ಸೌತ್ ಸೂಪರ್ಸ್ಟಾರ್ ನಟಿ ಸಮಂತಾ ರುತ್ ಪ್ರಭು ನಟನೆಯ ಜೊತೆಗೆ ಚಿತ್ರ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದಾರೆ. ತಮ್ಮ ಹೊಸ ಪ್ರೊಡಕ್ಷನ್ ಹೌಸ್ಗೆ 'ಟ್ರಲಲ ಮೂವಿಂಗ್ ಪಿಕ್ಚರ್ಸ್' (Tralala Moving Pictures) ಎಂಬ ಹೆಸರನ್ನು ಘೋಷಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಟಿ ಸಮಂತಾ, ತಮ್ಮ ನಿರ್ಮಾಣ ಸಂಸ್ಥೆಯ ಲೋಗೋವನ್ನು ಅನಾವರಣಗೊಳಿಸಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ಪ್ರೇಕ್ಷಕರಿಗೆ ಹತ್ತಿರವಾಗಿರುವ ಸ್ಯಾಮ್, ಇದೀಗ ತಮ್ಮದೇ ನಿರ್ಮಾಣ ಸಂಸ್ಥೆ ಪ್ರಾರಂಭಿಸಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ.
'ನನ್ನ ಪ್ರೊಡಕ್ಷನ್ ಹೌಸ್ ಅನ್ನು ಘೋಷಿಸಲು ಉತ್ಸುಕಳಾಗಿದ್ದೇನೆ. 'ಟ್ರಲಲ ಮೂವಿಂಗ್ ಪಿಕ್ಚರ್ಸ್' ಎಂಬ ಕ್ಯಾಪ್ಶನ್ನೊಂದಿಗೆ ಲೋಗೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ನಿರ್ಮಾಣ ಸಂಸ್ಥೆಯ ಉದ್ದೇಶವನ್ನು ಬಹಿರಂಗಪಡಿಸಿದ್ದಾರೆ. "ನವ ಯುಗದ ಅಭಿವ್ಯಕ್ತಿ ಮತ್ತು ಚಿಂತನೆಯ ಕಂಟೆಂಟ್ಗಳನ್ನು ಪ್ರತಿನಿಧಿಸುವುದು ನಮ್ಮ ನಿರ್ಮಾಣ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ನಮ್ಮ ಸಾಮಾಜಿಕ ರಚನೆಯ ಶಕ್ತಿ ಮತ್ತು ಸಂಕೀರ್ಣತೆಯ ಬಗ್ಗೆ ಮಾತನಾಡುವ ಕಥೆಗಳನ್ನು ಆಹ್ವಾನಿಸುವ ಮತ್ತು ಪ್ರೋತ್ಸಾಹಿಸುವ ಪೋಷಿಸುವ ಸ್ಥಳ ಮತ್ತು ಅರ್ಥಪೂರ್ಣ, ನೈಜ ಮತ್ತು ಜಾಗತಿಕ ಕಥೆಗಳನ್ನು ಹೇಳಲು ಚಿತ್ರ ತಯಾರಕರಿಗೆ ವೇದಿಕೆ" ಎಂದು ಹೇಳಿದ್ದಾರೆ.
ಸಮಂತಾ ಆಯ್ಕೆ 'ಟ್ರಲಲ' ಹೆಸರೇಕೆ?: ಸಮಂತಾ ತಮ್ಮ ನಿರ್ಮಾಣ ಸಂಸ್ಥೆಗೆ 'ಟ್ರಲಲ ಮೂವಿಂಗ್ ಪಿಕ್ಚರ್ಸ್' ಎಂಬ ಹೆಸರನ್ನು ನೀಡಿದ್ದಾರೆ. 'ಟ್ರಲಲ' ಎಂಬುದು ವಿಭಿನ್ನ ಹೆಸರು. ತಮ್ಮ ಪ್ರೊಡಕ್ಷನ್ ಹೌಸ್ಗೆ ಈ ಹೆಸರನ್ನು ಇಡಲು ಕಾರಣವನ್ನೂ ಸಮಂತಾ ಬಹಿರಂಗಪಡಿಸಿದ್ದಾರೆ. 'ಬ್ರೌನ್ ಗರ್ಲ್ ಈಸ್ ಇನ್ ದಿ ರಿಂಗ್ ನೌ' ಎಂಬ ಹಾಡಿನಿಂದ ಪ್ರೇರಿತರಾಗಿ ಈ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಬಾಲ್ಯದಿಂದಲೇ ಈ ಹಾಡನ್ನು ಕೇಳುತ್ತಾ ಬೆಳೆದಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ.
