ಪವರ್ಸ್ಟಾರ್ ಪುನೀತ್ ರಾಜ್‍ಕುಮಾರ್ ಅಂದ್ರೆ ಅಭಿಮಾನಿಗಳ ಪಾಲಿಗೆ ಆರಾಧ್ಯ ದೈವ. ಕೊಟ್ಯಂತರ ಜನರು ತಮ್ಮ ಹೃದಯಾಳದಲ್ಲಿ ನಟನನ್ನು ಇಂದಿಗೂ ಪೂಜಿಸುತ್ತಿದ್ದಾರೆ. ಅಪ್ಪು ಹಿರಿಯ ಸಹೋದರ ರಾಘವೇಂದ್ರ ರಾಜ್‍ಕುಮಾರ್ ಕೂಡ ಇದರಿಂದ ಹೊರತಾಗಿಲ್ಲ. ಅಭಿಮಾನಿಗಳಂತೆ ಅವರೂ ಕೂಡ ತಮ್ಮ ಎದೆ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಭಾವನಾತ್ಮಕ ಸಂಬಂಧ ಪ್ರದರ್ಶಿಸಿದ್ದಾರೆ.
ಅಪ್ಪು ಅಂದ್ರೆ ರಾಘಣ್ಣನಿಗೆ ಪಂಚಪ್ರಾಣ. ಬಾಲ್ಯದಿಂದಲೂ ಅನ್ಯೋನ್ಯ ಸಂಬಂಧ ಹೊಂದಿದ್ದರು. ಯಾವುದೇ ಕೆಲಸ ಮಾಡಬೇಕಾದರೂ ಪುನೀತ್ ಅವರು ರಾಘಣ್ಣನ ಸಲಹೆ ಮತ್ತು ಸೂಚನೆ ಕೇಳುತ್ತಿದ್ದರಂತೆ. ಅವರ ನಟನೆಯ ಮೊದಲ ಸಿನಿಮಾದ 'ಅಪ್ಪು' ಚಿತ್ರಕಥೆಯನ್ನು ರಾಘಣ್ಣನ ಹತ್ತಿರ ಕೇಳಿ ಫೈನಲ್ ಮಾಡಿದ್ದರು ಅನ್ನೋದು ಹಳೆಯ ಮಾತು. ಅಲ್ಲದೇ ರಾಘಣ್ಣನಿಗೆ ಆರೋಗ್ಯ ಸಮಸ್ಯೆ ಎದುರಾದಾಗ ಸಂಪೂರ್ಣ ಹೆಗಲು ಕೊಟ್ಟವರು ಕೂಡ ಇದೇ ಪುನೀತ್ ರಾಜ್‍ಕುಮಾರ್. ಸಾಲದೆಂಬಂತೆ ಅಣ್ಣನಿಗಾಗಿ ಅವರ ಇಷ್ಟದಂತೆ ಸದಾಶಿವನಗರದಲ್ಲಿ ಮನೆ ಕಟ್ಟಿಸಿಕೊಟ್ಟಿದ್ದು, ಆಗಾಗ ಮನೆಗೆ ಭೇಟಿ ಕೊಟ್ಟು ಅಣ್ಣನ ಆರೋಗ್ಯ ವಿಚಾರಿಕೊಳ್ಳುತ್ತಿದ್ದರು ಅನ್ನೋದು ಕೂಡ ಇದೀಗ ನೆನಪು ಮಾತ್ರ. ಹಾಗಾಗಿ ಅಪ್ಪು ಅಂದ್ರೆ ರಾಘಣ್ಣನಿಗೆ ಅಚ್ಚುಮೆಚ್ಚು.
