ಕನ್ನಡ ಚಿತ್ರರಂಗದ ಮುಂಬರುವ ನಿರೀಕ್ಷಿತ ಸಿನಿಮಾಗಳಲ್ಲಿ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಸಿನಿಮಾ ಕೂಡ ಒಂದು. ಪೋಸ್ಟರ್ ಮೂಲಕ ಸಿನಿ ಪ್ರಿಯರಲ್ಲಿ ಕುತೂಹಲ ಹುಟ್ಟಿಸಿರೋ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಸಿನಿಮಾಗೆ ಈಗ ಗಂಧದ ಗುಡಿ ಚಿತ್ರ ನಿರ್ದೇಶಕ ಅಮೋಘ ವರ್ಷ ಸಾಥ್ ಸಿಕ್ಕಿದೆ. ಹೌದು, ಚಿತ್ರದ ಟ್ರೈಲರ್ ಹಾಗೂ ಹಾಡುಗಳನ್ನು ಅಮೋಘ ವರ್ಷ ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಟ್ರೈಲರ್ ಬಿಡುಗಡೆ: ಇದೊಂದು ಅದ್ಭುತ ಕಥೆಯ ಸಿನಿಮಾ. ಸಿನಿಮಾ ಶೀರ್ಷಿಕೆಯೇ ಖುಷಿ ಕೊಟ್ಟಿದೆ. ಚಿತ್ರ ಕೂಡ ನೋಡುಗರಿಗೆ ಇಷ್ಟವಾಗುತ್ತದೆ ಎಂಬುದಕ್ಕೆ ಚಿತ್ರದ ಟ್ರೈಲರ್ ಸಾಕ್ಷಿ. ಈ ಚಿತ್ರದ ಟ್ರೈಲರ್ ನೋಡಿದರೆ, ಇಲ್ಲಿ ಒಬ್ಬ ಫೋಟೋಗ್ರಾಫರ್ನ ಭಾವನೆ, ತೊಳಲಾಟ, ಪೇಚಾಟ, ಬದುಕು ಎಲ್ಲವೂ ಇಲ್ಲಿ ಅನಾವರಣಗೊಂಡಿದೆ ಅನಿಸುತ್ತದೆ. ಕನ್ನಡದಲ್ಲಿ ಈ ರೀತಿಯ ವಿಭಿನ್ನ ಕಥಾಹಂದರದ ಸಿನಿಮಾಗಳು ಹೆಚ್ಚೆಚ್ಚು ಬರಲಿ. ಸಿನಿಮಾ ಎಲ್ಲರಿಗೂ ಯಶಸ್ಸು ತಂದುಕೊಡಲಿ ಎಂದು ನಿರ್ದೇಶಕ ಅಮೋಘ ವರ್ಷ ಶುಭ ಹಾರೈಸಿದರು.
- " class="align-text-top noRightClick twitterSection" data="">
'ಒಳ್ಳೆಯ ಮನಸ್ಸುಗಳು ಸೇರಬೇಕು': ನಟ ಶಿಶಿರ್ ಕೂಡ ಸಿನಿಮಾ ತಂಡದ ಶ್ರಮದ ಕುರಿತು ಮಾತನಾಡಿದರು. ಒಳ್ಳೆಯ ಸಿನಿಮಾ ಆಗಲು ಮೊದಲು ಒಳ್ಳೆಯ ಮನಸ್ಸುಗಳು ಸೇರಬೇಕು. ಅವೆಲ್ಲದರಿಂದ ಒಳ್ಳೆಯ ಸಿನಿಮಾ ಮೂಡಿ ಬಂದಿದೆ. ಇದೊಂದು ಎಲ್ಲರ ಮನಸ್ಸಿನಲ್ಲಿ ಉಳಿಯೋ ಚಿತ್ರವಾಗಲಿ ಎಂದು ತಿಳಿಸಿದರು.
ಫೋಟೋಗ್ರಾಫರ್ಗೆ ಸನ್ಮಾನ: ಇದೇ ವೇಳೆ, ಚಿತ್ರತಂಡವು ಸಿನಿಮಾ ರಂಗದ ಹಿರಿಯ ಫೋಟೋಗ್ರಾಫರ್ ಕೆ.ಎನ್.ನಾಗೇಶ್ ಕುಮಾರ್ ಅವರನ್ನು ಪ್ರೀತಿಯಿಂದ ಸನ್ಮಾನಿಸಿತು. ಈ ಚಿತ್ರವೇ ಕ್ಯಾಮರಾ ಮತ್ತು ಒಬ್ಬ ಫೋಟೋಗ್ರಾಫರ್ ಕುರಿತ ಕಥೆ. ಹಾಗಾಗಿ ನಾಗೇಶ್ ಕುಮಾರ್ ಅವರನ್ನೇ ಆಹ್ವಾನಿಸಿ, ಅದಕ್ಕೊಂದು ಅರ್ಥ ಕಲ್ಪಿಸಿದ್ದು ವಿಶೇಷವಾಗಿತ್ತು. ಇದು ಒಬ್ಬ ಫೋಟೋಗ್ರಾಫರ್ ಜೀವನದ ಕಥೆ. ಈವರೆಗೆ ಮೂಡಿ ಬರದಂತಹ ಕಥೆ ಇಲ್ಲಿದೆ. ಒಂದೊಂದು ಫ್ರೇಮ್ ಕೂಡ ಅದ್ಭುತವಾಗಿ ಮೂಡಿ ಬಂದಿದೆ. ಚಿತ್ರಕ್ಕೆ ಎಲ್ಲರ ಹಾರೈಕೆ ಇರಲಿ ಎಂಬುದು ಚಿತ್ರತಂಡದ ಮಾತು.
