ಭಾರತೀಯ ಚಿತ್ರರಂಗದ ಬೆಳ್ಳಿ ತೆರೆ ಮೇಲೆ ವಿಜೃಂಭಿಸಿದ ನಟ ರೆಬೆಲ್ ಸ್ಟಾರ್ ಅಂಬರೀಶ್. ಬೇಸ್ ವಾಯ್ಸ್, ನೇರ ಮಾತುಗಳಿಂದಲೇ ರೆಬೆಲ್ ಸ್ಟಾರ್ ಅಂತಾ ಕರೆಸಿಕೊಂಡ ಇವರು ಅಭಿಮಾನಿಗಳ ನೆಚ್ಚಿನ ನಟ. ಇವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಮಂಡ್ಯದ ಗಂಡು ಬದುಕಿದ್ದರೆ ಇಂದು ಸಾವಿರಾರು ಅಭಿಮಾನಿಗಳ ಜೊತೆ 71ನೇ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದರು. ಕಲಿಯುಗ ಕರ್ಣನ ಬಗ್ಗೆ ಸಾಕಷ್ಟು ಕುತೂಹಲದ ವಿಷ್ಯಗಳಿವೆ.
1) ರಿಯಲ್ ಲೈಫ್‌ನಲ್ಲೂ ಆರತಿಯನ್ನು ಚುಡಾಯಿಸ್ತಿದ್ದರಂತೆ: ಅಂಬರೀಶ್ ಚಿತ್ರರಂಗಕ್ಕೆ ಕಾಲಿಟ್ಟಿದ್ದು 'ನಾಗರಹಾವು' ಸಿನಿಮಾ ಮೂಲಕ. ವಿಷ್ಣುವರ್ಧನ್ ಅವರು ಹೀರೋ ಆಗಿ ಈ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದ್ದರು. ಅಂಬಿ ವಿಲನ್ ಆಗಿ ಈ ಸಿನಿಮಾ ಮುಖೇನ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದರು. ಅಂಬಿಯದ್ದು ಈ ಮೂವಿಯಲ್ಲಿ ಚಿಕ್ಕಪಾತ್ರವಾಗಿದ್ರೂ ದೊಡ್ಡಮಟ್ಟದ ಹೆಸರು, ಅವಕಾಶ ತಂದುಕೊಟ್ಟಿತು.
ನಿಮಗೆ ಗೊತ್ತೇ ಇದೆ ಅಂಬಿ 'ನಾಗರಹಾವು' ಸಿನಿಮಾದಲ್ಲಿ ನಟಿ ಆರತಿ ಅವರನ್ನು ಚುಡಾಯಿಸುವ ದೃಶ್ಯವಿದೆ. ಆದರೆ ಅಂಬಿ ಈ ಸಿನಿಮಾದಲ್ಲಿ ನಟಿಸುವ ಮೊದಲೇ ಆರತಿಯನ್ನು ಚುಡಾಯಿಸುತ್ತಿದ್ದರು! ಅಂಬಿ ಮತ್ತು ಆರತಿ ಓದಿದ್ದು ಒಂದೇ ಕಾಲೇಜಿನಲ್ಲಿ. ಕಾಲೇಜು ಕ್ಯಾಂಪಸ್ನಲ್ಲಿ ಆರತಿ ಎದುರಾಗಿದ್ದಾಗ ಅಂಬಿ ಯಾವಾಗಲೂ ಆರತಿ ಅವರನ್ನು ಚುಡಾಯಿಸುತ್ತಿದ್ದರಂತೆ. ಕಾಕತಾಳೀಯ ಅನ್ನುವಂತೆ ಅಂಬಿ ತನ್ನ ಮೊದಲ ಸಿನಿಮಾದಲ್ಲಿ ಆರತಿಯನ್ನು ಚುಡಾಯಿಸುವ 'ಜಲೀಲ'ನ ಪಾತ್ರ ಮಾಡಿದ್ದರು.
2) 120 ಇಡ್ಲಿ ತಿಂದಿದ್ದ ಅಂಬಿ: ಮನೆಯಲ್ಲಿ ಇಡ್ಲಿ ಮಾಡಿದಾಗ 120 ಇಡ್ಲಿ ಅಂಬಿಗೇ ಬೇಕಿತ್ತಂತೆ. ದೋಸೆ ಮಾಡಿದ್ರೆ ಕಡಿಮೆ ಅಂದ್ರೂ 45 ದೋಸೆ ತಿನ್ನುತ್ತಿದ್ದರಂತೆ. ಚಿಕ್ಕಂದಿನಲ್ಲಿ ಇದೇ ವಿಷಯಕ್ಕೆ ಅಣ್ಣ ತಮ್ಮಂದಿರಲ್ಲಿ ಗಲಾಟೆ ಆಗ್ತಿತ್ತಂತೆ.
