ಪರಭಾಷೆಯ ನಟ ಹಾಗೂ ನಟಿಯರು ಸ್ಯಾಂಡಲ್ವುಡ್ಗೆ ಬರೋದು ಟ್ರೆಂಡ್ ಆಗಿದೆ. ಇದೀಗ ಕನ್ನಡ ಚಿತ್ರರಂಗದಲ್ಲಿ ಲೂಸ್ ಮಾದ ಎಂದೇ ಕರೆಸಿಕೊಂಡಿರುವ ಯೋಗಿ ಅವರ 50ನೇ ಚಿತ್ರ 'ರೋಜಿ'ಯಲ್ಲಿ ಪರಭಾಷೆಯ ನಟರೊಬ್ಬರು ಅಭಿನಯಿಸುತ್ತಿದ್ದಾರೆ. ಈ ಸಿನಿಮಾ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಈ ಚಿತ್ರದಲ್ಲಿನ ಪ್ರಮುಖ ಪಾತ್ರದಲ್ಲಿ ಖ್ಯಾತ ನೃತ್ಯ ನಿರ್ದೇಶಕ ಮತ್ತು 'ಲಿಯೋ' ಸಿನಿಮಾದ ಚಾಕೊಲೇಟ್ ಕಾಫಿ ಎಂಬ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿರುವ ಸ್ಯಾಂಡಿ ಮಾಸ್ಟರ್ ನಟಿಸುತ್ತಿದ್ದಾರೆ.
ಈ ವಿಚಾರ ತಿಳಿಸಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸ್ಯಾಂಡಿ ಮಾಸ್ಟರ್ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು. ಸ್ಯಾಂಡಿ ಮಾಸ್ಟರ್ ಅವರ ಪಾತ್ರ ಪರಿಚಯಿಸುವ ಪೋಸ್ಟರ್ ಸಹ ಬಿಡುಗಡೆ ಮಾಡಲಾಯಿತು. ಮೊದಲು ಮಾತು ಶುರು ಮಾಡಿದ ನಟ ಲೂಸ್ ಮಾದ ಯೋಗಿ, "ನನ್ನ ಪಾತ್ರದ ಹೆಸರು ರೋಜಿ. ನಮ್ಮ ಚಿತ್ರಕ್ಕೆ ಈಗಾಗಲೇ ಹದಿನೈದು ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಸದ್ಯದಲ್ಲೇ ವಿಭಿನ್ನವಾದ ಟೀಸರ್ ಸಹ ಬರಲಿದೆ" ಎಂದು ತಿಳಿಸಿದರು.
ಬಳಿಕ ನಿರ್ದೇಶಕ ಶೂನ್ಯ ಮಾತನಾಡಿ, "ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ. ಮೊದಲ ಹಂತದ ಚಿತ್ರೀಕರಣದ ಕೆಲವು ಭಾಗಗಳನ್ನು ಆಯ್ಕೆ ಮಾಡಿ ಟೀಸರ್ ಸಹ ಸಿದ್ದವಾಗುತ್ತಿದೆ. ಸದ್ಯದಲ್ಲೇ ಟೀಸರ್ ಬಿಡುಗಡೆಯಾಗಲಿದೆ. ಈಗ ಸ್ಯಾಂಡಿ ಮಾಸ್ಟರ್ ಚಿತ್ರತಂಡ ಸೇರ್ಪಡೆಯಾಗಿದ್ದಾರೆ. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಕನ್ನಡದ ಹೆಸರಾಂತ ನಟರಿಬ್ಬರು ಹಾಗೂ ತೆಲುಗಿನ ಖ್ಯಾತ ನಟರೊಬ್ಬರು ನಟಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಆ ಕುರಿತು ಮಾಹಿತಿ ನೀಡುವುದಾಗಿ ಹೇಳಿದರು.
