ನಿನ್ನೆಯಷ್ಟೇ ಕಿಚ್ಚ 46ನೇ ಸಿನಿಮಾದ ಟೀಸರ್ ಬಿಡುಗಡೆಯಾಗಿತ್ತು. ಈ ಬೆನ್ನಲ್ಲೆ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿರುದ್ಧ ನಿರ್ಮಾಪಕ ಎನ್ ಎಂ ಕುಮಾರ್ ಆರೋಪ ಮಾಡಿದ್ದಾರೆ. ನನ್ನ ಜೊತೆ ಸಿನಿಮಾ ಮಾಡ್ತೇನಿ ಎಂದು ಸುದೀಪ್ ಮುಂಗಡ ಹಣ ಪಡೆದು ಬಳಿಕ ಯಾವುದೇ ಪ್ರತಿಕ್ರಿಯೆ ನೀಡ್ತಿಲ್ಲ ಎಂದು ಎನ್ ಎಂ ಕುಮಾರ್ ಆರೋಪಿಸಿದ್ದಾರೆ.
ಚಲನ ಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, "ನಾನು ಈಗಾಗಲೇ ಸುದೀಪ್ ಜೊತೆಗೆ ಹಲವು ಸಿನಿಮಾ ಮಾಡಿದ್ದೇನೆ. ಸುಮಾರು 8 ವರ್ಷದಿಂದ ಅವರ ಜೊತೆ ಒಂದು ಸಿನಿಮಾ ಮಾಡಬೇಕಿತ್ತು. 'ಮುತ್ತತ್ತಿ ಸತ್ಯರಾಜ್' ಚಿತ್ರ ಮಾಡೋಣ ಎಂದು ಒಪ್ಪಿಕೊಂಡಿದ್ದರು. ನನ್ನ ಕಡೆಯಿಂದ ಇನ್ನೊಬ್ಬರಿಗೆ ಅಡ್ವಾನ್ಸ್ ಕೂಡ ಕೊಡಿಸಿದ್ದಾರೆ. ನಿರ್ದೇಶಕ ನಂದ ಕಿಶೋರ್ ಅವರನ್ನು ಸುದೀಪ್ ಅವರೇ ಕರೆಸಿದ್ದರು. ಹೈದರಾಬಾದ್ನಿಂದ ರೈಟರ್ನ ಕರೆಸಿ ಅಂದ್ರು. ಹಾಗಂತ ಕರೆಸಿದ್ರೆ ಅವರು ಭೇಟಿಯೂ ಮಾಡ್ಲಿಲ್ಲ. ಮನೆ ಹತ್ರ ಹೋದ್ರೆ ಮಾತಾಡೋಕು ಸಿಗೋದಿಲ್ಲ ಎಂದು ಆರೋಪಿಸಿದ್ದಾರೆ.
'ದುಡ್ಡು ಕೊಟ್ಟು ನಾವೇ ಬೇಡ್ಬೇಕು.. ಚಿತ್ರರಂಗ ಉಳಿಯಬೇಕಾದ್ರೆ ನಿರ್ಮಾಪಕರು ಇರಲೇಬೇಕು. ಅವ್ರಿಗೆ ಹೀಗಾದ್ರೆ ಹೇಗೆ? ನಾನು 200 ಸಿನಿಮಾ ರಿಲೀಸ್ ಮಾಡಿದ್ದೀನಿ. ಇವರು ನೋಡಿದ್ರೆ ಸಿನಿಮಾ ಮಾಡ್ತೀನಿ ಅಂತ ಹೇಳಿ ಮಾತನಾಡುತ್ತಿಲ್ಲ. ದುಡ್ಡು ಕೊಟ್ಟು ನಾವು ಅವರ ಹತ್ತಿರ ಬೇಡಿಕೊಳ್ಳಬೇಕು. ಸುದೀಪ್ ಲೈವ್ ಬಂದರೆ ನಾನು ಪ್ರತಿ ದಾಖಲೆ ಕೊಡುತ್ತೇನೆ ಎಂದು ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಮುಕುಂದ ಮುರಾರಿ ಸಿನಿಮಾಕ್ಕೂ ಮೊದಲೇ ಹಣ ಕೊಟ್ಟಿದ್ದು ಪೈಲ್ವಾನ್, ಕೋಟಿಗೊಬ್ಬ 3 ಅದ್ಮೆಲೆ ಮಾಡ್ತಿನಿ ಅಂತ ಹೇಳಿದ್ರು. ಆಗ ಮಾಡಲಿಲ್ಲ. ಬಳಿಕ ವಿಕ್ರಾಂತ್ ರೋಣ ಆದ್ಮೇಲೆ ನಿಮ್ಮದೇ ಮಾಡೋದು ಅಂತ ಹೇಳಿದ್ರು, ಆದರೆ, ಸಿನಿಮಾ ರಿಲೀಸ್ ಆಗಿ ಒಂದು ವರ್ಷ ಆಯಿತು ಸುದ್ದಿನೇ ಇಲ್ಲ ಎಂದು ಕುಮಾರ್ ಹೇಳಿದ್ದಾರೆ.
ನನಗೆ ಆಗಿರೋ ಅನ್ಯಾಯಗಳು ಇನ್ನೋಬ್ರಿಗೆ ಆಗಬಾರದು. ರನ್ನ ಪ್ರಾಬ್ಲಮ್ ಆದಾಗ ಇದೇ ಫಿಲ್ಮ್ ಚೇಂಬರ್ಗೂ ಬಂದಿದ್ರು ಸುದೀಪ್. ಈಗ ಸುದೀಪ್ ಫಿಲ್ಮ್ ಚೇಂಬರ್ಗೆ ಬಂದು ಸಮಸ್ಯೆಯನ್ನ ಇತ್ಯರ್ಥ ಮಾಡಿಕೊಳ್ಳಲಿ ಎಂದು ನಿರ್ಮಾಪಕ ಕುಮಾರ್ ಮನವಿ ಮಾಡಿದ್ದಾರೆ.
"ಇನ್ನು ನಾನು ಬುಧವಾರದವರೆಗೂ ಕಾಯುತ್ತೇನೆ. ಫಿಲ್ಮ್ ಚೇಂಬರ್ ಹಾಗೂ ನಿರ್ಮಾಪಕ ಸಂಘದಲ್ಲಿ ಏನು ತೀರ್ಮಾನ ಮಾಡುತ್ತಾರೆ ಅಂತ ನೋಡುತ್ತೇನೆ. ಆಮೇಲೆ ಸುದೀಪ್ ಮನೆ ಮುಂದೆ ನನಗೆ ನ್ಯಾಯ ಸಿಗೋವರೆಗೂ ಧರಣಿ ಕೂರ್ತಿನಿ" ಎಂದು ಅವರು ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಇದನ್ನೂ ಓದಿ: Sudeep 46: 'ನಾನು ಮನುಷ್ಯ ಅಲ್ಲ ರಾಕ್ಷಸ' - ಕಿಚ್ಚ ಸುದೀಪ್ ಹೊಸ ಸಿನಿಮಾದ ಟೀಸರ್ ರಿಲೀಸ್, ರಗಡ್ ಲುಕ್‌ನಲ್ಲಿ ಅಬ್ಬರ!