ದೇಶಿಸಿದ್ದೇನೆ. ಇದೀಗ ಭಗೀರಥ ಚಿತ್ರವನ್ನು ನಿರ್ದೇಶಿಸುತ್ತಿದ್ದೇನೆ ಎಂದರು.