3) ಅಂಬಿಯೇ ಫಸ್ಟ್ : ಅಂಬಿ ಆಟ, ಪಾಠ ಎರಡರಲ್ಲೂ ಫಸ್ಟ್. ಶಾಲಾ ದಿನಗಳಲ್ಲಿ ಎಲ್ಲ ಆಟಗಳಲ್ಲೂ ಭಾಗವಹಿಸುತ್ತಿದ್ದ ಅಂಬಿ ಓದಿನಲ್ಲೂ ಮುಂದಿದ್ದರಂತೆ. ಗಣಿತದಲ್ಲಿ 100ಕ್ಕೆ 100 ಅಂಕ ಸಿಗುತ್ತಿತ್ತಂತೆ.
4) ಪಿಯುಸಿ ಫೇಲ್ : ಓದಿನಲ್ಲಿ ಸದಾ ಮುಂದಿದ ಅಂಬಿ ಪಿಯುಸಿಯಲ್ಲಿ ಫಸ್ಟ್ ಟೈಮ್ ಫೇಲ್ ಆಗಿದ್ದರಂತೆ.
5) ಸ್ನೇಹಿತನನ್ನು ಅಣ್ಣ ಅಂತ ಕರ್ಕೊಂಡು ಹೋಗಿದ್ರು: ಪಿಯುಸಿಯಲ್ಲಿ ಫೇಲ್ ಆದಾಗ ಪ್ರಾಂಶುಪಾಲರು ಪೋಷಕರನ್ನು ಕರ್ಕೊಂಡು ಬಾ ಅಂದಾಗ, ತನ್ನ ಗೆಳೆಯನನ್ನೇ ಅಣ್ಣಾ ಅಂತ ಕರ್ಕೊಂಡು ಹೋಗಿದ್ದರಂತೆ ಅಂಬಿ. ಒಂದು ದಿನ ಅಂಬಿಯ ನಿಜವಾದ ಅಣ್ಣ, ಕಾಲೇಜಿಗೆ ಬಂದಾಗ ಅಂಬಿಯ ಬಣ್ಣ ಬಯಲಾಗಿತ್ತಂತೆ.
6) ಅಂಬಿಗೆ ಪ್ರಪೋಸ್ ಮಾಡಿದ್ದ ಅಂಬಿಕಾ: ನಟಿ ಅಂಬಿಕಾ ಅಂಬರೀಶ್ ಅವರಿಗೆ ಪ್ರಪೋಸ್ ಮಾಡಿದ್ದರಂತೆ. ಚಕ್ರವ್ಯೂಹ ಸಿನಿಮಾದ ಚಳಿಚಳಿ ತಾಳೆನು ಹಾಡು ಈಗಲೂ ಎಲ್ಲರ ಫೇವರೆಟ್ ಆಗಿಯೇ ಉಳಿದಿದೆ. ಇದರಲ್ಲಿ ಅಂಬಿ ಮತ್ತು ಅಂಬಿಕಾ ಒಟ್ಟಿಗೆ ನಟಿಸಿದ್ದರು. ರಿಯಲ್ ಲೈಫ್ನಲ್ಲಿ ಅಂಬಿಕಾ ಅಂಬಿಗೆ ಪ್ರಪೋಸ್ ಮಾಡಿದ್ದರು. ಆದರೆ ಅಂಬರೀಶ್ ನಯವಾಗಿ ನಿರಾಕರಿಸಿದ್ದರಂತೆ.
7) ಮಂಡ್ಯ ಮಿಠಾಯಿ, ಮೊಟ್ಟೆ, ಕೈಮಾ ಸಾರು!: ಮೈಸೂರಿನ ಕಾರೆಮನೆ ಗೇಟ್‌ನಲ್ಲಿರುವ ಮಿಠಾಯಿ ಅಂಗಡಿ ಬೆಳಕಿಗೆ ಬಂದಿದ್ದೇ ರೆಬಲ್‌ಸ್ಟಾರ್ ಅಂಬರೀಷ್ ಅವರಿಂದ. ಇಲ್ಲಿನ ತೆಂಗಿನಕಾಯಿ, ಬೆಲ್ಲದ ಮಿಠಾಯಿ ಎಂದರೆ ಅಂಬರೀಶ್ ಅಚ್ಚುಮೆಚ್ಚಂತೆ.
