ಹಿಂದಿ ಚಿತ್ರರಂಗದ ಸೂಪರ್ಸ್ಟಾರ್ ನಟ ರಣ್ವೀರ್ ಸಿಂಗ್. ಕಳೆದೆರಡು ವರ್ಷಗಳಿಂದ ಹಿಟ್ ಚಿತ್ರಗಳನ್ನು ನೀಡುತ್ತಾ ವೃತ್ತಿ ಜೀವನದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ. ಇತ್ತೀಚೆಗೆ ಅವರ ನಟನೆಯ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ ಬ್ಲಾಕ್ಬಸ್ಟರ್ ಆಗಿತ್ತು. ಇದೀಗ ನಟನ ಕುರಿತ ಸುದ್ದಿಯೊಂದು ಹೊರಬಿದ್ದಿದೆ. ಮುಂಬೈನಲ್ಲಿರುವ ಎರಡು ಐಷಾರಾಮಿ ಅಪಾರ್ಟ್ಮೆಂಟ್ಗಳನ್ನು ಅವರು ದೊಡ್ಡ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ.
ವರದಿಗಳ ಪ್ರಕಾರ, ರಣ್ವೀರ್ ಸಿಂಗ್ ಇತ್ತೀಚೆಗೆ ಮುಂಬೈನ ವೆಸ್ಟರ್ನ್ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿರುವ ಎರಡು ಅದ್ಧೂರಿ ಅಪಾರ್ಟ್ಮೆಂಟ್ಗಳನ್ನು ಮಾರಾಟ ಮಾಡಿದ್ದಾರೆ. ಈ ಎರಡು ಅಪಾರ್ಟ್ಮೆಂಟ್ಗಳ ಒಟ್ಟು ಮೌಲ್ಯ 15.25 ಕೋಟಿ ರೂಪಾಯಿ. ಈ ಮನೆಗಳು ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿನ ಒಬೆರಾಯ್ ಮಾಲ್ ಬಳಿಯ ಗೋರೆಗಾಂವ್ ಪೂರ್ವದಲ್ಲಿರುವ ಒಬೆರಾಯ್ ಎಕ್ಕ್ವಿಸೈಟ್ ಕಟ್ಟಡದ 43ನೇ ಮಹಡಿಯಲ್ಲಿವೆ.
1,324 ಚದರ ಅಡಿಗಳಷ್ಟು ವಿಸ್ತಾರವಾಗಿರುವ ಈ ಅಪಾರ್ಟ್ಮೆಂಟ್ಗಳು ಆರ್ ಪಾರ್ಕಿಂಗ್ ಸ್ಥಳಗಳನ್ನು ಹೊಂದಿದೆ. ಪ್ರತಿ ಅಪಾರ್ಟ್ಮೆಂಟ್ಗೆ ನಟ 45.75 ಲಕ್ಷ ಸ್ಟ್ಯಾಂಪ್ ಡ್ಯೂಟಿ ಪಡೆದಿದ್ದಾರೆ ಎಂದು ವರದಿಯಾಗಿದೆ. ಈ ಅಪಾರ್ಟ್ಮೆಂಟ್ ಅನ್ನು ಅದೇ ಪ್ರದೇಶದ ವ್ಯಕ್ತಿಯೊಬ್ಬರು ಖರೀದಿಸಿದ್ದಾರೆ. ನವೆಂಬರ್ 6ರ ಮುಂಚಿತವಾಗಿ ನಟ ಈ ಅಪಾರ್ಟ್ಮೆಂಟ್ಗಳನ್ನು ಮಾರಾಟ ಮಾಡಿದ್ದಾರೆ. ಕಳೆದ ವರ್ಷ ರಣ್ವೀರ್ ಸಿಂಗ್ ಬಾಂದ್ರಾ ವೆಸ್ಟ್ನಲ್ಲಿ 119 ಕೋಟಿಗೆ ಕ್ವಾಡ್ರಪ್ಲೆಕ್ಸ್ ಅನ್ನು ಖರೀದಿಸಿದ್ದರು ಎಂಬುದು ಗಮನಿಸಬೇಕಾದ ಸಂಗತಿ.
ಇದನ್ನೂ ಓದಿ: ಟ್ರೋಲ್ಸ್ಗೆ ಡೋಂಟ್ ಕೇರ್: ಟ್ರೋಲರ್ಗಳನ್ನೇ ಟ್ರೋಲ್ ಮಾಡಿದ ದೀಪಿಕಾ ಪಡುಕೋಣೆ!
ರಣ್ವೀರ್ ಸಿಂಗ್ ಅವರ ಸಿನಿಮಾ ವಿಚಾರವಾಗಿ ನೋಡುವುದಾದರೆ, ನಟ ಕೊನೆಯದಾಗಿ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದಲ್ಲಿ ಕಾಣಿಸಿಕೊಂಡರು. ಅವರ ಮುಂಬರುವ ಚಿತ್ರ 'ಸಿಂಗಮ್ ಎಗೈನ್'. ಜನಪ್ರಿಯ ಸಾಹಸ ಚಿತ್ರಗಳ ನಿರ್ದೇಶಕ ರೋಹಿತ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಬಹು ನಿರೀಕ್ಷಿತ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಅಜಯ್ ದೇವ್ಗನ್, ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್, ಟೈಗರ್ ಶ್ರಾಫ್ ನಟಿಸುತ್ತಿದ್ದಾರೆ.
ಈ ಹಿಂದಿನ ಸಿಂಗಮ್ 1 ಮತ್ತು 2 ಪ್ರೇಕ್ಷಕರಿಗೆ ಕಂಪ್ಲೀಟ್ ಎಂಟರ್ಟೈನ್ಮೆಂಟ್ ಕೊಡುವಲ್ಲಿ ಯಶ ಕಂಡಿದೆ. ಮೂರನೇ ಕಂತಿನಲ್ಲಿ ಬಿಗ್ ಸ್ಟಾರ್ ಕಾಸ್ಟ್ ಇದ್ದು, ಪ್ರೇಕ್ಷಕರ ಕುತೂಹಲ - ನಿರೀಕ್ಷೆ ದ್ವಿಗುಣಗೊಂಡಿದೆ. ಈ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ 'ಸಿಂಗಮ್ 3' 2024ರ ಆಗಸ್ಟ್ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಇತ್ತೀಚೆಗೆ ನಟ ತಮ್ಮ ಪತ್ನಿ ದೀಪಿಕಾ ಪಡುಕೋಣೆ ಜೊತೆ ಕಾಫಿ ವಿತ್ ಕರಣ್ ಟಾಕ್ ಶೋನಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ದೀಪಿಕಾ-ರಣ್ವೀರ್ ಟ್ರೋಲ್ ಮಾಡಿದವರ ವಿರುದ್ಧ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೆಟ್ ಗರಂ