ಕನ್ನಡದಲ್ಲಿ ಒಳ್ಳೆ ಕಂಟೆಂಟ್ ಇರುವ ಚಿತ್ರಗಳು ಬರ್ತಾ ಇದ್ದು, ಸಿನಿ ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸುತ್ತಿವೆ. ಇದೀಗ ಇಂತಹದ್ದೇ ಕಂಟೆಂಟ್ ಹೊಂದಿರುವ 'ಪ್ರೆಸೆಂಟ್ ಪ್ರಪಂಚ 0% ಲವ್' ಚಿತ್ರ ಬರುತ್ತಿದೆ. ಈ ಸಿನಿಮಾದ ಆಲ್ ಮೋಸ್ಟ್ ಚಿತ್ರೀಕರಣ ಮುಗಿಸಿರೋ ಚಿತ್ರಂಡ ತಮ್ಮ ಸಿನಿಮಾದ ವಿಶೇಷತೆ ಬಗ್ಗೆ ಹಂಚಿಕೊಂಡಿದೆ. ರೊಮ್ಯಾಂಟಿಕ್ ಥ್ರಿಲ್ಲರ್ ಕಥಾಹಂದರ ಹೊಂದಿರುವ 'ಪ್ರೆಸೆಂಟ್ ಪ್ರಪಂಚ 0% ಲವ್' ಚಿತ್ರ ಸಿನಿ ಪ್ರಿಯರಿಗೆ ಇಷ್ಟ ಆಗುವ ಸೂಚನೆ ಸಿಗ್ತಾ ಇದೆ.
ಸಿನಿಮಾ ಬಗ್ಗೆ ಮಾತನಾಡಿದ ದ್ವಿತೀಯ ನಾಯಕ ಯಶಸ್ ಅಭಿ, "ಪ್ರೆಸೆಂಟ್ ಪ್ರಪಂಚದಲ್ಲಿ ಎಲ್ಲದಕ್ಕಿಂತ ಪ್ರೀತಿನೇ ಮುಖ್ಯ ಎಂಬುದೇ ಚಿತ್ರದ ಪ್ರಮುಖ ಕಥಾಹಂದರ. ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕ 0% ಪ್ರೀತಿ ಎಂದುಕೊಂಡು ಬಂದರೆ, ಹೋಗುವಾಗ 100% ಪ್ರೀತಿ ಹೊತ್ತಿಕೊಂಡು ಹೋಗುವುದು ಖಚಿತ. ನಾಯಕ ಹಾಗೂ ನಿರ್ದೇಶಕರ ನಿಧನದಿಂದ ನಮ್ಮ ತಂಡಕ್ಕೆ ತುಂಬಾ ಆಘಾತವಾಗಿತ್ತು. ಆದರೆ ಈ ಚಿತ್ರ ಅವರಿಬ್ಬರ ಕನಸಿನ ಕೂಸು. ಚಿತ್ರವನ್ನು ಪೂರ್ತಿ ಮಾಡಿ, ತೆರೆಗೆ ತರೋಣ ಎಂದು ನಾನು, ನಿರ್ಮಾಪಕರಿಗೆ ಹೇಳಿದೆ. ನನ್ನ ಹಾಗೂ ನಮ್ಮ ತಂಡದ ಕೋರಿಕೆಗೆ ಸ್ಪಂದಿಸಿದ ನಿರ್ಮಾಪಕರಿಗೆ ಧನ್ಯವಾದ. ಚಿತ್ರದಲ್ಲಿ ನನ್ನ ಪಾತ್ರ ಕೂಡ ಚೆನ್ನಾಗಿದೆ" ಎಂದರು.
ಬಳಿಕ ನಾಯಕಿ ಸಂಭ್ರಮ ಶ್ರೀ ಮಾತನಾಡಿ, "ಮದುವೆಯಾದ ಮೇಲೆ ಗಂಡ - ಹೆಂಡತಿ ನಡುವೆ ಭಿನ್ನಾಭಿಪ್ರಾಯಗಳು ಬರುವುದು ಸಹಜ. ಅದು ವಿಚ್ಛೇದನದ ತನಕ ಹೋಗಬಾರದು ಎಂಬುದನ್ನು ನಮ್ಮ ಚಿತ್ರದಲ್ಲಿ ತೋರಿಸಲಾಗಿದೆ" ಎಂದು ತಿಳಿಸಿದರು. ಇನ್ನೂ ಕೊರೊನಾ ಸಮಯದಲ್ಲಿ ಈ ಚಿತ್ರದ ನಿರ್ದೇಶಕ ಅಭಿರಾಮ್ ಹಾಗೂ ನಾಯಕ ಅರ್ಜುನ್ ಮಂಜುನಾಥ್ ಕೊರೊನಾಗೆ ಬಲಿಯಾಗಿದ್ದರು.