8) ಕಾರು ಕೊಡಿಸದಿದ್ದಕ್ಕೆ ಮನೆ ಬಿಟ್ಟು ಹೋಗಿದ್ದರು: ಅಪ್ಪ ಕಾರು ಕೊಡಿಸಲಿಲ್ಲ ಎನ್ನುವ ಕಾರಣಕ್ಕೆ ಅಂಬರೀಶ್ ಗಲಾಟೆ ಮಾಡಿ ಮನೆಬಿಟ್ಟು ಸುಮಾರು ಏಳು ತಿಂಗಳ ಕಾಲ ಮೈಸೂರಿನಲ್ಲೇ ಇದ್ದರು. ಆಗ ಅವರು ನಮ್ಮ ಮನೆಯಲ್ಲಿ ಬಂದು ನೆಲೆಸಿದ್ದರು. ಕೊನೆಗೂ ಅವರ ಅಪ್ಪ ಕಾರು ಖರೀದಿಸಲು ದುಡ್ಡು ಕೊಟ್ಟ ಬಳಿಕ ಮನೆಗೆ ವಾಪಸಾಗಿದ್ದರು. ಮೊದಲು ಖರೀದಿಸಿದ ಕಾರು ಹೆರಾಲ್ಡ್ ಅದರ ನಂಬರ್ 1011. ಆ ಬಳಿಕ ಆರು ತಿಂಗಳಿಗೊಂದರಂತೆ ಕಾರು ಬದಲಾಯಿಸುತ್ತಿದ್ದರು ಎಂದು ಅಂಬಿ ಆಪ್ತರೊಬ್ಬರು ಸಂದರ್ಶನದ ವೇಳೆ ಹೇಳಿದ್ದರು.
9) ಸಿಗರೇಟ್ ಬಿಟ್ರೆ ಎರಡು ದಿನ ಹೆಚ್ಚು ಬದುಕು ಅಷ್ಟೇ- ಅಂಬಿ: ಅಂಬರೀಶ್ ಆಪ್ತರು ಅಂಬಿ ಸಿಗರೇಟಿನ ಹವ್ಯಾಸದ ಬಗ್ಗೆ ಕೆಲ ವಿಷಯವನ್ನು ತಿಳಿಸಿದ್ದಾರೆ. ಸಿಗರೇಟಿನ ಹೊಗೆ, ಸ್ವಲ್ಪ ಕೆಮ್ಮು, ಅದ್ಯಾಕೋ ಕಣ್ಣಿನಿಂದ ಆಗಾಗ್ಗೆ ನೀರು ತೊಟ್ಟಿಕ್ಕುತ್ತಿತ್ತು. ಕೈಗೆಟಕುವಂತೆಯೇ ಒಂದು ಟವೆಲ್ ಇಟ್ಟುಕೊಂಡಿದ್ದ ಅವರು ಕಣ್ಣೀರು ಒರೆಸುತ್ತಿದ್ದರು. ಡ್ರಿಂಕ್ಸ್ ಬಿಟ್ಟಿದ್ದರು. ಈ ಸಿಗರೇಟ್ ಏಕೆ ಬಿಟ್ಟಿಲ್ಲ? ಎಂದು ಮಾತಿನ ಮಧ್ಯೆ ಕೇಳಿದ್ದೆ. ಆಗ ಸಿಗರೇಟ್ ಬಿಡಬೇಕೂಂತ ಇದ್ದೆ, ಬಿಟ್ಟಿದ್ದರೆ 2 ದಿನ ಹೆಚ್ಚು ಬದುಕುತ್ತೀನಿ, ಇಲ್ಲವೆಂದರೆ ಎರಡು ದಿನ ಮೊದಲು ಹೋಗ್ತೀನಿ ಅಷ್ಟೇ ಕಣೋ ಅಂತಿದ್ದರು ಎಂದಿದ್ದಾರೆ.
10) ನಿರ್ಮಾಪಕರಿಗೆ ಕಲಿಯುಗ ಕರ್ಣ : ಅಂಬಿಯ ಬೌನ್ಸಾದ ಚೆಕ್ಗಳನ್ನು ಲೆಕ್ಕ ಹಾಕಿದರೆ ಏಳು ಕೋಟಿ ರೂಪಾಯಿ ಹೆಚ್ಚು ಅಂತಾ ಅಂಬರೀಶ್ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಹೀಗಾಗಿ ನಿರ್ಮಾಪಕರಿಗೆ ಅಂಬಿ ಕಲಿಯುಗ ಕರ್ಣ.
ಇದನ್ನೂ ಓದಿ: 'ಸ್ವಾತಂತ್ರ್ಯ ವೀರ ಸಾವರ್ಕರ್' ಚಿತ್ರದ ಟೀಸರ್ ರಿಲೀಸ್