ಬಳಿಕ ರೋಜಿ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿರುವ ತಮಿಳು ನಟ ಸ್ಯಾಂಡಿ ಮಾಸ್ಟರ್ ಮಾತನಾಡಿ, "ನಾನು ನೃತ್ಯ ನಿರ್ದೇಶಕನಾಗಿ ಹಲವು ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ಲಿಯೋ ಚಿತ್ರದ ನನ್ನ ಪಾತ್ರಕ್ಕೆ ಈಗ ಎಲ್ಲ ಕಡೆ ಮೆಚ್ಚುಗೆ ವ್ಯಕ್ತವಾಗಿದೆ. ನಿರ್ದೇಶಕ ಶೂನ್ಯ ಅವರು ಈ ಚಿತ್ರದ ಕಥೆ ಹಾಗೂ ನನ್ನ ಪಾತ್ರದ ಬಗ್ಗೆ ಹೇಳಿದರು. ಇಷ್ಟವಾಯಿತು. ಆಂಡಾಳ್ ಎಂಬುದು ನನ್ನ ಪಾತ್ರದ ಹೆಸರು ಸದ್ಯ ರಿವೀಲ್ ಆಗಿರುವ ಪೋಸ್ಟರ್ ನಿಜಕ್ಕೂ ನಿಮಗೆ ಕುತೂಹಲ ಹುಟ್ಟಿಸುತ್ತದೆ" ಎಂದರು.
ಕ್ಷಮೆಯಾಚಿಸಿದ ಯೋಗಿ: ಬೆಂಗಳೂರಿನಲ್ಲಿ ಈ ಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ತಮಿಳು ಅಭಿಮಾನಿಗಳು ಇದ್ದರು ಎಂಬ ಕಾರಣಕ್ಕೆ ನಟ ಯೋಗಿ ತಮಿಳಿನಲ್ಲಿ ಮಾತನಾಡಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ನಟ ಯೋಗಿ, ನಾನು ಮೊದಲು ಕನ್ನಡದಲ್ಲಿ ಮಾತನಾಡಿದ್ದು. ಆಮೇಲೆ ಅಲ್ಲಿ ತಮಿಳು ಫ್ಯಾನ್ಸ್ ಇದ್ದರು ಎಂಬ ಕಾರಣಕ್ಕೆ ತಮಿಳು ಮಾತನಾಡಿದೆ ಅಷ್ಟೇ. ಅದನ್ನು ಯಾರು ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಯಾರಿಗಾದರು ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ ಎಂದು ವಿಡಿಯೋ ಮೂಲಕ ಕ್ಷಮೆಯಾಚಿಸಿದ್ದಾರೆ.
ಇನ್ನೂ ರೋಜಿ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದು, ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಯೋಗಿ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ಕಾಂಬಿನೇಷನ್ನಲ್ಲಿ ಬರುತ್ತಿರುವ ಮೊದಲ ಸಿನಿಮಾವಿದು. ಹರೀಶ್ ಕೊಮ್ಮೆ ಸಂಕಲನ ಚಿತ್ರಕ್ಕಿದೆ. ನಿರ್ಮಾಪಕ ಡಿ.ವೈ.ರಾಜೇಶ್ ಬಂಡವಾಳ ಹಾಕಿದ್ದು, ಡಿ.ವೈ ವಿನೋದ್ ಸಹ ನಿರ್ಮಾಪಕರಾಗಿದ್ದಾರೆ. ಸದ್ಯದಲ್ಲೇ ಶೂಟಿಂಗ್ ಮುಗಿಸಿ ಚಿತ್ರತಂಡ ಪ್ರೇಕ್ಷಕರ ಮುಂದೆ ಬರಲಿದೆ.
ಇದನ್ನೂ ಓದಿ: 'ರೋಜಿ'ಯಾಗಿ ಲೂಸ್ ಮಾದ ಯೋಗಿ: 50ನೇ ಚಿತ್ರದ ಶೀರ್ಷಿಕೆ ಅನಾವರಣ