ಸಾಹಸಸಿಂಹ, ಹೃದಯವಂತ ಹೀಗೆ ಹಲವಾರು ಹೆಸರುಗಳಿಂದ ಕರೆಯಿಸಿಕೊಂಡ ಏಕೈಕ ನಟ ದಿ. ಡಾ. ವಿಷ್ಣುವರ್ಧನ್. ವಿಭಿನ್ನ ಪಾತ್ರಗಳಲ್ಲಿನ ಅಭಿನಯ ಹಾಗು ಹೃದಯವಂತಿಕೆಯಿಂದ ಕೋಟ್ಯಂತರ ಅಭಿಮಾನಿಗಳ ಮನಸ್ಸಿನಲ್ಲಿ ಯಜಮಾನನಾಗಿ ಉಳಿದಿದ್ದಾರೆ. ವಿಷ್ಣುವರ್ಧನ್ ಅವರು ನಮ್ಮೊಂದಿಗಿದ್ದಿದ್ದರೆ ನಾಳೆ 72ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಇದೀಗ ವಿಷ್ಣು ಸೇನಾ ಸಮಿತಿ ವತಿಯಿಂದ 72ನೇ ಜನ್ಮದಿನವನ್ನು ವಿಶೇಷವಾಗಿ ಆಚರಣೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಸೆಪ್ಟೆಂಬರ್ 18 ವಿಷ್ಣುವರ್ಧನ್ ಹುಟ್ಟಿದ ದಿನ, ಮತ್ತೊಂದು ಕಡೆ ಡಿಸೆಂಬರ್ 29ಕ್ಕೆ ವಿಷ್ಣು ಚಿತ್ರರಂಗಕ್ಕೆ ಬಂದು 50 ವರ್ಷಗಳು ಪೂರೈಸಲಿವೆ. ಈ ಹಿನ್ನೆಲೆಯಲ್ಲಿ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಸಮಾಧಿ ಬಳಿ ಸಾಹಸ ಸಿಂಹರ ಪ್ರಮುಖ ಸಿನಿಮಾಗಳ 50 ಕಟೌಟ್ಗಳು ರಾರಾಜಿಸುತ್ತಿವೆ.
ಈಗಾಗಲೇ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುದಾದ ಅಭಿನಯಿಸಿರೋ ನಾಗರಹಾವು, ಕರ್ಣ, ಸಾಹಸ ಸಿಂಹ, ಮಲೆಯ ಮಾರುತ ಸಿನಿಮಾಗಳ ಕಟೌಟ್ಗಳನ್ನು ನಿಲ್ಲಿಸಲಾಗಿದೆ. 50 ಸಿನಿಮಾಗಳ 40 ಅಡಿ ಎತ್ತರದ ಕಟೌಟ್ಗಳನ್ನು ಅಭಿಮಾನ್ ಸ್ಟುಡಿಯೋದಲ್ಲಿ ಡಾ.ವಿಷ್ಣುವರ್ಧನ್ ಸೇನಾ ಸಮಿತಿ ನಿಲ್ಲಿಸುತ್ತಿದೆ. ಒಂದೇ ಜಾಗದಲ್ಲಿ 40 ಅಡಿಯ ಕಟೌಟ್ಗಳನ್ನು ಹಾಕುತ್ತಿರುವುದು ಇದೇ ಮೊದಲು. ಅಷ್ಟೇ ಅಲ್ಲ ಭಾರತೀಯ ಚಿತ್ರರಂಗದಲ್ಲಿ ಹುಟ್ಟು ಹಬ್ಬಕ್ಕೆ 50 ಕಟೌಟ್ಗಳನ್ನ ಹಾಕಿಸಿಕೊಳ್ಳುತ್ತಿರುವ ಮೊದಲ ನಟ ಎಂಬ ಹೆಗ್ಗಳಿಕೆಗೆ ದಿ. ಡಾ. ವಿಷ್ಣುವರ್ಧನ್ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ವಿಷ್ಣುವರ್ಧನ್ ಜನ್ಮದಿನ ಆಚರಣೆಗೆ ಸಿದ್ಧತೆ.. ಒಂದೇ ಜಾಗದಲ್ಲಿ 40 ಅಡಿ ಎತ್ತರದ 50 ಕಟೌಟ್
ಕನ್ನಡ ಚಿತ್ರರಂಗದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಅಭಿನಯಿಸಿ ಕನ್ನಡಿಗರ ಮನ ಗೆದ್ದಿರುವ ವಿಷ್ಣುವರ್ಧನ್ 200ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಅಂದಿನ ಕಾಲದಲ್ಲಿ ಎಡಗೈ ಬಳಸುವವರನ್ನು ಬೇರೆ ರೀತಿಯಲ್ಲಿ ನೋಡಲಾಗುತ್ತಿತ್ತು. ಅದನ್ನೇ ಬಳಸಿಕೊಂಡು ಕನ್ನಡ ಚಿತ್ರರಂಗದಲ್ಲಿ ದಾದಾ ಹೊಸ ಟ್ರೆಂಡ್ ಸೃಷ್ಟಿ ಮಾಡಿದ್ದರು. ಇವರ ಸಿನಿಮಾಗಳನ್ನು ನೋಡಿದ ಅದೆಷ್ಟೋ ಮಂದಿ ಇವರ ಎಡಗೈ ಸ್ಟೈಲ್ ಅನ್ನು ಅಳವಡಿಸಿಕೊಂಡರು. ಹೀಗೆ ಹಲವಾರು ವಿಚಾರವಾಗಿ ವಿಷ್ಣುವರ್ಧನ್ ಅವರನ್ನು ಇಂದಿಗೂ ನೆನಪಿಸಿಕೊಳ್ಳುತ್ತಿದ್ದು, ನಾಳೆ ಅವರನ್ನು ಸ್ಮರಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ.