ಹೈದರಾಬಾದ್ : ಮುಂಬೈನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಬಯೋಪಿಕ್ ಕುರಿತಾದ 'ಮೇಜರ್' ಸಿನಿಮಾ ಜೂನ್ 3 ರಂದು ಹಿಂದಿ, ತೆಲುಗು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ಪ್ರೇಕ್ಷಕರು ಮತ್ತು ವಿಮರ್ಶಕರು ಸೇರಿದಂತೆ ಕೆಲ ನಟ ನಟಿಯರು ಅಡಿವಿ ಶೇಷ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗೆ "ಪುಷ್ಪ" ಖ್ಯಾತಿಯ ಅಲ್ಲು ಅರ್ಜುನ್ "ಮೇಜರ್" ಚಿತ್ರತಂಡವನ್ನು ಹಾಡಿ ಹೊಗಳಿದ್ದರು. ಜೊತೆಗೆ ಅಡಿವಿ ಶೇಷ್ ಅಭಿನಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಇದೀಗ "ಬಾಹುಬಲಿ" ಸಿನಿಮಾ ತಾರೆಯರಾದ ರಾಣಾ ದಗ್ಗುಬಾಟಿ ಮತ್ತು ಅನುಷ್ಕಾ ಶೆಟ್ಟಿ ಕೂಡ 'ಮೇಜರ್' ಚಿತ್ರವನ್ನ ಪ್ರಶಂಸಿಸಿದ್ದಾರೆ. ವಿಶೇಷ ಅಂದ್ರೆ ನಟ ಶೇಷ್, ಬಾಹುಬಲಿ ಚಿತ್ರದಲ್ಲಿ ಕೂಡ ನಟಿಸಿದ್ದಾರೆ.
ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಸಿನಿಮಾ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ರಾಣಾ ದಗ್ಗುಬಾಟಿ, 'ಮೇಜರ್' ಫಿಲ್ಮ್ ತುಂಬಾ ಚೆನ್ನಾಗಿದೆ. ಎಲ್ಲರೂ ತಮ್ಮ ತಮ್ಮ ಪಾತ್ರವನ್ನು ಅತ್ಯುತ್ತಮವಾಗಿ ಮಾಡಿದ್ದಾರೆ. ಅಡಿವಿ ಶೇಷ್ ತುಂಬಾ ಸೊಗಸಾಗಿ ಕಥೆ ಬರೆದರೆ ಎಂದ ಅವರು, ನಿರ್ದೇಶನ ಹಾಗೂ ತಾಂತ್ರಿಕ ವಿಭಾಗಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಹಾಗೆಯೇ ಅಡಿವಿ ಶೇಷ್ ಅವರ ನಟನೆಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದಗ್ಗುಬಾಟಿ ಕಮೆಂಟ್ಗೆ ಪ್ರತಿಕ್ರಿಯೆ ನೀಡಿರುವ ಶೇಷ್ , 'ಧನ್ಯವಾದಗಳು ಪ್ರಿಯ ಸಹೋದರ, ನಿಮಗೆ ಚಿತ್ರ ಇಷ್ಟವಾಗಿದ್ದಕ್ಕೆ ತುಂಬಾ ಖುಷಿಯಾಗಿದೆ' ಎಂದಿದ್ದಾರೆ.
"ಬಾಹುಬಲಿ" ಚಿತ್ರದ ನಾಯಕಿ ಅನುಷ್ಕಾ ಶೆಟ್ಟಿ ಕೂಡ ಸಿನಿಮಾ ಕುರಿತು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಮೇಜರ್' ಸಿನಿಮಾದ ಮೂಲಕ ಸಂದೀಪ್ ಉನ್ನಿಕೃಷ್ಣನ್ ಅವರಿಗೆ ಗೌರವ ಸಲ್ಲಿಸಲಾಗಿದೆ. ಈ ಕಥೆಯನ್ನು ನಮ್ಮ ಮುಂದೆ ತಂದಿದ್ದಕ್ಕಾಗಿ ಶೇಷ್ ಮತ್ತು 'ಮೇಜರ್' ಚಿತ್ರತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು. ದಯವಿಟ್ಟು ಎಲ್ಲರೂ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಿ ಎಂದಿದ್ದಾರೆ. ಅನುಷ್ಕಾ ಶೆಟ್ಟಿ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಶೇಷ್, "ಥ್ಯಾಂಕ್ ಯು ಸ್ವೀಟು, ಸೋ ಮಚ್ ಲವ್" ಎಂದಿದ್ದಾರೆ.
ಸಾಯಿ ಮಂಜ್ರೇಕರ್, ಪ್ರಕಾಶ್ ರಾಜ್, ರೇವತಿ, ಮುರಳಿ ಶರ್ಮಾ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೋನಿ ಪಿಕ್ಚರ್ಸ್, ಜಿ ಮಹೇಶ್ ಬಾಬು ಪ್ರೊಡಕ್ಷನ್ಸ್ ಮತ್ತು ಎ+ ಎಸ್ ಮೂವೀಸ್ ಬ್ಯಾನರ್ಗಳಲ್ಲಿ ಜಂಟಿಯಾಗಿ ಚಿತ್ರ ನಿರ್ಮಿಸಲಾಗಿದೆ.
ಇದನ್ನೂ ಓದಿ: ಅಂಬಾನಿ ಭಾವಿ ಸೊಸೆಯಿಂದ ಮೊದಲ ಭರತನಾಟ್ಯ ಪ್ರದರ್ಶನ.. ಅತ್ತೆಯಂತೆ ಸೊಸೆಯೂ ಉತ್ತಮ ಕಲಾವಿದೆ!