ಮುಂಬೈ: ದೇಶವನ್ನೇ ಬೆಚ್ಚಿಬೀಳಿಸಿದ್ದ ಶ್ರದ್ದಾ ವಾಕರ್ ಹತ್ಯೆಯ ನಂತರ ತುನಿಶಾ ಶರ್ಮಾ ಜೊತೆ ನಾನು ಬಲವಂತವಾಗಿ ಬೇರ್ಪಡಬೇಕಾಯಿತು ಎಂದು ಪ್ರಿಯಕರ, ಕಿರುತೆರೆ ನಟ ಶೀಝಾನ್ ಖಾನ್ ಹೇಳಿದ್ದಾರೆ. ನಟಿ ತುನಿಶಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶೀಝಾನ್ ಖಾನ್‌ರನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಹಲವು ಸಂಗತಿಗಳನ್ನು ಅವರು ಬಾಯ್ಬಿಟ್ಟಿದ್ದಾರೆ.
ಈ ಹಿಂದೆಯೂ ತುನಿಶಾ ಆತ್ಮಹತ್ಯೆಗೆ ಯತ್ನಿಸಿದ್ದು ಆಕೆಯನ್ನು ರಕ್ಷಿಸಿದ್ದೆ. ಈ ವಿಷಯವನ್ನು ಆಕೆಯ ತಾಯಿಗೂ ತಿಳಿಸಿದ್ದೆ. ಆಕೆಯ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆಯೂ ಸಲಹೆ ನೀಡಿದ್ದೆ ಎಂದು ಖಾನ್ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಶ್ರದ್ಧಾ ಕೊಲೆ ಪ್ರಕರಣದ ನಂತರ ನಾನು ತುಂಬಾ ಆತಂಕಕ್ಕೆ ಒಳಗಾದೆ. ಪ್ರಕರಣದ ನಂತರ ದೇಶದ ಎಲ್ಲೆಡೆಯೂ ಇದೇ ವಿಚಾರವಾಗಿ ಚರ್ಚೆ ನಡೆಯುತ್ತಿತ್ತು. ನಾನು ಮುಸ್ಲಿಂ ಹುಡುಗ ಮತ್ತು ತುನಿಶಾ ಹಿಂದೂ ಹುಡುಗಿ. ಅಲ್ಲದೇ ಆಕೆ ನನಗಿಂತ ಚಿಕ್ಕವಳು. ಧರ್ಮ ಮತ್ತು ವಯಸ್ಸಿನ ವಿಚಾರವಾಗಿ ನಾನು ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದೆ ಎಂದು ಖಾನ್ ಹೇಳಿದ್ದಾಗಿ ತಿಳಿದುಬಂದಿದೆ.
ಆತ್ಮಹತ್ಯೆಗೂ ಮುನ್ನ ಆಕೆ ಏನನ್ನೂ ತಿಂದಿರಲಿಲ್ಲ ಮತ್ತು ಕುಡಿದಿರಲಿಲ್ಲ. ನೇಣು ಬಿಗಿದುಕೊಂಡ ದಿನ ನಾನು ಆಕೆಗೆ ಆಹಾರ ನೀಡಲು ಪ್ರಯತ್ನಿಸಿದೆ. ಆಕೆ ನಿರಾಕರಿಸಿದಳು. ಬಳಿಕ ನಾನು ನನ್ನ ಕೆಲಸದಲ್ಲಿ ನಿರತನಾದೆ. ತುಂಬಾ ಸಮಯವಾದರೂ ತುನಿಶಾ ಸೆಟ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ. ಸ್ವತಃ ನಾನೇ ಹೋಗಿ ಮೇಕಪ್ ಕೋಣೆ ಬಾಗಿಲು ಬಡಿದೆ. ಆಕೆಯಿಂದ ಯಾವುದೇ ಉತ್ತರ ಬಾರದಿದ್ದಾಗ ಅಲ್ಲಿದ್ದವರ ಜೊತೆ ಸೇರಿ ಬಾಗಿಲು ಒಡೆದೆವು. ತುನಿಶಾ ನೇಣು ಬಿಗಿದುಕೊಂಡಿದ್ದಳು. ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ ಮಾರ್ಗಮಧ್ಯೆ ಮೃತಪಟ್ಟಳು ಎಂದು ಶೀಝಾನ್ ಖಾನ್ ತನಿಖೆಯ ವೇಳೆ ಹೇಳಿದ್ದಾರೆ.
ಇದನ್ನೂ ಓದಿ: ನಟಿ ತುನಿಶಾ ಶರ್ಮಾ ಆತ್ಮಹತ್ಯೆ: ಸಹನಟ ಶೀಝಾನ್ ಖಾನ್ ಪೊಲೀಸ್ ಕಸ್ಟಡಿಗೆ
ಪ್ರಕರಣದ ಬಗ್ಗೆ ಮತ್ತಷ್ಟು ವಿವರ: ಮುಂಬೈ ಸಮೀಪದ ನೈಗಾಂವ್ ಪ್ರದೇಶದ ಸೆಟ್‌ನಲ್ಲಿ ಕಳೆದ ಶನಿವಾರ ಶೂಟಿಂಗ್ ನಡೆಯುತ್ತಿರುವಾಗಲೇ ಮೇಕಪ್ ರೂಮ್ನಲ್ಲಿ ಮಧ್ಯಾಹ್ನದ ಸಮಯದಲ್ಲಿ ತುನಿಶಾ ಶರ್ಮಾ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ನಟಿ ಸಾವನ್ನಪ್ಪಿದ್ದರು.
ಮೂಲಗಳ ಪ್ರಕಾರ, ತುನಿಶಾ ಶರ್ಮಾ ಗರ್ಭಿಣಿಯಾಗಿದ್ದರು. ಅವರ ಪ್ರಿಯಕರ ಶೀಝಾನ್ ಖಾನ್ ಮದುವೆಯಾಗಲು ನಿರಾಕರಿಸಿದ್ದರಂತೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ತುನಿಶಾ ಶರ್ಮಾ ಅವರ ತಾಯಿ ನೀಡಿದ ದೂರಿನ ಆಧಾರದ ಮೇಲೆ ಶೀಝಾನ್ ಅವರನ್ನು ಬಂಧಿಸಲಾಗಿದೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 306 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ, ಶೀಝಾನ್ ಖಾನ್ ವಿರುದ್ಧದ ಆರೋಪ ನಿರಾಧಾರ ಎಂದು ಅವರ ವಕೀಲ ಶರದ್ ರೈ ಹೇಳಿದ್ದಾರೆ.
ತುನಿಶಾ ಶರ್ಮಾ ವೃತ್ತಿಜೀವನ ಹೇಗಿತ್ತು?: 2015ರಲ್ಲಿ ಭಾರತ್ ಕಾ ವೀರ್ ಪುತ್ರ ಮಹಾರಾಣಾ ಪ್ರತಾಪ್ ಧಾರಾವಾಹಿ ಮೂಲಕ ತುನಿಶಾ ಶರ್ಮಾ ಕಿರುತೆರೆ ಲೋಕಕ್ಕೆ ಕಾಲಿಟ್ಟರು. ಅದಾದ ಬಳಿಕ ಚಕ್ರವರ್ತಿ ಅಶೋಕ್ ಸಾಮ್ರಾಟ್, ಇಷ್ಕ್ ಸುಭಾನ್ ಅಲ್ಲಾ, ಇಂಟರ್ನೆಟ್ ವಾಲಾ ಲವ್ ಧಾರಾವಾಹಿಯಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದರು.
ನಟಿ ಕತ್ರಿನಾ ಕೈಫ್ ಅಭಿಯನದ ಫಿತೂರ್ ಚಿತ್ರದ ಮೂಲಕ ಚಿತ್ರರಂಗಕ್ಕೂ ತುನಿಶಾ ಶರ್ಮಾ ಕಾಲಿಟ್ಟಿದ್ದರು. ಇದರಲ್ಲಿ ಬಾಲ ಫಿರ್ದೌಸ್ ಪಾತ್ರ ನಿರ್ವಹಿಸಿದ್ದರು. ಅಲ್ಲದೇ, ಕತ್ರಿನಾ ನಟಿಸಿದ್ದ ಬಾರ್ ಬಾರ್ ದೇಖೋ ಚಿತ್ರದಲ್ಲೂ ಬಣ್ಣ ಹಚ್ಚಿಸಿದ್ದರು. ಈ ಚಿತ್ರದಲ್ಲಿ ಯುವ ದಿಯಾ ಪಾತ್ರ ಮಾಡಿದ್ದರು. ಈ ಎರಡೂ ಚಿತ್ರಗಳಲ್ಲಿ ತುನಿಶಾ ಅವರು ಕತ್ರಿನಾ ಕೈಫ್ ಪಾತ್ರದ ಬಾಲ ನಟಿಯಾಗಿ ನಟಿಸಿದ್ದರು. ದಬಾಂಗ್ - 3 ಮುಂತಾದ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ಟಿವಿ ಧಾರಾವಾಹಿ ಸೆಟ್‌ನಲ್ಲೇ ಕಿರುತೆರೆ ನಟಿ ಆತ್ಮಹತ್ಯೆ