ಈ ಬಗ್ಗೆ ಮಾತನಾಡಿದ ನಿರ್ಮಾಪಕ ಕೃಷ್ಣಮೂರ್ತಿ ಕೆ.ಎಲ್, "ನಿರ್ದೇಶಕನಿಗೆ ತನ್ನ ಚಿತ್ರವೇ ಸರ್ವಸ್ವ. ನಮ್ಮ ಚಿತ್ರದ ನಿರ್ದೇಶಕ ಅಭಿರಾಮ್ ಅವರಿಗೂ ಈ ಚಿತ್ರದ ಬಗ್ಗೆ ಅಪಾರ ಪ್ರೀತಿ. ಆದರೆ ವಿಧಿ, ಚಿತ್ರ ಬಿಡುಗಡೆಗೆ ಮುನ್ನವೇ ನಿರ್ದೇಶಕ ಅಭಿರಾಮ್ ಹಾಗೂ ನಾಯಕ ಅರ್ಜುನ್ ಮಂಜುನಾಥ್ ಇಬ್ಬರನ್ನು ಬಲಿ ತೆಗೆದುಕೊಂಡಿದೆ. ಅವರಿಬ್ಬರ ಅನುಪಸ್ಥಿತಿ ತುಂಬಾ ಕಾಡುತ್ತಿದೆ. ಇಬ್ಬರು ಚಿತ್ರೀಕರಣ ಹಾಗೂ ಡಬ್ಬಿಂಗ್ ಮುಗಿಯುವ ತನಕ ಜೊತೆಗಿದ್ದರು. ಆಮೇಲೆ ಯಾರು ನಿರೀಕ್ಷಿಸದ್ದು ನಡೆದು ಹೋಯಿತು. ಆನಂತರ ದ್ವಿತೀಯ ನಾಯಕ ಯಶಸ್ ಅಭಿ ಸೇರಿದಂತೆ ಚಿತ್ರತಂಡದ ಸದಸ್ಯರ ಸಹಕಾರದಿಂದ ಸಿನಿಮಾ ಪೂರ್ಣವಾಗಿದೆ. ಸದ್ಯದಲ್ಲೇ ಬಿಡುಗಡೆ ಮಾಡುವ ಯೋಜನೆ ಇದೆ" ಎಂದು ಹೇಳಿದರು.
ಈ ಚಿತ್ರದಲ್ಲಿ ಯಶಸ್ ಅಭಿ ಹಾಗೂ ಸಂಭ್ರಮ ಶ್ರೀ ಅಲ್ಲದೇ ನಟರಾದ ಗೋವಿಂದೇ ಗೌಡ, ಕುರಿ ಸುನೀಲ್ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ರವಿತೇಜಸ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ಸಾಹಿತಿ ಹಾಗೂ ನಿರ್ದೇಶಕ ರಾಮ್ ನಾರಾಯಣ್ ಮುಂತಾದ ಗಣ್ಯರು ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರೋ ಪ್ರೆಸೆಂಟ್ ಪ್ರಪಂಚ ೦% ಲವ್ ಚಿತ್ರವನ್ನು ನಿರ್ಮಾಪಕರಾದ ಕೃಷ್ಣಮೂರ್ತಿ ಹಾಗೂ ರವಿಕುಮಾರ್ ಇಬ್ಬರು ಸೇರಿ ನಿರ್ಮಿಸಿದ್ದಾರೆ. ನಾಗರಾಜ್ ಹೊಸಳ್ಳಿ ಹಾಗೂ ದೇವರಾಜ್ ಅವರ ಸಹ ನಿರ್ಮಾಣವೂ ಇದೆ. ಟ್ರೇಲರ್ ನಿಂದ ಗಮನ ಸೆಳೆಯತ್ತಿರೋ ಪ್ರೆಸೆಂಟ್ ಪ್ರಪಂಚ ೦% ಲವ್ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.
ಇದನ್ನೂ ಓದಿ: ಕಟೀಲು ದುರ್ಗಾಪರಮೇಶ್ವರಿ ದೇವಿಗೆ ಹರಕೆ ಸೀರೆ ಒಪ್ಪಿಸಿದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