ಬೆಂಗಳೂರು: ಅಕ್ಟೋಬರ್ 21ರಂದು ನಗರದ ಅರಮನೆ ಮೈದಾನದಲ್ಲಿ ನಡೆಯಲಿರುವ ಪುನೀತ್ ಪರ್ವ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದಿ. ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಆಹ್ವಾನ ನೀಡಿದ್ದಾರೆ.
ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ಅಧಿಕೃತ ನಿವಾಸಕ್ಕೆ ರಾಜ್ ಕುಟುಂಬ ಸದಸ್ಯರು ಭೇಟಿ ನೀಡಿದ್ದರು. ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಮತ್ತು ರಾಘವೇಂದ್ರ ರಾಜ್ಕುಮಾರ್ ಸಿಎಂ ಭೇಟಿ ಮಾಡಿ, ದಿ. ಡಾ. ಪುನೀತ್ ರಾಜ್ಕುಮಾರ್ ಅಭಿನಯದ ಗಂಧದ ಗುಡಿ ಪ್ರೀ ರಿಲೀಸ್ ಇವೆಂಟ್ ಪುನೀತ್ ಪರ್ವಕ್ಕೆ ಆಗಮಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಸೇರಿದಂತೆ ಮತ್ತಿತರರು ಹಾಜರಿದ್ದರು.
ಇದನ್ನೂ ಓದಿ: 67ನೇ ಫಿಲ್ಮ್‌ಫೇರ್ ಅವಾರ್ಡ್ಸ್: ಡಾಲಿ ಧನಂಜಯ್ ಅತ್ಯುತ್ತಮ ನಟ ಪ್ರಶಸ್ತಿ, ಜೀವಮಾನ ಸಾಧನೆಗಾಗಿ ಪುನೀತ್ಗೆ ಪ್ರಶಸ್ತಿಯ ಕಿರೀಟ
ಸಿಎಂ ಭೇಟಿ ಬಳಿಕ ಮಾತನಾಡಿದ ನಟ ರಾಘವೇಂದ್ರ ರಾಜ್ಕುಮಾರ್, ಅಶ್ವಿನಿ ಅವರ ನಾಯಕತ್ವದಲ್ಲಿ ಅಕ್ಟೋಬರ್ 21ರಂದು ಪುನೀತ್ ಪರ್ವ ಕಾರ್ಯಕ್ರಮ ನಡೆಯಲಿದೆ. ಅಪ್ಪು ಅವರು ಇಷ್ಟಪಟ್ಟು ಮಾಡಿದ ಕೊನೇ ಸಿನಿಮಾ ಅಕ್ಟೋಬರ್ 28ರಂದು ರಿಲೀಸ್ ಆಗಲಿದೆ. ಪ್ರತಿಯೊಬ್ಬರಿಗೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದೆ. ದಕ್ಷಿಣ ಭಾರತದ ನಟ, ನಟಿಯರಿಗೆ ಆಹ್ವಾನ ನೀಡಿದ್ದೇವೆ ಇನ್ನೂ ಕೆಲವರ ಹೆಸರು ಡಿಸ್ಕಷನ್ನಲ್ಲಿದೆ. ಬಳಿಕ ಯಾರು ಕಾರ್ಯಕ್ರಮಕ್ಕೆ ಬರಲಿದ್ದಾರೆ ಅನ್ನೋದು ಅಂತಿಮವಾಗಲಿದೆ. ಪ್ರತಿಯೊಬ್ಬರಿಗೂ ಕಾರ್ಯಕ್ರಮಕ್ಕೆ ಅವಕಾಶ ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.