ಚಿತ್ರೀಕರಣ: ಇನ್ನು ಕಿರುತೆರೆಯಲ್ಲಿ ಈಗಾಗಲೇ ಗಮನ ಸೆಳೆದಿರೋ ರಾಜೇಶ್ ಧ್ರುವ ಈ ಚಿತ್ರದಲ್ಲಿ ಅಭಿನಯಿಸುವುದರ ಜೊತೆಗೆ ನಿರ್ದೇಶನ ಮಾಡಿದ್ದಾರೆ. ರಾಜೇಶ್ ಧ್ರುವ ಹೇಳುವ ಹಾಗೆ ಒಬ್ಬ ಫೋಟೋಗ್ರಾಫರ್ ಹಾಗೂ ಫೋಟೋ ಸ್ಟುಡಿಯೋ ನಡುವಿನ ಭಾವನಾತ್ಮಕ ಸಂಬಂಧ ಚಿತ್ರದ ಹೈಲೈಟ್. ಜೊತೆಗೊಂದು ನವಿರಾದ ಲವ್ ಸ್ಟೋರಿ. 23 ದಿನ ಮಳೆಯಲ್ಲೇ ಚಿತ್ರೀಕರಿಸಲಾಗಿದೆ.
ಅವರ ಊರಿನಲ್ಲಿ ಅನುಭವಕ್ಕೆ ಬಂದ ಹಲವು ಘಟನೆಯನ್ನು, ಭಾಷೆಯನ್ನು ಈ ಸಿನಿಮಾದಲ್ಲಿ ಬಳಸಿಕೊಂಡು ಎಲ್ಲ ಕಲಾವಿದರಿಗೆ 30 ದಿನಗಳ ಕಾಲ ಅಲ್ಲಿಯ ಭಾಷೆಯ ಅರಿವು ಮಾಡಿಸಿ ಪಾತ್ರಕ್ಕೆ ತಕ್ಕಂತೆ ತಯಾರು ಮಾಡಿಸಿ ಶೂಟಿಂಗ್ ಮಾಡಿದ್ದಾರಂತೆ. ಶಿರಸಿ, ಯಲ್ಲಾಪುರ, ಹೊನ್ನಾವರ ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದೆ.
ತಾರಾ ಬಳಗ: ಚಿತ್ರದಲ್ಲಿ ರಾಜೇಶ್ ಧ್ರುವ ಜೊತೆಗೆ ರವಿ ಸಾಲಿಯಾನ್, ರಾಧಿಕಾ ಅಚ್ಯುತ್ ರಾವ್, ಸಂಪತ್ ಜೆ ರಾಮ್, ಕಾಮಿಡಿ ಕಿಲಾಡಿಗಳು 4 ಖ್ಯಾತಿಯ ಶುಭಲಕ್ಷ್ಮಿ, ಕನ್ಯಾಕುಮಾರಿ ಧಾರವಾಹಿ ಖ್ಯಾತಿಯ ನಕುಲ್ ಶರ್ಮ, ರಕ್ಷಿತ್, ಬಿಗ್ ಬಾಸ್ 4 ಖ್ಯಾತಿಯ ರವಿ ಮೂರೂರು ಹಾಗೂ ವಿಶೇಷ ಪಾತ್ರದಲ್ಲಿ ಕಿರುತೆರೆ ನಟ ಶಿಶಿರ್ ಕಾಣಿಸಿಕೊಂಡಿದ್ದಾರೆ.
ಚಿತ್ರತಂಡ: ಕಥೆ, ಚಿತ್ರಕಥೆಗೆ ಅಭಿಷೇಕ್ ಶಿರಸಿ ಪಲ ಹಾಗೂ ಪೃಥ್ವಿಕಾಂತ ಪೆನ್ನು ಹಿಡಿದಿದ್ದಾರೆ. ಅಜಿತ್ ಬೊಪ್ಪನಳ್ಳಿ ಸಂಭಾಷಣೆ ಬರೆದಿದ್ದಾರೆ. ಮನೋಜ್ ಸಿನಿ ಸ್ಟುಡಿಯೋ ಛಾಯಾಗ್ರಹಣವಿದೆ. ಗಣಪತಿ ಭಟ್ ಸಂಕಲನ ಮಾಡಿದ್ದಾರೆ. ಚಿತ್ರದಲ್ಲಿ 2 ಹಾಡುಗಳಿಗೆ ಶ್ರೀರಾಮ್ ಗಂಧರ್ವ ಸಂಗೀತ ನೀಡಿದ್ದಾರೆ. ಕಾಂತಾರ ಖ್ಯಾತಿಯ ಪ್ರಮೋದ್ ಮರವಂತೆ ಸಾಹಿತ್ಯ ಇದೆ. ಸ್ವಸ್ತಿಕ್ ಕಾರೆಕಾಡ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಸೃಜನ ಪ್ರೊಡಕ್ಷನ್ ಅಡಿ ನಿರ್ಮಾಪಕ ವೆಂಕಟೇಶ್ವರ ರಾವ್ ಬಳ್ಳಾರಿ ಅದ್ಧೂರಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಟ್ರೈಲರ್ನಿಂದಲೇ ಸದ್ದು ಮಾಡುತ್ತಿರೋ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಸಿನಿಮಾ ಜನವರಿ 6ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿದೆ.
ಇದನ್ನೂ ಓದಿ: ಕನ್ನಡ ಚಿತ್ರರಂಗದ ಎವರ್‌ಗ್ರೀನ್ ನಾಗರಹಾವು ಸಿನಿಮಾಗೆ 50 ವರ್ಷಗಳ ಸಂಭ್ರಮ