'ಕಾಂತಾರ'.. ಇಡೀ ಭಾರತೀಯ ಚಿತ್ರರಂಗ ಕಂಡ ಅತ್ಯದ್ಭುತ ಕನ್ನಡ ಸಿನಿಮಾ. ನಿರ್ದೇಶಕ, ನಟ ರಿಷಬ್ ಶೆಟ್ಟಿ ಸ್ವಯಂ ನಿರ್ದೇಶಿಸಿ, ನಟಿಸಿ ವಿಶ್ವದಾದ್ಯಂತ ಸೈ ಎನಿಸಿಕೊಂಡ ಚಿತ್ರವಿದು. ಅಮೋಘ ಕಥೆಯೊಂದಿಗೆ ಪ್ರತಿ ಪಾತ್ರವೂ ಅಷ್ಟೇ ಸುಂದರವಾಗಿ, ಅಚ್ಚುಕಟ್ಟಾಗಿ ಮೂಡಿಬಂದಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬ್ಲಾಕ್ಬಸ್ಟರ್ ಯಶಸ್ವಿ ಕಂಡಿದೆ. ಈ ಚಿತ್ರದಿಂದಾಗಿ ಶೆಟ್ರ ಕ್ರೇಜ್ ಕೂಡ ಹೆಚ್ಚಿದೆ. ಸಾಕಷ್ಟು ಪ್ರಶಸ್ತಿ, ಪುರಸ್ಕಾರಗಳು ಅವರ ಮುಡಿಗೇರಿವೆ. ಸ್ಟಾರ್ ತಾರೆಯರಿಂದ ಹಿಡಿದು ಜನಸಾಮಾನ್ಯರವರೆಗೂ 'ಕಾಂತಾರ' ತಲುಪಿದೆ.
ಸದ್ಯ ಎಲ್ಲೆಡೆ 'ಕಾಂತಾರ 2' ಬಗ್ಗೆ ಮಾತುಗಳು ಕೇಳಿಬರುತ್ತಿದೆ. ಸೀಕ್ವೆಲ್ ಬದಲಿಗೆ ಕಾಂತಾರ ಪ್ರೀಕ್ವೆಲ್ ಪ್ರೇಕ್ಷಕರ ಮುಂದೆ ಬರಲಿದ್ದು, ಸಿನಿ ಪ್ರೇಮಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಈಗಾಗಲೇ ರಿಷಬ್ ಶೆಟ್ಟಿ ಅವರು ಚಿತ್ರದ ಸ್ಕ್ರಿಪ್ಟ್ ವರ್ಕ್ ಮುಗಿಸಿದ್ದಾರೆ. ಜೊತೆಗೆ ಪ್ರಿ ಪ್ರೊಡಕ್ಷನ್ ಕೆಲಸ ಕೂಡ ಮುಕ್ತಾಯವಾಗಿದೆ. ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದ್ದು, ಶೂಟಿಂಗ್ಗೆ ತಯಾರಾಗಿದೆ. 'ಕಾಂತಾರ'ಕ್ಕಿಂತ ಪ್ರೀಕ್ವೆಲ್ ಅನ್ನು ಮತ್ತಷ್ಟು ಅದ್ಧೂರಿಯಾಗಿ ನಿರ್ಮಿಸಲಾಗುತ್ತಿದೆ. ನೀವು ಈಗಾಗಲೇ ಬಿಡುಗಡೆಯಾಗಿರುವ 'ಕಾಂತಾರ'ದಲ್ಲಿ ಏನನ್ನು ನೋಡಿದ್ದೀರೋ, ಅದರ ಮೊದಲಿನ ಕಥೆಯನ್ನು ಪ್ರೀಕ್ವೆಲ್ ಹೇಳಲಿದೆ.
ಬಿಗ್ ಬಜೆಟ್ ಸಿನಿಮಾ: ಈಗಾಗಲೇ ತಿಳಿದಿರುವಂತೆ 'ಕಾಂತಾರ' ಪ್ರೀಕ್ವೆಲ್ ದೊಡ್ಡ ಮೊತ್ತದ ಬಜೆಟ್ನಲ್ಲಿ ನಿರ್ಮಾಣವಾಗಲಿದೆ. ಚಿತ್ರಕ್ಕಾಗಿ 125 ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಚಿತ್ರದ ಕಾಸ್ಟಿಂಗ್ ಕೂಡ ಅದ್ಧೂರಿಯಾಗಿರಲಿದೆಯಂತೆ. ಬೇರೆ ಭಾಷೆಯ ನಟರನ್ನೂ ಸಿನಿಮಾಗೆ ತೆಗೆದುಕೊಳ್ಳಲಾಗುತ್ತಿದೆ. ಚಿತ್ರಕ್ಕೆ ಗ್ರ್ಯಾಂಡ್ ಲುಕ್ ತರುವ ಜೊತೆಗೆ ಎಲ್ಲಾ ಭಾಷೆಗಳಲ್ಲಿಯೂ 'ಕಾಂತಾರ 2' ಅನ್ನು ಏಕಕಾಲಕ್ಕೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆಯಂತೆ. ವಿಎಫ್ಎಕ್ಸ್ಗೆ ಹೆಚ್ಚಿನ ಸ್ಕೋಪ್ ಇರಲಿದೆ ಎನ್ನಲಾಗಿದೆ. ಹಾಗಾಗಿಯೇ ಚಿತ್ರದ ಬಜೆಟ್ ರೇಂಜ್ ಕೂಡ ಹೆಚ್ಚಿದೆ ಎಂಬ ಮಾತು ಇಂಡಸ್ಟ್ರಿ ವಲಯದಲ್ಲಿ ಕೇಳಿಬರುತ್ತಿದೆ.