ಸಮಂತಾ ತಮ್ಮ ನಿರ್ಮಾಣ ಸಂಸ್ಥೆಗಾಗಿ ಹೈದರಾಬಾದ್ ಮೂಲಕ ಎಂಟರ್ಟೈನ್ಮೆಂಟ್ ಕಂಪೆನಿ 'ಮಾಂಡೋವಾ ಮೀಡಿಯಾ ವರ್ಕ್ಸ್' ಜೊತೆ ಪಾಲುದಾರಿಕೆ ಒಪ್ಪಂದ ಹಾಕಿದ್ದಾರೆ. "ಸಿನಿಮಾ ಜಗತ್ತಿನಲ್ಲಿ ಅಪಾರ ಅನುಭವ ಹೊಂದಿರುವವರ ಜೊತೆ ಪಾಲುದಾರರಾಗಲು ನಾವು ಉತ್ಸುಕರಾಗಿದ್ದೇವೆ. ನಮ್ಮ ನಿರ್ಮಾಣ ಸಂಸ್ಥೆಯಲ್ಲಿ ಸಿನಿಮಾ, ವೆಬ್, ಟಿವಿ ಅಲ್ಲದೇ ಬೇರೆ ಬೇರೆ ಸ್ವರೂಪಗಳಲ್ಲಿ ಕಂಟೆಂಟ್ ರಚಿಸಲು ಚಿಂತನೆ ನಡೆಸಿದ್ದೇವೆ" ಎನ್ನುತ್ತಾರೆ 'ಮಾಂಡೋವಾ ಮೀಡಿಯಾ ವರ್ಕ್ಸ್'ನ ಸಂಸ್ಥಾಪಕ ಹಿಮಾಂಕ್ ದುವೂರು.
ನಟನೆ ಜೊತೆ ನಿರ್ಮಾಣಕ್ಕೆ ಮುಂದಾದ ಸ್ಯಾಮ್: ನಟಿಯಾಗಿ ಮಾತ್ರವಲ್ಲದೇ ನಿರ್ಮಾಪಕಿಯಾಗಿಯೂ ಮಿಂಚಲು ಸಮಂತಾ ಸಿದ್ಧರಾಗಿದ್ದಾರೆ. ಭಾರತೀಯ ಚಿತ್ರರಂಗದ ಅನೇಕ ನಟಿಯರು ಈಗಾಗಲೇ ನಟನೆ ಮಾತ್ರವಲ್ಲದೇ ನಿರ್ಮಾಪಕರಾಗಿಯೂ ತಾವು ಸಮರ್ಥರು ಎಂಬುದನ್ನು ಸಾಬೀತುಪಡಿಸಿದ್ದಾರೆ. 2013ರಲ್ಲಿ ಅನುಷ್ಕಾ ಶರ್ಮಾ 'ಕ್ಲೀನ್ ಸ್ಲೇಟ್ ಫಿಲ್ಮ್' ಎಂಬ ಹೆಸರಿನ ಸ್ವಂತ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದರು. 2015ರಲ್ಲಿ ಪ್ರಿಯಾಂಕಾ ಚೋಪ್ರಾ 'ಪರ್ಪಲ್ ಪೆಬಲ್ ಪಿಕ್ಚರ್ಸ್' ಎಂಬ ಪ್ರೊಡಕ್ಷನ್ ಹೌಸ್ ಶುರು ಮಾಡಿದರು. 2020ರಲ್ಲಿ ಕಂಗನಾ ರಣಾವತ್ 'ಮಣಿಕರ್ಣಿಕಾ ಫಿಲ್ಮ್ ಪ್ರೊಡಕ್ಷನ್' ಆರಂಭಿಸಿದರು. ಇತ್ತೀಚೆಗಷ್ಟೇ ತಾಪ್ಸಿ ಪನ್ನು 'ಔಟ್ ಸೈಡರ್ ಫಿಲಂಸ್' ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಶುರು ಮಾಡಿದರು. ಇದೀಗ ಸಮಂತಾ ಕೂಡ ಅದೇ ಹಾದಿಯಲ್ಲಿ ಸಾಗಿದ್ದಾರೆ.
ಇದನ್ನೂ ಓದಿ: ಕರಣ್ ಜೋಹರ್ ನಿರ್ಮಾಣದ ಮುಂದಿನ ಸಿನಿಮಾದಲ್ಲಿ ಸಲ್ಮಾನ್ - ಸಮಂತಾ?!