ಮುಂಬೈ : ನಟಿಯರು ಸೋಷಿಯಲ್ ಮೀಡಿಯಾದಲ್ಲಿ ವಿಭಿನ್ನ ರೀತಿಯ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಈ ಮೂಲಕ ಅಭಿಮಾನಿಗಳ ಮೆಚ್ಚುಗೆಯನ್ನು ಪಡೆಯುತ್ತಿರುತ್ತಾರೆ. ಆದರೆ, ಈ ಬಾರಿ ನಟಿ ಸಾರಾ ಅಲಿಖಾನ್ ಅವರು ಕೊಂಚ ವಿಭಿನ್ನವಾಗಿ ತಮಾಷೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನಟಿ ಮುಖಕ್ಕೆ ಮೀಸೆ - ಗಡ್ಡ ಅಂಟಿಸಿಕೊಂಡಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದು ಫ್ಯಾನ್ಸ್ಗಳ ಅಸಮಾಧಾನಕ್ಕೆ ಕಾರಣವಾದರೆ, ನೆಟ್ಟಿಗರ ಟ್ರೋಲಿಗೂ ಈಡಾಗಿದೆ.
ಸಾರಾ ಅವರು ಕೊಳದಲ್ಲಿ ಬಿಕಿನಿಯನ್ನು ಧರಿಸಿ ನಿಂತಿರುವ ಫೋಟೋವನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ತಮಾಷೆಯ ಫೋಟೋದಲ್ಲಿ ಸಾರಾ ನೇರಳೆ ಬಣ್ಣದ ಬಿಕಿನಿ ಧರಿಸಿದ್ದಾರೆ. ಅಲ್ಲದೇ, ಮುಖದ ಮೇಲೆ ಪುರುಷರಂತೆ ಗಡ್ಡ-ಮೀಸೆ ಹೊಂದಿದ್ದಾರೆ.
ನಟಿಯ ವೇಷಕ್ಕೆ ಇಲ್ಲಿದೆ ಕಾರಣ: ನಟಿ ಈ ರೀತಿಯ ಫೋಟೋವನ್ನು ಹಂಚಿಕೊಳ್ಳಲು ಕಾರಣವೂ ಇದೆ. (ಮಂಗಳವಾರ) ಫೆಬ್ರವರಿ 28ರಂದು ನಿರ್ದೇಶಕ ಹೋಮಿ ಅದಜಾನಿಯಾ ಹುಟ್ಟುಹಬ್ಬ ಇತ್ತು. ಹೀಗಾಗಿ ಅವರಿಗೆ ಶುಭಾಶಯವನ್ನು ತಿಳಿಸುವ ಸಲುವಾಗಿ ನಟಿ ಈ ರೀತಿಯ ಫೋಸ್ ನೀಡಿದ್ದಾರೆ. ಹಾಗಂತ ಅವರು ನಿಜವಾದ ಗಡ್ಡ ಮೀಸೆಯನ್ನು ಅಂಟಿಸಿಕೊಂಡಿಲ್ಲ. ಇಲ್ಲಿ ಅವರು ಫಿಲ್ಟರ್ ಮೂಲಕ ಈ ರೀತಿಯ ಎಡಿಟ್ ಮಾಡಿಕೊಂಡಿದ್ದಾರೆ.
ನಟಿ ಸಾರಾ ಅಲಿಖಾನ್ ಅವರ ಫೋಟೋವನ್ನು ನಿರ್ದೇಶಕ ಹೋಮಿ ಅದಜಾನಿಯಾ ಅವರೇ ಕ್ಲಿಕ್ಕಿಸಿದ್ದಾರೆ. ಹೀಗಾಗಿ ಅವರ ಬರ್ತ್ಡೆಗೆ ಪ್ರಯುಕ್ತ ಇದೇ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಫೋಸ್ಟ್ ಮಾಡುವ ಮೂಲಕ ವಿಶ್ ಮಾಡಿದ್ದಾರೆ ನಟ ಸೈಫ್ ಅಲಿಖಾನ್ ಅವರ ಪುತ್ರಿ. ಅಲ್ಲದೇ ಅವರು ಹೋಮಿ ಅದಜಾನಿಯಾ ಅವರ ಜೊತೆ ವರ್ಕ್ಔಟ್ ಮಾಡುತ್ತಿರುವ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ.
