ಕನ್ನಡ ಚಿತ್ರರಂಗದಲ್ಲಿ ವರ್ಷಕ್ಕೆ ನೂರಾರು ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಈ ವರ್ಷ ಕೂಡ ಇದಕ್ಕೆ ಹೊರತಾಗಿಲ್ಲ. 2023 ಕೊನೆಗೊಳ್ಳುವುದಕ್ಕೆ ಕೆಲವೇ ದಿನಗಳು ಬಾಕಿ ಇದೆ. ಈಗಾಗಲೇ ಚಂದನವನದಲ್ಲಿ 200ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆ ಆಗಿವೆ. ಇವುಗಳಲ್ಲಿ ಕೆಲ ನಟಿಮಣಿಯರು ತಮ್ಮ ಅಭಿನಯ ಹಾಗೂ ಗ್ಲ್ಯಾಮರ್ನಿಂದ ಕನ್ನಡಿಗರ ಹೃದಯ ಕದ್ದಿದ್ದಾರೆ.
2023ನೇ ವರ್ಷದ ಆರಂಭದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬಂದ ಚಿತ್ರ 'ಹೊಂದಿಸಿ ಬರೆಯಿಸಿ'. ಗುಳ್ಟು ಚಿತ್ರದ ಖ್ಯಾತಿಯ ನವೀನ್ ಶಂಕರ್, ಪ್ರವೀಣ್ ತೇಜ್, ಶ್ರೀ, ,ಐಶಾನಿ ಶೆಟ್ಟಿ, ಅರ್ಚನಾ ಜೋಯಿಸ್, ಭಾವನಾ ರಾವ್, ಅರ್ಚನಾ ಕೊಟ್ಟಿಗೆ ಅಭಿನಯಿಸಿದ ಯೂತ್ ಕಾಲೇಜ್ ಸ್ಟೋರಿಯಿದು. ಪ್ರತಿಯೊಬ್ಬರ ಬದುಕಿನಲ್ಲಿ ಕಾಲೇಜು ಅನ್ನೋದು ಬಹುಮುಖ್ಯವಾದ ಭಾಗ. ಅಲ್ಲಿ ಒಂದಷ್ಟು ಹೊಸ ವ್ಯಕ್ತಿಗಳು, ಹೊಸ ಗುರಿ, ಉದ್ದೇಶ, ಕನಸು ಎಲ್ಲವೂ ಜೊತೆಯಾಗುತ್ತವೆ. ಆ ಕಾಲಘಟ್ಟದಲ್ಲಿ ಒಂದಷ್ಟು ಕಳೆದುಕೊಳ್ಳುವುದು, ಮತ್ತೊಂದಷ್ಟು ಸೇರಿಕೊಳ್ಳುವುದು ಆಗುತ್ತದೆ.
ಅಂತಹ ಕಾಲೇಜು ಮತ್ತು ಅದರ ನಂತರದ ಬದುಕಿನ ಕಥೆ ಒಳಗೊಂಡಿದ್ದ 'ಹೊಂದಿಸಿ ಬರೆಯಿರಿ' ಚಿತ್ರ ಸಿನಿಮಾ ಪ್ರೇಮಿಗಳಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಈ ಸಿನಿಮಾವನ್ನು ರಾಮೇನಹಳ್ಳಿ ಜಗನ್ನಾಥ ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಹೆಚ್ಚು ಗಮನ ಸೆಳೆದ ಪಾತ್ರ ಅಂದ್ರೆ ಅರ್ಚನಾ ಜೋಯಿಸ್ ಅವರದ್ದು. ಗರ್ಭೀಣಿಯಾದ ಅರ್ಚನಾ ಗಂಡನನ್ನು ಕಳೆದುಕೊಂಡ ಪಾತ್ರದಲ್ಲಿ ಕನ್ನಡಿಗರ ಮನಸ್ಸು ಕದಿಯುವಲ್ಲಿ ಯಶಸ್ವಿಯಾಗಿದ್ದರು. ಈ ಚಿತ್ರದಲ್ಲಿ ಅರ್ಚನಾ ಜೋಯಿಸ್ ಪಾತ್ರಕ್ಕೆ ಹೆಚ್ಚು ಸ್ಕೋಪ್ ಇತ್ತು ಅಂದ್ರೆ ತಪ್ಪಿಲ್ಲ.