ತಮ್ಮನ ಮೇಲಿನ ಅಪಾರ ಪ್ರೀತಿ ಹಾಗೂ ಗೌರವದ ದ್ಯೋತಕವಾಗಿ ಇದೀಗ ತಮ್ಮ ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಎಲ್ಲರಂತೆ ರಾಘವೇಂದ್ರ ರಾಜ್‍ಕುಮಾರ್ ಅಪ್ಪುವಿನ ದೊಡ್ಡ ಅಭಿಮಾನಿ. ಪ್ರತಿದಿನವೂ ಅಪ್ಪುವಿನ ಭಾವಚಿತ್ರವನ್ನು ತಮ್ಮ ಶರ್ಟ್ಗೆ ಸಿಕ್ಕಿಸಿಕೊಂಡು ಓಡಾಡುತ್ತಿದ್ದರು. ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಎದೆಯ ಮೇಲೆ ಅಪ್ಪು ಭಾವಚಿತ್ರ ಇದ್ದೇ ಇರುತ್ತಿತ್ತು. ಆದರೆ, ಈಗ ರಾಘವೇಂದ್ರ ರಾಜ್‍ಕುಮಾರ್ ಅವರು ತಮ್ಮ ಆರೋಗ್ಯ ಸಮಸ್ಯೆಗಳ ನಡುವೆಯೂ ಸಹೋದರ ಪುನೀತ್ ಹಾಗೂ ಅವರ ಮಕ್ಕಳ ಹೆಸರನ್ನು ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ.
ಅಪ್ಪು, ಟೊಟೊ ಮತ್ತು ನುಕ್ಕಿ ಎಂದು ಮೂರು ಹೆಸರುಗಳನ್ನು ತಮ್ಮ ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದು ಈ ಫೋಟೋ ಇದೀಗ ಜಾಲತಾಣದಲ್ಲಿ ವೈರಲ್ ಆಗಿವೆ. ತಮಗೆ ಹಚ್ಚೆ ಹಾಕಿದ ಯುವ ಟ್ಯಾಟೂ ಆರ್ಟಿಸ್ಟ್ ಜೊತೆಗೂ ರಾಘವೇಂದ್ರ ರಾಜ್‍ಕುಮಾರ್ ಫೋಟೊ ತೆಗೆಸಿಕೊಂಡಿದ್ದು ಇದನ್ನು ನೋಡಿದ ಅಪ್ಪು ಅಭಿಮಾನಿಗಳು, ಅವರ ಪ್ರೀತಿಯನ್ನು ಕೊಂಡಾಡುತ್ತಿದ್ದಾರೆ. ಟೊಟೊ ಹಾಗೂ ನುಕ್ಕಿ ಎಂಬುದು ಅಪ್ಪು ಅವರ ಇಬ್ಬರು ಹೆಣ್ಣು ಮಕ್ಕಳ ನಿಕ್ ನೇಮ್. ಪುನೀತ್ ರಾಜ್‍ಕುಮಾರ್ ಕಾಲವಾದ ಬಳಿಕ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ಗೆ ರಾಘವೇಂದ್ರ ರಾಜ್‍ಕುಮಾರ್ ಹಾಗೂ ಅವರ ಮಕ್ಕಳು ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ. ಅಪ್ಪು ಅವರ ಇಬ್ಬರು ಹೆಣ್ಣು ಮಕ್ಕಳ ಬಗ್ಗೆಯಂತೂ ರಾಘಣ್ಣನಿಗೆ ಮೊದಲಿನಿಂದಲೂ ಬಹಳ ಮಮಕಾರವಿದೆ.
ಅಪ್ಪು ಕಾಲವಾದ ಸಂದರ್ಭದಲ್ಲಿ ಅವರ ಮಕ್ಕಳನ್ನು ನೆನೆದು ರಾಘವೇಂದ್ರ ರಾಜ್‍ಕುಮಾರ್ ಬಹಳ ದುಖಃ ವ್ಯಕ್ತಪಡಿಸಿದ್ದರು. ಈಗ ರಾಘವೇಂದ್ರ ರಾಜ್‍ಕುಮಾರ್ ಎದೆ ಮೇಲಿನ ಹಚ್ಚೆ ನೋಡಿದ ರಾಜವಂಶದ ಅಭಿಮಾನಿಗಳು ದೊಡ್ಮನೆ ಬಗ್ಗೆ ಮತ್ತಷ್ಟು ಗೌರವ ದುಪ್ಪಟ್ಟಾಗಿದೆ.
ಇದನ್ನೂ ಓದಿ: ವಿವಾಹದ ಸ್ಥಳಾನ್ವೇಷಣೆ ಮಾಡುತ್ತಿರುವ ಪರಿಣಿತಿ: ಸೋದರಿಯಂತೆ ರಾಜಸ್ಥಾನದಲ್ಲಿ ಸಪ್ತಪದಿ ತುಳಿಯಲಿದ್ದಾರಾ ಚೋಪ್ರಾ?