ಸೈಫ್ ಅಲಿಖಾನ್ ಅವರು ಮಗಳು ಎಂಬ ಕಾರಣಕ್ಕೆ ನಟಿ ಸಾರಾ ಅಲಿ ಖಾನ್ ಅವರು ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ. ಇವರು ಬಾಲಿವುಡ್ನ ಹಲವಾರು ನಾಯಕರ ಜೊತೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಮೂಲಕ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಪ್ರಸ್ತುತ ದಿನಗಳಲ್ಲಿ ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹೋಮಿ ಅದಜಾನಿಯಾ ಅವರ 'ಮರ್ಡರ್ ಮುಭಾರಕ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಈಗಾಗಲೇ ಆ ಸಿನಿಮಾದ ಶೂಟಿಂಗ್ ಮುಗಿದಿದೆ ಎನ್ನಲಾಗಿದೆ. ಈ ಮಧ್ಯೆ ನಟಿ 'ಎ ವಟಾನ್ ಮೇರೆ ವಟಾನ್' ಚಿತ್ರದಲ್ಲಿಯೂ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಹಲವು ಸಿನಿಮಾಗಳ ಪ್ರಾಜೆಕ್ಟ್ ಅವರ ಕೈಯಲ್ಲಿದೆ.
ಟ್ರೋಲ್ಗೆ ತಲೆಕೆಡಿಸಿಕೊಳ್ಳದ ನಟಿ: ಸೋಷಿಯಲ್ ಮೀಡಿಯಾದಲ್ಲಿ ನಟಿ ಸಾರಾ ಅಲಿಖಾನ್ ಅವರು ಸಕ್ರೀಯರಾಗಿದ್ದಾರೆ. ಈಗಾಗಲೇ ಅವರಿಗೆ ಸುಮಾರು 4.1 ಕೋಟಿ ಫಾಲೋವರ್ಸ್ ಇದ್ದಾರೆ. ನಟಿಯವರ ಈ ಪೋಟೋವನ್ನು ಕಂಡು ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ. ಅಲ್ಲದೇ ಅಸಮಾಧಾನಕ್ಕೂ ಒಳಗಾಗಿದ್ದಾರೆ. ಇದರಲ್ಲಿ ಒಬ್ಬ ನೆಟ್ಟಿಗರು ಪ್ರತಿಕ್ರಿಯಿಸಿದ್ದು, 'ಸಾರಾ ಅಲಿಖಾನ್ ಯುವಕನಂತೆ ಕಾಣುತ್ತಾರೆ' ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ಚಿತ್ರವನ್ನು ಕಂಡು ಏನು ಅದು? ಎಂದು ಪ್ರಶ್ನಿಸಿದ್ದಾರೆ. ನಟಿಯ ಫೋಟೋಗೆ ಆಗಾಗ ನೆಟ್ಟಿಗರು ಟ್ರೋಲ್ ಮಾಡುತ್ತಿರುತ್ತಾರೆ. ಆದರೆ ಸಾರಾ ಅಲಿಖಾನ್ ಹೆಚ್ಚು ತಲೆಕೆಡಿಸಿಕೊಂಡಿಲ್ಲ.
ಇದನ್ನೂ ಓದಿ : 'ಅನುಷ್ಕಾ ನನ್ನ ಸ್ಫೂರ್ತಿ, ಶಕ್ತಿ': ಪತ್ನಿ ಬಗ್ಗೆ ವಿರಾಟ್ ಕೊಹ್ಲಿ ಹೃದಯಸ್ಪರ್ಶಿ ಮಾತು