ಇನ್ನು ಡಾಲಿ ಧನಂಜಯ್ ನಿರ್ಮಾಣದ ಉಮೇಶ್ ಕೆ.ಕೃಪ ನಿರ್ದೇಶನದಲ್ಲಿ ಮೂಡಿ ಬಂದ ಈ ವರ್ಷದ ಹಿಟ್ ಸಿನಿಮಾ 'ಟಗರು ಪಲ್ಯ'. ಹಾಸ್ಯ ನಟ ನಾಗಭೂಷಣ್ ಹಾಗೂ ಅಮೃತಾ ಪ್ರೇಮ್ ಅಭಿನಯಿಸಿದ ಟಗರು ಪಲ್ಯ ಈ ವರ್ಷದ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ. ಚೊಚ್ಚಲ ಚಿತ್ರದಲ್ಲಿ ನೆನೆಪಿರಲಿ ಪ್ರೇಮ್ ಮಗಳು ಅಮೃತಾ ಕನ್ನಡಿಗರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಪಕ್ಕಾ ಮಂಡ್ಯ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸಿದ ಅಮೃತಾ ಪ್ರೇಮ್ ಮೊದಲ ಚಿತ್ರದಲ್ಲಿ ಸಕ್ಸಸ್ ಕಂಡಿದ್ದಾರೆ.
ಈ ಮಧ್ಯೆ ಗಣೇಶ್ ಹಾಗೂ ರಕ್ಷಿತ್ ಶೆಟ್ಟಿ ಜೊತೆ ಸ್ಕ್ರೀನ್ ಹಂಚಿಕೊಂಡಿದ್ದ ರುಕ್ಮಿಣಿ ವಸಂತ್ಗೆ 2023 ಲಕ್ಕಿ ಇಯರ್. ಏಕೆಂದರೆ ಇಬ್ಬರು ಸ್ಟಾರ್ ನಟರ ಜೊತೆ ಅಭಿನಯಿಸಿದ ರುಕ್ಮಿಣಿ ವಸಂತ್ ಅವರ ಎರಡು ಚಿತ್ರದ ಪಾತ್ರಗಳು ಬಹಳ ವಿಭಿನ್ನವಾಗಿದ್ದವು. ಸಪ್ತ ಸಾಗರದಾಚೆ ಎಲ್ಲೋ ಚಿತ್ರ ಸೈಡ್ 1 ಹಾಗೂ ಸೈಡ್ ಬಿಯಲ್ಲಿನ ಇವರ ಅಭಿನಯ ಪಡ್ಡೆ ಹುಡುಗರ ನಿದ್ದೆಗೆಡಿಸುವಂತೆ ಮಾಡಿತ್ತು.
ಬಾನದಾರಿಯಲಿ ಚಿತ್ರದಲ್ಲಿ ರುಕ್ಮಿಣಿ ವಸಂತ್ ಪರಿಸರ ಪ್ರೇಮಿ ಜೊತೆಗೆ ಮಕ್ಕಳ ಸ್ವೀಮಿಂಗ್ ಕೋಚ್ ಪಾತ್ರಕ್ಕೆ ಜೀವ ತುಂಬಿದರು. ಈ ಚಿತ್ರದಲ್ಲಿ ರುಕ್ಮಿಣಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡರೆ, ಸಪ್ತಸಾಗರದಾಚೆ ಎಲ್ಲೋ ಚಿತ್ರದಲ್ಲಿ ಮಧ್ಯಮ ವರ್ಗದ ಹುಡುಗಿಯಾಗಿ ಕನ್ನಡ ಸಿನಿಮಾ ಪ್ರೇಮಿಗಳಿಗೆ ಇಷ್ಟ ಆದ್ರು. ಸಹಜ ನಟನೆಯಿಂದಲೇ ಪ್ರೇಕ್ಷಕರನ್ನು ಕನ್ನಡ ಚಿತ್ರರಂಗದ ಭರವಸೆ ನಟಿ ಎನಿಸಿಕೊಂಡಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಯಶಸ್ವಿ ನಟಿಯಾಗಬೇಕು ಎಂದು ಪಣ ತೊಟ್ಟಿರುವ ರಂಗಭೂಮಿ ಕಲಾವಿದೆ ಚೈತ್ರಾ ಆಚಾರ್. ಈ ಹಿಂದೆ ಆ ದೃಶ್ಯ, ಗಿಲ್ಕಿ, ತಲೆದಂಡ ಚಿತ್ರಗಳನ್ನ ಮಾಡಿದ್ದರೂ ಕೂಡ ಅವರಿಗೆ ದೊಡ್ಡ ಮಟ್ಟದ ಹೆಸರು ತಂದು ಕೊಡಲಿಲ್ಲ. ಆದರೆ ರಾಜ್ ಬಿ ಶೆಟ್ಟಿ ಅಭಿನಯದ ಟೋಬಿ ಚಿತ್ರದ ಜನ್ನಿ ಪಾತ್ರಕ್ಕೆ ಜೀವ ತುಂಬಿ ಪ್ರೇಕ್ಷಕರ ಮನ ಗೆದ್ದರು.