ಇದನ್ನೂ ಓದಿ: 'ಕಾಂತಾರ 2' ಚಿತ್ರಕ್ಕಾಗಿ 11 ಕೆ.ಜಿ ತೂಕ ಇಳಿಸಿಕೊಂಡ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ
ಚಿತ್ರ ಬಿಡುಗಡೆ ಯಾವಾಗ?: ಕಾಂತಾರ ಮೊದಲನೇ ಭಾಗದ ಬಹುತೇಕ ಚಿತ್ರೀಕರಣ ರಿಷಬ್ ಅವರ ಹುಟ್ಟೂರು ಕುಂದಾಪುರದಲ್ಲಿ ನಡೆದಿತ್ತು. ಆದರೆ, ಎರಡನೇ ಭಾಗವು ಮಂಗಳೂರಿನಲ್ಲಿ ಚಿತ್ರೀಕರಣಗೊಳ್ಳಲಿದೆ. ಭೂತರಾಧನೆಯನ್ನು ಸಿನಿಮಾದಲ್ಲಿ ಇನ್ನಷ್ಟು ಆಳವಾಗಿ ತೋರಿಸಲಾಗುವುದು. ಮುಂದಿನ ವರ್ಷ 2024ರ ಕೊನೆಯಲ್ಲಿ ಸಿನಿಮಾವನ್ನು ಪ್ರೇಕ್ಷಕರ ಮುಂದಿಡುವ ಯೋಚನೆ ಚಿತ್ರತಂಡದ್ದು.
ರಿಷಬ್ ಶೆಟ್ಟಿ ಈ ಹಿಂದೆ ಸಂದರ್ಶನವೊಂದರಲ್ಲಿ ಕಾಂತಾರ 2 ಚಿತ್ರಕ್ಕೆ ಸಂಬಂಧಿಸಿದಂತೆ ಕೆಲ ವಿಷಯಗಳನ್ನು ಹಂಚಿಕೊಂಡಿದ್ದರು. ನಿಸರ್ಗದ ಹಿನ್ನೆಲೆಯಲ್ಲಿ ಚಿತ್ರೀಕರಣಗೊಂಡ ಮೊದಲ ಭಾಗದ ಕಥೆ ಎಲ್ಲಿ, ಹೇಗೆ ಆರಂಭವಾಯಿತು ಎಂದು ಕಾಂತಾರ ಪ್ರೀಕ್ವೆಲ್ನಲ್ಲಿ ತೋರಿಸಲಾಗುವುದು ಎಂದು ತಿಳಿಸಿದ್ದರು. ಇನ್ನು ಚಿತ್ರದಲ್ಲಿ ಕರಾವಳಿ ಜನತೆ ಅಪಾರ ನಂಬಿಕೆ ಇಟ್ಟಿರುವ ದೈವ ಪಂಜುರ್ಲಿಗೆ ಸಂಬಂಧಿಸಿದ ದೃಶ್ಯಗಳೂ ಸಹ ಹೆಚ್ಚು ಇರಲಿವೆ ಎನ್ನಲಾಗಿದೆ. ಈ ಮಧ್ಯೆ ಚಿತ್ರಕ್ಕಾಗಿ ನಿರ್ದೇಶಕ, ನಟ ರಿಷಬ್ ಶೆಟ್ಟಿ ಕುದುರೆ ಸವಾರಿ ತರಬೇತಿ ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಇದನ್ನೂ ಓದಿ: ರಿಷಬ್ ಶೆಟ್ಟಿ ಕೈತುಂಬಾ ಸೈಮಾ ಪ್ರಶಸ್ತಿ; ವಿಡಿಯೋ ಶೇರ್ ಮಾಡಿದ ಡಿವೈನ್ ಸ್ಟಾರ್- ನೋಡಿ