ವಿನಯ್ ರಾಜ್ಕುಮಾರ್ ನಟನೆಯ 'ಒಂದು ಸರಳ ಪ್ರೇಮಕಥೆ' ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. ಹೊಸ ವರ್ಷದ ನಿಮಿತ್ತ ನಿರ್ದೇಶಕ ಸಿಂಪಲ್ ಸುನಿ ಸಂಗೀತ ಪ್ರಿಯರಿಗೆ ಚೆಂದದ ಹಾಡೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. 'ನೀನ್ಯಾರೆಲೆ.. ನಿನಗಾಗಿಯೇ.. ಈ ಜೀವ ಭಾವ ಸೋಜಿಗ..' ಎಂಬ ಸುಮಧುರ ಸಾಲುಗಳುಳ್ಳ ಹಾಡು ಇದಾಗಿದ್ದು ಸಿನಿ ಪ್ರಿಯರ ಮನ ಸೆಳೆಯುತ್ತಿದೆ. ಸಿದ್ದು ಕೋಡಿಪುರ ಹಾಗೂ ಸುನಿ ಸಾಹಿತ್ಯದ ಈ ಹಾಡಿಗೆ ಅರ್ಮಾನ್ ಮಲಿಕ್ ಧ್ವನಿಯಾಗಿದ್ದಾರೆ.
ಸಿಂಪಲ್ ಸುನಿ ಇದೇ ಮೊದಲ ಬಾರಿಗೆ ದೊಡ್ಮನೆ ಹುಡ್ಗ ವಿನಯ್ ರಾಜ್ಕುಮಾರ್ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಗಾಂಧಿ ನಗರ ಸೇರಿ ಸ್ಯಾಂಡಲ್ವುಡ್ ಬಳಗ ಚಿತ್ರದ ಬಿಡುಗಡೆಗಾಗಿ ಕಾದು ಕುಳಿತಿದೆ. ವಿನಯ್ ನಾಯಕನಾಗಿ ನಟಿಸುತ್ತಿದ್ದರೆ, ಅವರಿಗೆ ಸ್ವಾತಿಷ್ಠ ಕೃಷ್ಣನ್ ಮತ್ತು ರಾಧಾ ಕೃಷ್ಣ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ಎಂಬ ಇಬ್ಬರು ಚೆಲುವೆಯರು ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ರಾಘವೇಂದ್ರ ರಾಜ್ಕುಮಾರ್ ಸ್ಪೆಷಲ್ ರೋಲ್ನಲ್ಲಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದ ತಾರಾಬಳಗ ಚಿತ್ರದಲ್ಲಿದೆ. ಆದಿ ಅವರ ಸಂಕಲನವಿದ್ದು, ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ಹಾಗೂ ಕಾರ್ತಿಕ್ ಅವರ ಕ್ಯಾಮರಾ ಶ್ರಮವಿದೆ.
ತಮ್ಮ ವಿಭಿನ್ನ ಸಿನಿಮಾಗಳಿಂದ ನಿರ್ದೇಶಕ ಸಿಂಪಲ್ ಸುನಿ ಗಮನ ಸೆಳೆದವರು. 'ಅವತಾರ್ ಪುರುಷ', 'ಗತವೈಭವ' ಚಿತ್ರವನ್ನು ನೀಡಿದ ಸಿಂಪಲ್ ಸುನಿ, ಇದೀಗ 'ಒಂದು ಸರಳ ಪ್ರೇಮಕಥೆ' ಶುರು ಮಾಡಿದ್ದಾರೆ. ಚಿತ್ರೀಕರಣ ಭಾಗಶಃ ಮುಗಿದಿದ್ದು ಚಿತ್ರತಂಡ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾಗೆ ಮೈಸೂರು ರಮೇಶ್ ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: 'ಒಂದು ಸರಳ ಪ್ರೇಮಕಥೆ'ಯಲ್ಲಿ ಮಗನೊಂದಿಗೆ ತೆರೆ ಹಂಚಿಕೊಂಡ ರಾಘವೇಂದ್ರ ರಾಜ್ಕುಮಾರ್
ಇತ್ತೀಚೆಗಷ್ಟೇ ಸಿನಿಮಾ ಬಗ್ಗೆ ಕೆಲ ಮಾಹಿತಿ ಹಂಚಿಕೊಂಡಿದ್ದ ನಿರ್ದೇಶಕ ಸುನಿ, "ಟೈಟಲ್ ಹೇಳುವಂತೆ ಇದೊಂದು ಸರಳ ಪ್ರೇಮಕಥೆ. ಸಂಗೀತ ನಿರ್ದೇಶಕನ ಪ್ರೇಮ ಕಥೆಯಾಗಿರುವುದರಿಂದ ಇದೊಂದು ಸಂಗೀತಮಯ ಜರ್ನಿ ಆಗಿದೆ. ಚಿತ್ರದಲ್ಲಿ ಒಟ್ಟು 11 ಹಾಡುಗಳಿವೆ. ಎಲ್ಲ ಪ್ರಕಾರದ ಸಂಗೀತಗಳು ಹಾಡಿನಲ್ಲಿದೆ. ಖುಷಿ ವಿಷಯ ಏನಂದ್ರೆ, ಮೊದಲ ದಿನ ವಿನಯ್ ಸರ್ಗೆ ಆ್ಯಕ್ಷನ್ ಕಟ್ ಹೇಳಿರುವೆ. ಕೊನೆಯ ದಿನ ರಾಘಣ್ಣ ಅವರ ಚಿತ್ರೀಕರಣ ಮಾಡಿದ್ದೇನೆ. ದೊಡ್ಮನೆ ಕುಟುಂಬದ ಜೊತೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ. ಒಟ್ಟು 83 ದಿನ ಶೂಟ್ ನಡೆಸಿದ್ದೇವೆ. ಮುಂಬೈ, ರಾಜಸ್ಥಾನ, ಬೆಂಗಳೂರು, ಮೈಸೂರಿನಲ್ಲಿ ಚಿತ್ರೀಕರಣ ಮಾಡಿದ್ದೇನೆ" ಎಂದು ತಿಳಿಸಿದ್ದರು.