ರಾಜ್ ಬಿ ಶೆಟ್ಟಿ ಮಗಳಾಗಿಯೇ ಈ ಚಿತ್ರದಲ್ಲಿ ಚೈತ್ರಾ ಕಾಣಿಸಿಕೊಂಡಿದ್ದರು. ಅದ್ಭುತ ಅಭಿನಯದ ಮೂಲಕ ಜನ್ನಿ ಪಾತ್ರವನ್ನು ಚೈತ್ರಾ ಜೀವಿಸಿದ್ದರು. ಜೊತೆಗೆ ನೆನಪಿನಲ್ಲಿಯೇ ಉಳಿಯುವಂತಹ ಪಾತ್ರ ಮಾಡಿದ ಖುಷಿಯಲ್ಲೂ ಇದ್ದರು. ಅದಾಗಿ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ನಲ್ಲೂ ಇವರ ಅಭಿನಯ ಅದ್ಭುತ.
ಇನ್ನು ಲವ್ ಮಾಕ್ಟೇಲ್ ಸಿನಿಮಾದಲ್ಲಿ ತುಂಬಾ ಪ್ರೀತಿಸುವ ಹುಡುಗಿಯಾಗಿ ಕಾಣಿಸಿಕೊಂಡಿದ್ದ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ ಅಭಿನಯದ ಕೌಸಲ್ಯ ಸುಪ್ರಜಾ ರಾಮ ಚಿತ್ರದಲ್ಲಿ ಸಖತ್ ಬೋಲ್ಡ್ ಪಾತ್ರ ಮಾಡುವ ಮೂಲಕ ಕನ್ನಡಿಗರನ್ನು ರಂಜಿಸಿದರು. ಕೃಷ್ಣ ಹಾಗೂ ಬೃಂದಾ ಆಚಾರ್ ಮುಖ್ಯಭೂಮಿಕೆಯ ಈ ಚಿತ್ರದಲ್ಲಿ ಮಿಲನಾ ನಾಗರಾಜ್ ಮುತ್ತುಲಕ್ಷ್ಮಿ ಪಾತ್ರ ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ಕುಡುಕಿಯಾಗಿ ಕಾಣಿಸಿಕೊಂಡಿದ್ದ ಮಿಲನಾ ಇಲ್ಲಿ ಹೆಚ್ಚು ಸ್ಕೋರ್ ಮಾಡಿದ್ದರು. ಇದು ಮಿಲನಾ ವೃತ್ತಿಜೀವನದ ವಿಭಿನ್ನ ಪಾತ್ರವೆಂದೇ ಹೇಳಬಹುದು.
'ಟೋಬಿ' ಚಿತ್ರದ ಬಳಿಕ ರಾಜ್ ಬಿ ಶೆಟ್ಟಿ ಅಭಿನಯಿಸಿ ನಿರ್ದೇಶನ ಮಾಡಿದ ಚಿತ್ರ 'ಸ್ವಾತಿ ಮುತ್ತಿನ ಮಳೆ ಹನಿಯೇ'. ಕ್ಯಾನ್ಸರ್ ಪೀಡಿತರ ಬಗ್ಗೆ ಕತೆಯಲ್ಲಿ ರಾಜ್ ಬಿ ಶೆಟ್ಟಿ ಜೋಡಿಯಾಗಿ ಸಿರಿ ರವಿಕುಮಾರ್ ಅಭಿನಯಿಸಿದರು. ಈ ಚಿತ್ರ ಪ್ರೇಕ್ಷಕರಿಗೆ ಅಷ್ಟೊಂದು ಖುಷಿ ಕೊಡದೇ ಇದ್ರು ಸಿರಿ ರವಿಕುಮಾರ್ ನಟನೆಗೆ ಫಿದಾ ಆಗಿದ್ದರು. ರಂಗಭೂಮಿ ಹಿನ್ನೆಲೆಯಿಂದ ಬಂದ ಸಿರಿ ಈ ಚಿತ್ರವನ್ನು ತೂಗಿಸಿಕೊಂಡು ಹೋಗಿದ್ದು ಸುಳ್ಳಲ್ಲ.
ಇದನ್ನೂ ಓದಿ: 2023ರಲ್ಲಿ ಸಪ್ತಪದಿ ತುಳಿದ ಸ್ಯಾಂಡಲ್ವುಡ್ ತಾರೆಯರು ಇವರೇ..